Home ರಾಜಕೀಯ ಮನರೇಗಾ ಪುನರ್‌ಸ್ಥಾಪನೆಗಾಗಿ ರಾಜ್ಯವ್ಯಾಪಿ ಹೋರಾಟ: ಸಿಎಂ ಸಿದ್ದರಾಮಯ್ಯ

ಮನರೇಗಾ ಪುನರ್‌ಸ್ಥಾಪನೆಗಾಗಿ ರಾಜ್ಯವ್ಯಾಪಿ ಹೋರಾಟ: ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ಮನರೇಗಾ ಕಾಯ್ದೆಯನ್ನು ಪುನರ್‌ಸ್ಥಾಪಿಸಿ, ವಿಬಿಜಿ ರಾಮ್ ಜಿ ಕಾಯ್ದೆಯನ್ನು ರದ್ದುಗೊಳಿಸುವವರೆಗೆ ಹೋರಾಟ ಮುಂದುವರಿಯಲಿದೆ. ಇದು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ನಡೆಯುವ ಜನಾಂದೋಲನವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ನಡೆದ *“ಮನರೇಗಾ ಉಳಿಸಿ ಹೋರಾಟ”*ದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಭಾರತದಲ್ಲಿ ರೈತರು ಕಾಯ್ದೆಗಳ ಬದಲಾವಣೆಗೆ ನಡೆಸಿದ ಹೋರಾಟದಂತೆ ಈ ಹೋರಾಟವೂ ತೀವ್ರವಾಗಲಿದೆ ಎಂದರು.

ಮನರೇಗಾ ರದ್ದುಪಡಿಸಿರುವುದನ್ನು ಎಐಸಿಸಿ ಕಾರ್ಯಕಾರಿ ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಸರ್ಕಾರ ಮನರೇಗಾ ಕಾಯ್ದೆಯನ್ನು ರದ್ದುಗೊಳಿಸಿ ವಿಬಿಜಿ ರಾಮ್ ಜಿ ಎಂಬ ಹೊಸ ಕಾಯ್ದೆಯನ್ನು ಜಾರಿಗೆ ತಂದಿದೆ. ಮಹಾತ್ಮ ಗಾಂಧಿಯ ಹೆಸರೇ ಕೆಲವರಿಗೆ ಅಲರ್ಜಿ ಉಂಟುಮಾಡುತ್ತದೆ ಎಂದು ಕಿಡಿಕಾರಿದರು.

ಮನಮೋಹನ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಗ್ರಾಮೀಣ ಬಡವರಿಗೆ ಉದ್ಯೋಗ ಹಕ್ಕು ನೀಡುವ ಉದ್ದೇಶದಿಂದ ಮನರೇಗಾ ಕಾಯ್ದೆ ಜಾರಿಗೆ ತರಲಾಯಿತು. ಆಹಾರ ಭದ್ರತೆ, ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಅರಣ್ಯವಾಸಿಗಳ ಹಕ್ಕುಗಳಂತಹ ಜನಪರ ಕಾಯ್ದೆಗಳು ಆ ಅವಧಿಯಲ್ಲಿ ರೂಪುಗೊಂಡವು ಎಂದರು.

20 ವರ್ಷಗಳಿಂದ ಜಾರಿಯಲ್ಲಿರುವ ಮನರೇಗಾ ಕಾಯ್ದೆಯಡಿ ದೇಶದಲ್ಲಿ 12.16 ಕೋಟಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇದರಲ್ಲಿ 6.21 ಕೋಟಿ ಮಹಿಳೆಯರು ಸೇರಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ವರ್ಷಪೂರ್ತಿ ಕೆಲಸ ಕೇಳುವ ಹಕ್ಕು ಇದ್ದು, ತಮ್ಮ ಊರಿನಲ್ಲಿಯೇ ಕೆಲಸ ಮಾಡಲು ಅವಕಾಶವಿತ್ತು. ಆದರೆ ಹೊಸ ಕಾಯ್ದೆಯಿಂದ ಈ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಿದರು.

ಹೊಸ ಕಾಯ್ದೆಯಡಿ ಕೆಲಸ ನೀಡದಿದ್ದರೆ ನ್ಯಾಯಾಲಯಕ್ಕೆ ಹೋಗುವ ಹಕ್ಕು ಕೂಡ ಇಲ್ಲದಾಗಿದೆ. ಕೇಂದ್ರ ಸರ್ಕಾರ ಅಧಿಸೂಚನೆಯ ಮೂಲಕ ಕೆಲಸದ ಸ್ಥಳ ನಿಗದಿ ಮಾಡುತ್ತಿದ್ದು, ರಾಜ್ಯಗಳು 40% ವೆಚ್ಚ ಭರಿಸಬೇಕಾಗಿದೆ. ಕರ್ನಾಟಕಕ್ಕೆ ಮಾತ್ರವೇ ಸುಮಾರು ₹2,500 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದರು.

ಮನರೇಗಾ ಬಚಾವ್ ಆಂದೋಲನವನ್ನು ಜನಾಂದೋಲನವಾಗಿ ರೂಪಿಸುವುದು ನಮ್ಮ ಗುರಿ. ಈ ಹೋರಾಟವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

You cannot copy content of this page

Exit mobile version