ಎಐಎಡಿಎಂಕೆ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ (ಒಪಿಎಸ್) ಅವರು ಶುಕ್ರವಾರ ಅಧಿಕೃತವಾಗಿ ಆಡಳಿತಾರೂಢ ಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಬೆಂಬಲಿಗರೊಂದಿಗೆ ಅವರು ಡಿಎಂಕೆ ಕೈಹಿಡಿದರು.
ದಿವಂಗತ ಜಯಲಲಿತಾ ಅವರ ಅತ್ಯಂತ ಆಪ್ತರಾಗಿದ್ದ ಪನ್ನೀರ್‌ಸೆಲ್ವಂ, 2022ರಲ್ಲಿ ಎಐಎಡಿಎಂಕೆಯಿಂದ ಹೊರಬಂದಿದ್ದರು. ಕಳೆದ ಮೂರು ವರ್ಷಗಳಿಂದ ಅವರು ಮತ್ತೆ ಪಕ್ಷ ಸೇರಲು ಸತತ ಪ್ರಯತ್ನ ನಡೆಸಿದರೂ ಯಶಸ್ವಿಯಾಗಿರಲಿಲ್ಲ. ಅಂತಿಮವಾಗಿ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಅವರು ಡಿಎಂಕೆ ಸೇರುವ ನಿರ್ಧಾರ ಕೈಗೊಂಡಿದ್ದಾರೆ.
ಈ ಬೆಳವಣಿಗೆಯು 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಸ್ಟಾಲಿನ್ ನೇತೃತ್ವದ ಡಿಎಂಕೆ ‘ದ್ರಾವಿಡ ಮಾಡೆಲ್ 2.0’ ಘೋಷಣೆಯೊಂದಿಗೆ ಮತದಾರರ ಮುಂದೆ ಹೋಗಲು ಸಿದ್ಧವಾಗುತ್ತಿದ್ದು, ಒಪಿಎಸ್ ಸೇರ್ಪಡೆ ಪಕ್ಷಕ್ಕೆ ಆನೆಬಲ ತಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮುಂಬರುವ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟಕ್ಕೆ ಎದುರಾಳಿಯಾಗಿ ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟ ಕಣಕ್ಕಿಳಿಯುವ ಸಾಧ್ಯತೆಯಿದೆ. ಇದರ ನಡುವೆ ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷವೂ ಕಣಕ್ಕಿಳಿಯುತ್ತಿರುವುದರಿಂದ ತಮಿಳುನಾಡು ರಾಜಕೀಯದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ನಿರೀಕ್ಷೆಯಿದೆ.
