ಛತ್ರಪತಿ ಸಂಭಾಜಿನಗರ: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಾತ್ರವೇನು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನೇರ ಪ್ರಶ್ನೆ ಹಾಕಿದ್ದಾರೆ. ಜನವರಿ 15ರಂದು ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಸಂಘ ಪರಿವಾರ ಮತ್ತು ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ. ಹೆಡ್ಗೇವಾರ್ ಅವರು ಜೈಲಿಗೆ ಹೋಗಿದ್ದು ಬ್ರಿಟಿಷರ ವಿರುದ್ಧ ಹೋರಾಡಿಯಲ್ಲ, ಬದಲಿಗೆ ‘ಖಿಲಾಫತ್ ಚಳವಳಿ’ಯನ್ನು ಬೆಂಬಲಿಸಿ,” ಎಂದು ಓವೈಸಿ ಗಂಭೀರ ಆರೋಪ ಮಾಡಿದರು. ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣತ್ಯಾಗ ಮಾಡಿದ ಅಥವಾ ಜೈಲಿಗೆ ಹೋದ ಒಬ್ಬನೇ ಒಬ್ಬ ಆರ್‌ಎಸ್‌ಎಸ್ ನಾಯಕನ ಹೆಸರನ್ನು ಹೇಳಿ ಎಂದು ಅವರು ಸವಾಲು ಹಾಕಿದರು.
ನಮಗೆ ದೇಶಭಕ್ತಿಯ ಪಾಠ ಹೇಳುವ ಸಂಘ ಪರಿವಾರಕ್ಕೆ ಇತಿಹಾಸದ ಅರಿವಿಲ್ಲ. ಬ್ರಿಟಿಷರ ಎದೆಯೊಡೆದ ‘ಕ್ವಿಟ್ ಇಂಡಿಯಾ’ ಮತ್ತು ‘ಸೈಮನ್ ಗೋ ಬ್ಯಾಕ್’ನಂತಹ ಕ್ರಾಂತಿಕಾರಿ ಘೋಷಣೆಗಳನ್ನು ನೀಡಿದ್ದು ಮುಂಬೈನ ಮುಸ್ಲಿಂ ನಾಯಕ ಯೂಸುಫ್ ಮೆಹೆರಲಿ ಎಂಬುದನ್ನು ಅವರು ಮರೆತಿದ್ದಾರೆ ಎಂದು ಓವೈಸಿ ನೆನಪಿಸಿದರು.
ಛತ್ರಪತಿ ಸಂಭಾಜಿನಗರದಲ್ಲಿ ಬಾಂಗ್ಲಾದೇಶಿ ನುಸುಳುಕೋರರಿದ್ದಾರೆ ಎಂಬ ಬಿಜೆಪಿಯ ಆರೋಪಕ್ಕೆ ತಿರುಗೇಟು ನೀಡಿದ ಅವರು, “ಒಂದು ವೇಳೆ ಇಲ್ಲಿ ಅಕ್ರಮ ವಲಸಿಗರಿದ್ದರೆ ಅದು ಮೋದಿ ಸರ್ಕಾರದ ವೈಫಲ್ಯವೇ ಹೊರತು ಬೇರೇನಲ್ಲ. ಗಡಿ ಭದ್ರತೆ ಮತ್ತು ಗುಪ್ತಚರ ಇಲಾಖೆ ನಿಮ್ಮ ಕೈಯಲ್ಲಿದ್ದರೂ ನುಸುಳುಕೋರರನ್ನು ತಡೆಯಲು ಸಾಧ್ಯವಾಗಿಲ್ಲವೇಕೆ?” ಎಂದು ಪ್ರಶ್ನಿಸಿದರು.
ಅಲ್ಲದೆ, ಪೌರತ್ವವನ್ನು ಪ್ರಶ್ನಿಸುವ ಅಥವಾ ಪರಿಶೀಲಿಸುವ ಅಧಿಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಇದೆ. ಆದರೆ ಮೋದಿ ಸರ್ಕಾರವು ತನ್ನ ಜವಾಬ್ದಾರಿಯನ್ನು ಕಳೆದುಕೊಂಡು, ಈ ಕೆಲಸವನ್ನು ಚುನಾವಣಾ ಆಯೋಗದ ಹೆಗಲಿಗೆ ಕಟ್ಟಿದೆ ಎಂದು ಅವರು ಟೀಕಿಸಿದರು.
