ಅತಿ ಹೆಚ್ಚು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸುವ ಭಾರತವನ್ನು, ಆ ದೇಶವು ಈಗ ‘ಅತ್ಯಧಿಕ ಅಪಾಯ’ (Highest Risk) ಅಥವಾ ಅಸೆಸ್‌ಮೆಂಟ್ ಲೆವೆಲ್ 3 (AL3) ವರ್ಗಕ್ಕೆ ಸೇರಿಸಿದೆ.
ಇದರ ಪರಿಣಾಮವಾಗಿ, ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಲು ಬಯಸುವ ಭಾರತೀಯ ವಿದ್ಯಾರ್ಥಿಗಳು ಇನ್ನು ಮುಂದೆ ಸಂಕಷ್ಟ ಎದುರಿಸಲಿದ್ದಾರೆ. ಅವರು ವೀಸಾಗಾಗಿ ಹೆಚ್ಚಿನ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ ಮತ್ತು ಅವರ ಅರ್ಜಿಗಳ ಪರಿಶೀಲನೆಯು (scrutiny) ಮತ್ತಷ್ಟು ಕಠಿಣವಾಗಲಿದೆ.
ಆಸ್ಟ್ರೇಲಿಯಾದ ವೀಸಾ ಮೌಲ್ಯಮಾಪನದಲ್ಲಿ ಪ್ರಮುಖವಾಗಿ ಮೂರು ಹಂತಗಳಿವೆ: AL1 (ಅತಿ ಕಡಿಮೆ ಅಪಾಯ), AL2 (ಮಧ್ಯಮ ಅಪಾಯ) ಮತ್ತು AL3 (ಅತ್ಯಧಿಕ ಅಪಾಯ). ಇಲ್ಲಿಯವರೆಗೆ AL2 ವರ್ಗದಲ್ಲಿದ್ದ ಭಾರತವನ್ನು, ಇತ್ತೀಚಿನ ಆದೇಶದನ್ವಯ AL3 ವರ್ಗಕ್ಕೆ ಇಳಿಸಲಾಗಿದೆ.
ಆಸ್ಟ್ರೇಲಿಯಾದಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಗಮನಾರ್ಹ ಸಂಗತಿ. ಅಲ್ಲಿರುವ ಒಟ್ಟು 6.50 ಲಕ್ಷ ವಿದೇಶಿ ವಿದ್ಯಾರ್ಥಿಗಳಲ್ಲಿ ಸುಮಾರು 1.40 ಲಕ್ಷ ಮಂದಿ ಭಾರತೀಯರೇ ಆಗಿದ್ದಾರೆ.
ಈ ಹೊಸ ನಿಯಮಗಳು 2026ರ ಜನವರಿ 8 ರಿಂದಲೇ ಜಾರಿಗೆ ಬಂದಿವೆ ಎಂದು ವರದಿಯಾಗಿದೆ.
