Home ರಾಜಕೀಯ “ನಿಜವಾದ ಹಿಂದೂ ಧರ್ಮವನ್ನು ಪ್ರದರ್ಶಿಸುವುದಿಲ್ಲ” : ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಇಂದ ಬಿಜೆಪಿ ವಿರುದ್ಧ...

“ನಿಜವಾದ ಹಿಂದೂ ಧರ್ಮವನ್ನು ಪ್ರದರ್ಶಿಸುವುದಿಲ್ಲ” : ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಇಂದ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ

0

ಪೊಲ್ಲಾಚಿ (ತಮಿಳುನಾಡು): “ನಿಜವಾದ ಹಿಂದೂ ತನ್ನ ಧರ್ಮವನ್ನು ಎಲ್ಲೆಡೆ ಪ್ರದರ್ಶಿಸುವ ಅಗತ್ಯವಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವುದೇ ನಿಜವಾದ ಹಿಂದೂತ್ವದ ಮೌಲ್ಯ” ಎಂದು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ.

ಪೊಲ್ಲಾಚಿಯಲ್ಲಿ ತಮ್ಮ ಪ್ರತಿಷ್ಠಾನ ‘ನಾವು ನಾಯಕರು’ ವತಿಯಿಂದ ಆಯೋಜಿಸಿದ್ದ ‘ಮಾದಕ ರಹಿತ ಪೊಲ್ಲಾಚಿ ಜಾಗೃತಿ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ತಾವು ಹೆಮ್ಮೆಯ ರಾಷ್ಟ್ರೀಯವಾದಿ, ಭಾರತೀಯ ಮತ್ತು ಹಿಂದೂ ಎಂದು ಹೇಳಿಕೊಂಡರು. ಆದರೆ ಮನೆಯಿಂದ ಹೊರಗೆ ಕಾಲಿಟ್ಟಾಗ ತಮ್ಮ ಜಾತಿ ಹಾಗೂ ಧರ್ಮವನ್ನು ಮನೆಯೊಳಗೇ ಬಿಟ್ಟು ಬರುತ್ತೇನೆ ಎಂದು ಹೇಳಿದರು.

“ನಿಜವಾದ ಹಿಂದೂ ಎಂದಿಗೂ ಜಾತಿ ಅಥವಾ ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವುದಿಲ್ಲ. ಯಾರೂ ಉನ್ನತರು ಅಥವಾ ಕೀಳು ಎಂಬ ಭಾವನೆ ಹೊಂದುವುದಿಲ್ಲ. ಎಲ್ಲರೂ ಸಮಾನರು ಎಂಬ ನಂಬಿಕೆಯಿಂದಲೇ ಸಮಾಜ ಮುನ್ನಡೆಯಬೇಕು” ಎಂದು ಅವರು ಅಭಿಪ್ರಾಯಪಟ್ಟರು.

ಅಣ್ಣಾಮಲೈ ಆರಂಭಿಸಿರುವ ‘ನಾವು ನಾಯಕರು’ ಸಂಘಟನೆಯ ಮೊದಲ ಪ್ರಮುಖ ಸಾರ್ವಜನಿಕ ಕಾರ್ಯಕ್ರಮ ಇದಾಗಿದ್ದು, ‘ಮಾದಕ ರಹಿತ ತಮಿಳುನಾಡು’ ಅಭಿಯಾನದ ಭಾಗವಾಗಿ ಈ ಜಾಗೃತಿ ಸಮ್ಮೇಳನವನ್ನು ಆಯೋಜಿಸಲಾಗಿತ್ತು.

ಕಳೆದ ತಿಂಗಳು ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಅಣ್ಣಾಮಲೈ, ತಮ್ಮ ಹೊಸ ರಾಜಕೀಯ ಚಳವಳಿಯನ್ನು ಘೋಷಿಸಿದ್ದರು. ಇದೇ ಚಳವಳಿ ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷವಾಗಿ ರೂಪುಗೊಂಡು 2031ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಸೂಕ್ತ ಸಮಯದಲ್ಲಿ ಈ ಪರಿವರ್ತನೆ ನಡೆಯಲಿದೆ ಎಂದೂ ತಿಳಿಸಿದರು.

ಭಾಷಣದಲ್ಲಿ ಯುವಕರ ಪಾತ್ರದ ಬಗ್ಗೆಯೂ ಪ್ರಸ್ತಾಪಿಸಿದ ಅವರು, 2026ರ ವಿಧಾನಸಭೆ ಚುನಾವಣೆಯಲ್ಲಿ ಯುವ ಮತದಾರರು ರಾಜಕೀಯ ಬದಲಾವಣೆಗೆ ಪ್ರಮುಖ ಕಾರಣರಾಗಿದ್ದಾರೆ ಎಂದು ಹೇಳಿದರು. 2031ರ ಚುನಾವಣೆಯಲ್ಲೂ ಜನರೇಷನ್-ಝೆಡ್ ಇನ್ನಷ್ಟು ದೊಡ್ಡ ರಾಜಕೀಯ ಬದಲಾವಣೆಗೆ ಕಾರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ನಾವು ನಾಯಕರು ಸಂಘಟನೆಗೆ ಯಾರನ್ನೂ ವಿಶೇಷವಾಗಿ ಆಹ್ವಾನಿಸುತ್ತಿಲ್ಲ. ಇದು ಜನರ ಚಳವಳಿಯಾಗಿದೆ. ಮುಂದಿನ ಆರು ತಿಂಗಳಲ್ಲಿ 50 ಲಕ್ಷ ಮರಗಳನ್ನು ನೆಡುವ ಗುರಿಯನ್ನು ಹೊಂದಿದ್ದೇವೆ” ಎಂದು ಅಣ್ಣಾಮಲೈ ಹೇಳಿದರು.

ಸಂಘಟನೆಯ ಸದಸ್ಯತ್ವದ ವಿವರ ನೀಡಿದ ಅವರು, ಸದಸ್ಯರಲ್ಲಿ ಶೇ.17ರಷ್ಟು ಮಹಿಳೆಯರು ಇದ್ದಾರೆ. ಶೇ.14ರಷ್ಟು ಸದಸ್ಯರು 18ರಿಂದ 25 ವರ್ಷದೊಳಗಿನವರಾಗಿದ್ದು, ಒಟ್ಟು ಸದಸ್ಯರಲ್ಲಿ ಶೇ.54ರಷ್ಟು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದು ತಿಳಿಸಿದರು. ಯುವ ಶಕ್ತಿಯೇ ತಮಿಳುನಾಡಿನ ಭವಿಷ್ಯದ ರಾಜಕೀಯವನ್ನು ನಿರ್ಧರಿಸಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

You cannot copy content of this page

Exit mobile version