ಇತ್ತೀಚೆಗೆ ನಡೆದ ಚುನಾವಣೆಯ ಮತದಾನ ಹಾಗೂ ಕ್ರಾಸ್ ವೋಟಿಂಗ್ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೊಮ್ಮೆ ಬಹಿರಂಗವಾಗಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಚುನಾವಣೆಯಲ್ಲಿ ತಾವು ಬಿಜೆಪಿಗೆ ಮತ ಹಾಕಿದ್ದರೂ ಸಹ, ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ದೂರಿದ್ದಾರೆ.
ಚುನಾವಣಾ ಪ್ರಕ್ರಿಯೆಗಳ ಹಿನ್ನೆಲೆಯನ್ನು ಪ್ರಸ್ತಾಪಿಸಿದ ಯತ್ನಾಳ್, ಕ್ಷೇತ್ರಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರವು ಏಳೆಂಟು ಕೋಟಿ ಅಥವಾ ಐವತ್ತು ಕೋಟಿ ರೂಪಾಯಿಗಳಷ್ಟು ಭಾರಿ ಮೊತ್ತದ ಅನುದಾನ ಕೊಡುವ ಆಶ್ವಾಸನೆ ನೀಡಿದ್ದರಿಂದ ಕೆಲವರು ಬಿಜೆಪಿಗೆ ಮತ ಹಾಕದೆ ಕ್ರಾಸ್ ವೋಟಿಂಗ್ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಆದರೆ, ಈ ಇಡೀ ಪ್ರಕ್ರಿಯೆಯ ಹಿಂದೆ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷರೇ ಇದ್ದು, ಅವರೇ ಬಿಜೆಪಿಗೆ ಮತ ಹಾಕದಂತೆ ಒಳಗೊಳಗೇ ಸುದ್ದಿ ಹಬ್ಬಿಸಿದ್ದರು ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದಂತೆ ಕೇಳದಿದ್ದರೆ ಹಳೆಯ ಹಗರಣಗಳನ್ನು ಹೊರತೆಗೆಯುವುದಾಗಿ ಬೆದರಿಕೆ ಹಾಕಲಾಗಿತ್ತು ಮತ್ತು ಈ ಎಲ್ಲ ಬೆಳವಣಿಗೆಗಳು ಡಿ.ಕೆ. ಶಿವಕುಮಾರ್ ಅವರಿಗೆ ರಾಜಕೀಯವಾಗಿ ಸಹಾಯ ಮಾಡಲು ರಾಜ್ಯಾಧ್ಯಕ್ಷರು ಮಾಡಿರುವ ಅತ್ಯಂತ ನಾಚಿಕೆಗೇಡಿನ ಸಂಚು ಎಂದು ಕಿಡಿಕಾರಿದ್ದಾರೆ.
ಇದೇ ಸಂದರ್ಭದಲ್ಲಿ ಪಕ್ಷದ ತಾಂತ್ರಿಕ ಪ್ರಕ್ರಿಯೆಗಳ ಬಗ್ಗೆ ಆಕ್ಷೇಪ ಎತ್ತಿದ ಅವರು, ಸಾಮಾನ್ಯವಾಗಿ ಮತದಾನ ನಡೆಯುವುದಕ್ಕಿಂತ ಮುಂಚಿತವಾಗಿ ಪಕ್ಷಗಳು ವಿಪ್ ಜಾರಿಗೊಳಿಸಬೇಕು. ಆದರೆ ಈ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಗಳೆಲ್ಲವೂ ಮುಗಿದ ಮೇಲೆ ಅತ್ಯಂತ ವ್ಯವಸ್ಥಿತವಾಗಿ ವಿಪ್ ಇಶ್ಯೂ ಮಾಡುವ ಮೂಲಕ ನಾಚಿಗೇಡಿನ ಕೆಲಸ ಮಾಡಲಾಗಿದೆ. ತಾವು ಕೇವಲ ವಸ್ತುಸ್ಥಿತಿಯ ವಿವರಣೆಗಾಗಿ ಪತ್ರ ಬರೆದಿದ್ದನ್ನೇ ಮುಂದಿಟ್ಟುಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಯತ್ನಾಳ್ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂಬ ಅನುಮಾನವನ್ನು ಸಾರ್ವಜನಿಕರಲ್ಲಿ ಹರಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೊನೆಯದಾಗಿ ಬಿ.ವೈ. ವಿಜಯೇಂದ್ರ ಹಾಗೂ ಅವರ ಬೆಂಬಲಿಗರಿಗೆ ತೀಕ್ಷ್ಣವಾಗಿ ಎಚ್ಚರಿಕೆ ನೀಡಿರುವ ಯತ್ನಾಳ್, ರಾಜಕೀಯವಾಗಿ ಎದುರಿಸಲಾಗದೆ ತಮ್ಮ ವೈಯಕ್ತಿಕ ವಿಚಾರ ಹಾಗೂ ಕುಟುಂಬದ ಬಗ್ಗೆ ಕೆಟ್ಟ ಶಬ್ದಗಳನ್ನು ಬಳಸಿ ಪೋಸ್ಟ್ ಹಾಕಿಸುತ್ತಿರುವವರ ಇಡೀ ಕುಟುಂಬದ ಇತಿಹಾಸ ತಮ್ಮ ಬಳಿ ಇದೆ ಎಂದು ಗುಡುಗಿದ್ದಾರೆ. ನಕಲಿ ಫೇಸ್‌ಬುಕ್ ಖಾತೆಗಳ ಮೂಲಕ ಹಸಿಹಸಿ ಸುಳ್ಳುಗಳನ್ನು ಬರೆಸುತ್ತಿರುವವರ ಹುಳುಕುಗಳನ್ನು ತಾವೂ ಕೂಡ ಹೊರಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ರಾಜಕಾರಣದಲ್ಲಿ ಹಾರಾಡುವ ನಿಮ್ಮ ಕಾಲ ಈಗ ಮುಗಿಯುತ್ತಾ ಬಂದಿದ್ದು, ನೀವು ಎಷ್ಟು ಶ್ರೇಷ್ಠ ರಾಜಕಾರಣಿ ಎಂಬುದು ತಮಗೆ ಚೆನ್ನಾಗಿ ಗೊತ್ತಾಗಿದೆ. ಇನ್ನು ಮುಂದೆಯೂ ತಮ್ಮ ಚೇಲಾಗಳ ಮೂಲಕ ವೈಯಕ್ತಿಕ ತೇಜೋವಧೆ ಮುಂದುವರಿಸಿದರೆ, ಅದಕ್ಕಿಂತಲೂ ಕೆಟ್ಟದಾದ ವಿಷಯಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಾಗಿ ಯತ್ನಾಳ್ ನೇರ ಎಚ್ಚರಿಕೆ ನೀಡಿದ್ದಾರೆ.
