ತಮಿಳು ಸ್ಟಾರ್ ನಟ ವಿಜಯ್ ನಟನೆಯ ‘ಜನನಾಯಕನ್’ ಸಿನಿಮಾ ಸೆನ್ಸಾರ್ ಸಮಸ್ಯೆಯಿಂದಾಗಿ ಮುಂದೂಡಲ್ಪಟ್ಟಿರುವ ಸಂಗತಿ ತಿಳಿದೇ ಇದೆ. ತಮಿಳುನಾಡಿನಲ್ಲಿ ವಿಜಯ್ ರಾಜಕೀಯ ಪಕ್ಷ ಸ್ಥಾಪಿಸಿರುವ ಹಿನ್ನೆಲೆಯಲ್ಲಿ, ‘ಜನನಾಯಕನ್’ ಸಿನಿಮಾದ ಬಿಡುಗಡೆ ವಿಳಂಬವು ಈಗ ರಾಜಕೀಯ ಬಣ್ಣ ಪಡೆದುಕೊಂಡಿದೆ.
ತಾಜಾ ಬೆಳವಣಿಗೆಯಲ್ಲಿ, ಈ ವಿಷಯದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಈ ಸಿನಿಮಾವನ್ನು ಅಡ್ಡಿಪಡಿಸುವುದು ಎಂದರೆ ಅದು ತಮಿಳು ಸಂಸ್ಕೃತಿಯ ಮೇಲಿನ ದಾಳಿಯೇ ಎಂದು ರಾಹುಲ್ ಹೇಳಿದ್ದಾರೆ.
ಮಂಗಳವಾರ ಈ ಕುರಿತು ‘ಎಕ್ಸ್’ (X) ಖಾತೆಯಲ್ಲಿ ಬರೆದುಕೊಂಡಿರುವ ಅವರು, “‘ಜನನಾಯಕನ್’ ಸಿನಿಮಾವನ್ನು ತಡೆಯುವ ಮೂಲಕ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ತಮಿಳು ಸಂಸ್ಕೃತಿಯ ಮೇಲೆ ದಾಳಿ ನಡೆಸುತ್ತಿದೆ. ಮೋದಿ ಅವರೇ.. ತಮಿಳು ಜನರನ್ನು ಹತ್ತಿಕ್ಕುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ,” ಎಂದು ಟ್ವೀಟ್ ಮಾಡಿದ್ದಾರೆ.
ಕಳೆದ ವಾರವೇ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಸೆನ್ಸಾರ್ ಅಡೆತಡೆಗಳಿಂದಾಗಿ ಮುಂದೂಡಲ್ಪಟ್ಟಿದೆ. ಈ ಬಗ್ಗೆ ಕೋರ್ಟ್ ಮೆಟ್ಟಿಲೇರಿದರೂ ಸದ್ಯಕ್ಕೆ ಫಲಿತಾಂಶ ಸಿಕ್ಕಿಲ್ಲ. ಮುಂದಿನ ವಾರ ಇದರ ವಿಚಾರಣೆ ನಡೆಯಲಿದೆ. ಆದರೆ, ಕೇಂದ್ರ ಸರ್ಕಾರ ತಡೆಯೊಡ್ಡುತ್ತಿರುವುದರಿಂದಲೇ ಸಿನಿಮಾ ಮುಂದೂಡಲ್ಪಟ್ಟಿದೆ ಎಂದು ಚಿತ್ರತಂಡ ಮತ್ತು ತಮಿಳು ಚಿತ್ರರಂಗ ಆರೋಪಿಸುತ್ತಿದೆ. ಬಿಜೆಪಿ ಬೇಕಂತಲೇ ಸಿನಿಮಾವನ್ನು ನಿಲ್ಲಿಸುವ ಪ್ರಯತ್ನ ಮಾಡಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದು, ವಿಜಯ್‌ಗೆ ಬೆಂಬಲ ನೀಡಿದ್ದಾರೆ ಮತ್ತು ಕೇಂದ್ರದ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ. ಈ ಟೀಕೆಗಳಿಗೆ ಬಿಜೆಪಿ ಪ್ರತಿಕ್ರಿಯಿಸಿದೆ. ಸಿನಿಮಾಟೋಗ್ರಫಿ ಕಾಯ್ದೆ ಮತ್ತು ನಿಯಮಗಳಿಗೆ ಅನುಗುಣವಾಗಿಯೇ ಸಿನಿಮಾ ಮುಂದೂಡಲ್ಪಟ್ಟಿದೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.
