Home ಬ್ರೇಕಿಂಗ್ ಸುದ್ದಿ ಆಗಸ್ಟ್ 6ರಿಂದ ರಾಜ್ಯ ಮುಂಗಾರು ಅಧಿವೇಶನ ಆರಂಭ; ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ: ಸಿಎಂ ಡಿ.ಕೆ....

ಆಗಸ್ಟ್ 6ರಿಂದ ರಾಜ್ಯ ಮುಂಗಾರು ಅಧಿವೇಶನ ಆರಂಭ; ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ: ಸಿಎಂ ಡಿ.ಕೆ. ಶಿವಕುಮಾರ್

0

ಬೆಂಗಳೂರು: ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನವು ಆಗಸ್ಟ್ 6ರಿಂದ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಸೋಮವಾರ ಬೆಂಗಳೂರಿನ ತಮ್ಮ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಸಭೆ ಹಾಗೂ ದೆಹಲಿ ಪ್ರವಾಸದ ಕುರಿತು ಮಾಹಿತಿ ನೀಡಿದರು.

“ಆಗಸ್ಟ್ 6ರಿಂದ ಅಧಿವೇಶನ ಕರೆಯಲು ತೀರ್ಮಾನಿಸಲಾಗಿದೆ. ನಾನು ಒಂದು ದಿನದ ಕೆಲಸದ ನಿಮಿತ್ತ ದೆಹಲಿಗೆ ತೆರಳಿ ಬರುತ್ತೇನೆ. ಬಳಿಕ ಪಕ್ಷದ ಹಿರಿಯ ನಾಯಕರು ಸಭೆಯ ದಿನಾಂಕ ನಿಗದಿಪಡಿಸಲಿದ್ದು, ಅದರ ನಂತರ ಮತ್ತೆ ದೆಹಲಿಗೆ ಭೇಟಿ ನೀಡುತ್ತೇನೆ” ಎಂದು ಸಿಎಂ ಹೇಳಿದರು.

ಇದೇ ವೇಳೆ, ಮಾಜಿ ಸಂಸದ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಹೆಚ್. ಹನುಮಂತಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಅವರು, “ಹನುಮಂತಪ್ಪ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದ್ದಿ ನಾಯಕರು. ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿ, ರೈಲ್ವೆ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಳೆದ 45 ವರ್ಷಗಳಿಂದ ನನಗೆ ಆತ್ಮೀಯರಾಗಿದ್ದರು. ಪಕ್ಷದ ಉಪಾಧ್ಯಕ್ಷರು ಹಾಗೂ ಸಂಸದೀಯ ಕಾರ್ಯದರ್ಶಿಯಾಗಿ ಕೂಡ ಕಾರ್ಯನಿರ್ವಹಿಸಿದ್ದರು. ಅವರ ಅಗಲಿಕೆ ರಾಜ್ಯ ಮತ್ತು ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಶ್ರದ್ಧಾಂಜಲಿ ಸಲ್ಲಿಸಿದರು.

ಕಾವೇರಿ ನೀರು ಬಿಡುಗಡೆ ಕುರಿತು ಸಭೆಯ ಬಳಿಕ ನಿರ್ಧಾರ
ಮಂಡ್ಯ ಜಿಲ್ಲೆಯ ಶಾಸಕರು ಕಾವೇರಿ ನೀರು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ, “ಮಂಡ್ಯ ಹಾಗೂ ಶ್ರೀರಂಗಪಟ್ಟಣದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಸಭೆಯಲ್ಲಿ ಚರ್ಚಿಸಿ ನಂತರ ಅಂತಿಮ ನಿರ್ಧಾರವನ್ನು ಪ್ರಕಟಿಸುತ್ತೇವೆ” ಎಂದು ತಿಳಿಸಿದರು.

ಕೆಪಿಎಸ್‌ಸಿ ಅಧ್ಯಕ್ಷರ ಅಮಾನತು: ಹಿರಿಯ ಅಧಿಕಾರಿಗೆ ಜವಾಬ್ದಾರಿ
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಧ್ಯಕ್ಷರ ಅಮಾನತು ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, “ರಾಜ್ಯಪಾಲರು ಅಮಾನತು ಆದೇಶ ಹೊರಡಿಸಿದ್ದಾರೆ. ಅವರ ನಂತರ ಹಿರಿಯರಾಗಿರುವ ಸದಸ್ಯರಿಗೆ ಆಯೋಗದ ಜವಾಬ್ದಾರಿ ವಹಿಸುವಂತೆ ಸೂಚನೆ ನೀಡಿದ್ದೇನೆ” ಎಂದು ಹೇಳಿದರು.

You cannot copy content of this page

Exit mobile version