Home ಬ್ರೇಕಿಂಗ್ ಸುದ್ದಿ SIR ಹಾಸನ ಜಿಲ್ಲೆಯಲ್ಲಿ ಶೇ. 98.33. ರಷ್ಟು ಪ್ರಗತಿ ಸಾಧನೆ – ಜಿಲ್ಲಾಧಿಕಾರಿ ಮಾಹಿತಿ

SIR ಹಾಸನ ಜಿಲ್ಲೆಯಲ್ಲಿ ಶೇ. 98.33. ರಷ್ಟು ಪ್ರಗತಿ ಸಾಧನೆ – ಜಿಲ್ಲಾಧಿಕಾರಿ ಮಾಹಿತಿ

ಹಾಸನ: ಜಿಲ್ಲೆಯ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಹಾಸನ ಜಿಲ್ಲೆ ರಾಜ್ಯದಲ್ಲೇ ಉತ್ತಮ ಪ್ರಗತಿ ಸಾಧಿಸಿದ್ದು, ಈಗಾಗಲೇ ಶೇಕಡ 98.33ರಷ್ಟು ಗಣತಿ ನಮೂನೆಗಳ ವಿತರಣೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ತಿಳಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗದ ಮೇ 14ರ ಆದೇಶದಂತೆ ಜಿಲ್ಲೆಯಾದ್ಯಂತ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಜೂನ್ 30ರಿಂದ ಜುಲೈ 29ರವರೆಗೆ ಮತಗಟ್ಟೆ ಅಧಿಕಾರಿಗಳು (BLOs) ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿ, ಮತದಾರರ ವಿವರಗಳನ್ನು ಭರ್ತಿ ಮಾಡಿಸಿಕೊಂಡು ಹಿಂಪಡೆಯುತ್ತಿದ್ದಾರೆ. ಬಳಿಕ ಆ ಮಾಹಿತಿಯನ್ನು BLO App ಮೂಲಕ ತಂತ್ರಾಂಶದಲ್ಲಿ ದಾಖಲಿಸಲಾಗುತ್ತಿದೆ. ಈ ಹಂತದಲ್ಲಿ ಮತದಾರರಿಂದ ಯಾವುದೇ ದಾಖಲೆಗಳನ್ನು ಪಡೆಯಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಒಟ್ಟು 15,17,024 ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಇದು ಶೇಕಡ 98.33ರಷ್ಟು ಪ್ರಗತಿಗೆ ಸಮನಾಗಿದೆ. ಇದುವರೆಗೆ 7,83,773 ಮತದಾರರ ವಿವರಗಳನ್ನು ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಗಣಕೀಕರಣ ಕಾರ್ಯ ಶೇಕಡ 50.80ರಷ್ಟು ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು. ಜುಲೈ 14ರ ಬೆಳಿಗ್ಗೆ 10 ಗಂಟೆಯ ಮಾಹಿತಿಯಂತೆ ಜಿಲ್ಲೆಯಲ್ಲಿ 15,092 ಗಣತಿ ನಮೂನೆಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಇವುಗಳಲ್ಲಿ 9,149 ಮಂದಿ ಮೃತಪಟ್ಟವರು, 4,404 ಮಂದಿ ಶಾಶ್ವತವಾಗಿ ವಲಸೆ ಹೋದವರು, 1,244 ಪುನರಾವರ್ತಿತ ದಾಖಲೆಗಳು, 247 ಮಂದಿ ಗೈರು ಮತದಾರರು ಹಾಗೂ 48 ಪ್ರಕರಣಗಳು ಇತರೆ ಕಾರಣಗಳಿಗೆ ಸಂಬಂಧಿಸಿದ್ದಾಗಿವೆ ಎಂದು ವಿವರಿಸಿದರು.

ವಿಶೇಷ ಸಮಗ್ರ ಪರಿಷ್ಕರಣೆಯ ಪ್ರಗತಿ ಕುರಿತ ಅಂಕಿ-ಅಂಶಗಳನ್ನು ಜಿಲ್ಲಾಡಳಿತ ಪ್ರತಿದಿನ ಸಾರ್ವಜನಿಕರು, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಹಾಗೂ ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ಮೂಲಕ ನೀಡುತ್ತಿದೆ. ಇದೇ ರೀತಿಯಲ್ಲಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿಯೂ ಮತದಾರರ ನೋಂದಣಾಧಿಕಾರಿಗಳು ಪ್ರತಿದಿನ ಮಾಹಿತಿ ಪ್ರಕಟಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೆ ರಾಜಕೀಯ ಪಕ್ಷಗಳು ಮತಗಟ್ಟೆ ಏಜೆಂಟರನ್ನು (BLA) ನೇಮಿಸಬೇಕೆಂದು ಕೋರಲಾಗಿದ್ದು, ಅದರಂತೆ ಜಿಲ್ಲೆಯಲ್ಲಿ ಒಟ್ಟು 5,383 ಮತಗಟ್ಟೆ ಏಜೆಂಟರನ್ನು ನೇಮಕ ಮಾಡಲಾಗಿದೆ. ಇವರಲ್ಲಿ ಕಾಂಗ್ರೆಸ್ ಪಕ್ಷದಿಂದ 1,965, ಬಿಜೆಪಿ 1,600, ಜೆಡಿಎಸ್ 1,671 ಹಾಗೂ ಬಹುಜನ ಸಮಾಜ ಪಕ್ಷದಿಂದ 147 ಮಂದಿ ನೇಮಕಗೊಂಡಿದ್ದಾರೆ ಎಂದು ತಿಳಿಸಿದರು. ಮತಗಟ್ಟೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲ ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟರೊಂದಿಗೆ ಸಭೆ ನಡೆಸಿ, ಸಮಗ್ರ ಪರಿಷ್ಕರಣೆ ಕುರಿತು ಮಾಹಿತಿ ನೀಡಿ ಸಭೆಯ ನಡಾವಳಿಯನ್ನು (Minutes of Meeting) ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡುವಂತೆ ಸೂಚಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳು ಹಾಗೂ ಮತಗಟ್ಟೆ ಏಜೆಂಟರು ಸಂಪೂರ್ಣ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಲತಾಕುಮಾರಿ ಮನವಿ ಮಾಡಿದರು.

You cannot copy content of this page

Exit mobile version