Home ದೆಹಲಿ ಜಿಬಿಎ ಚುನಾವಣೆ ಕುರಿತು ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಅಪ್ಡೇಟ್ಸ್‌ – ಇಲ್ಲಿದೆ ಮಾಹಿತಿ

ಜಿಬಿಎ ಚುನಾವಣೆ ಕುರಿತು ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಅಪ್ಡೇಟ್ಸ್‌ – ಇಲ್ಲಿದೆ ಮಾಹಿತಿ

ನವದೆಹಲಿ : ಕರ್ನಾಟಕದ ರಾಜಧಾನಿ ಬೆಂಗಳೂರಿನ ಸ್ಥಳೀಯ ಸಂಸ್ಥೆಗಳ ಭವಿಷ್ಯ ನಿರ್ಧರಿಸಲಿರುವ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿ ಈಗ ಸುಪ್ರೀಂ ಕೋರ್ಟ್‌ನ ಅಂಗಳ ತಲುಪಿದೆ. ಜಿಬಿಎ ಚುನಾವಣೆಯನ್ನು (elecation) ಸದ್ಯಕ್ಕೆ ಮುಂದೂಡಿ, ಪ್ರಸಕ್ತ ವರ್ಷದ ಡಿಸೆಂಬರ್ 31ರವರೆಗೆ ಕಾಲಾವಕಾಶ ನೀಡಬೇಕೆಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ವಿಶೇಷ ಅರ್ಜಿಯ ಅಧಿಕೃತ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಮುಂಬರುವ ಜುಲೈ 17ರಂದು ಕೈಗೆತ್ತಿಕೊಳ್ಳಲಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಹಾಗೂ ವಿ. ಮೋಹನ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಮುಂದೆ ಜಿಬಿಎ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ಜುಲೈ 17ರ ಪಟ್ಟಿಯಲ್ಲಿರುವ ಈ ಪ್ರಕರಣದ ವಿಚಾರಣೆಯನ್ನು ಯಾವುದೇ ಕಾರಣಕ್ಕೂ ಮುಂದೂಡಬಾರದು ಎಂದು ಅವರು ಕೋರ್ಟ್‌ಗೆ ವಿನಂತಿಸಿದರು. ಈ ಮನವಿಯನ್ನು ಪುರಸ್ಕರಿಸಿದ ಸಿಜೆಐ ನೇತೃತ್ವದ ಪೀಠವು, ಬರುವ ಶುಕ್ರವಾರದಂದೇ ಪ್ರಕರಣದ ಆಲಿಕೆ ನಡೆಸುವುದಾಗಿ ಸಮ್ಮತಿಸಿದೆ.

ಸದ್ಯ ಇಡೀ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯ ಭರದಿಂದ ಸಾಗುತ್ತಿದೆ. ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಸಾವಿರಾರು ಸರ್ಕಾರಿ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸುವ ಬೃಹತ್ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. ಇಂತಹ ತೀವ್ರ ಕಾರ್ಯದ ನಡುವೆಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಭಾರಿ ಪ್ರಮಾಣದ ಸಿಬ್ಬಂದಿಯನ್ನು ನಿಯೋಜಿಸುವುದು ಆಡಳಿತಾತ್ಮಕವಾಗಿ ಅಸಾಧ್ಯದ ಮಾತು ಎಂದು ಸರ್ಕಾರ ತನ್ನ ವಾದದಲ್ಲಿ ತಿಳಿಸಿದೆ.

ಬೆಂಗಳೂರು ಮಹಾನಗರ ವ್ಯಾಪ್ತಿಯ ಚುನಾವಣಾ ಪ್ರಕ್ರಿಯೆ ಎಷ್ಟು ದೊಡ್ಡದಾಗಿದೆ ಎಂಬುದನ್ನು ಸರ್ಕಾರ ಅಂಕಿ-ಅಂಶಗಳ ಸಮೇತ ಕೋರ್ಟ್‌ಗೆ ವಿವರಿಸಿದೆ.  ಬೆಂಗಳೂರು ವ್ಯಾಪ್ತಿಯಲ್ಲಿ ಸದ್ಯ 40 ಲಕ್ಷಕ್ಕೂ ಅಧಿಕ ಮನೆಗಳಿದ್ದು, ಸುಮಾರು 1.03 ಕೋಟಿ ಮತದಾರರಿದ್ದಾರೆ. ಐದು ಪ್ರತ್ಯೇಕ ನಗರ ಪಾಲಿಕೆಗಳಿಗೆ ಒಟ್ಟಿಗೆ ಚುನಾವಣೆ ನಡೆಸಬೇಕಿದೆ.  ಕೇವಲ ಮತದಾನದ ದಿನದ ಕರ್ತವ್ಯಕ್ಕಾಗಿಯೇ (ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ) ಕನಿಷ್ಠ 60 ಸಾವಿರ ಸರ್ಕಾರಿ ನೌಕರರ ಅಗತ್ಯವಿದೆ.

ಹೀಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಜಿಬಿಎ ಬೃಹತ್ ಚುನಾವಣೆ ಎರಡನ್ನೂ ಏಕಕಾಲದಲ್ಲಿ ನಿಭಾಯಿಸುವುದು ತಾಂತ್ರಿಕವಾಗಿ ಅತ್ಯಂತ ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ. ಒಟ್ಟಿನಲ್ಲಿ ಜುಲೈ 17ರಂದು ನಡೆಯಲಿರುವ ಸುಪ್ರೀಂ ಕೋರ್ಟ್ ವಿಚಾರಣೆಯು ಜಿಬಿಎ ಚುನಾವಣೆಯ ಮುಂದಿನ ಹಾದಿಯನ್ನು ನಿರ್ಧರಿಸಲಿದೆ.

You cannot copy content of this page

Exit mobile version