“ವಿಮಾನ ಹಾರಿಸಲು ಯೋಗ್ಯನಲ್ಲ, ಹೋಗಿ ಚಪ್ಪಲಿ ಹೊಲಿ”: ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಜಾತಿ ನಿಂದನೆ

ದೆಹಲಿ: ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಜಾತಿ ತಾರತಮ್ಯ ವ್ಯಾಪಕವಾಗಿದೆ. ಮೂವರು ಹಿರಿಯ ಅಧಿಕಾರಿಗಳು ಜಾತಿಯ ಹೆಸರಿನಲ್ಲಿ ತನ್ನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ 34 ವರ್ಷದ ಪೈಲಟ್ ಪ್ರಕರಣ ದಾಖಲಿಸಿದ್ದಾರೆ.

ತನ್ನನ್ನು ನೀನು ವಿಮಾನ ಹಾರಿಸಲು ಯೋಗ್ಯನಲ್ಲ, ಚಪ್ಪಲಿ ಹೊಲಿಯಲು ಹೋಗು ಎಂದು ತೀವ್ರವಾಗಿ ಅವಮಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಪೈಲಟ್ ದೂರಿನ ಆಧಾರದ ಮೇಲೆ, ಇಂಡಿಗೋ ಅಧಿಕಾರಿಗಳಾದ ತಪಸ್ ಡೇ, ಮನೀಶ್ ಸಹ್ನಿಪಾ ಮತ್ತು ಕ್ಯಾಪ್ಟನ್ ರಾಹುಲ್ ಪಾಟೀಲ್ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಿಸಲಾಗಿದೆ.

ಪೈಲಟ್ ಮೊದಲು ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿದರು. ಪೈಲಟ್ ದೂರಿನ ಆಧಾರದ ಮೇಲೆ, ಅಲ್ಲಿನ ಪೊಲೀಸರು ಝೀರೋ ಎಫ್‌ಐಆರ್ ದಾಖಲಿಸಿದರು. ನಂತರ, ಈ ಎಫ್‌ಐಆರ್ ದಾಖಲೆಯನ್ನು ಇಂಡಿಗೋ ಪ್ರಧಾನ ಕಚೇರಿ ಇರುವ ಗುರುಗ್ರಾಮಕ್ಕೆ ವರ್ಗಾಯಿಸಲಾಯಿತು.

ತರಬೇತಿ ಪೈಲಟ್ ತಮ್ಮ ದೂರಿನಲ್ಲಿ, ಏಪ್ರಿಲ್ 28ರಂದು ಇಂಡಿಗೋ ಗುರುಗ್ರಾಮ್ ಕಚೇರಿಯಲ್ಲಿ ನಡೆದ ಸಭೆಯನ್ನು ಉಲ್ಲೇಖಿಸಿದ್ದಾರೆ. 30 ನಿಮಿಷಗಳ ಸಭೆಯಲ್ಲಿ, “ನೀನು ವಿಮಾನ ಹಾರಿಸಲು ಯೋಗ್ಯನಲ್ಲ. ವಾಪಸ್ ಹೋಗಿ ಚಪ್ಪಲಿ ಹೊಲಿ. ನೀನು ಇಲ್ಲಿ ವಾಚ್‌ಮನ್‌ ಆಗುವುದಕ್ಕೂ ಸಹ ಅರ್ಹನಲ್ಲ” ಎಂದು ಹೇಳುವ ಮೂಲಕ ತಮ್ಮನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಕಿರುಕುಳದ ಉದ್ದೇಶವು ರಾಜೀನಾಮೆ ನೀಡುವಂತೆ ಒತ್ತಾಯಿಸುವುದಾಗಿದೆ. ಎಸ್‌ಟಿ ವ್ಯಕ್ತಿ ಎಂದು ಅವಮಾನಿಸುವ ಉದ್ದೇಶದಿಂದ ಅವಹೇಳನಕಾರಿಯಾಗಿ ಮಾತನಾಡಲಾಗಿದೆ ಎಂದು ಅವರು ಹೇಳಿದರು.

ಅನ್ಯಾಯದ ರೀತಿಯಲ್ಲಿ ಸಂಬಳ ಕಡಿತ, ಬಲವಂತದ ಮರುತರಬೇತಿ ಮತ್ತು ಎಚ್ಚರಿಕೆ ಪತ್ರಗಳ ಮೂಲಕ ತಮ್ಮನ್ನು ವೃತ್ತಿಪರ ಕಿರುಕುಳಕ್ಕೆ ಒಳಪಡಿಸಲಾಗಿದೆ. ಈ ವಿಷಯದ ಬಗ್ಗೆ ಉನ್ನತ ಅಧಿಕಾರಿಗಳು ಮತ್ತು ಇಂಡಿಗೋ ನೀತಿಸಂಹಿತೆ ಸಮಿತಿಗೆ ದೂರು ನೀಡಿದ್ದೇನೆ. ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಕೊನೆಗೆ, ಕಿರುಕುಳವನ್ನು ಸಹಿಸಲಾಗದೆ ಪೊಲೀಸರಿಗೆ ದೂರು ನೀಡಬೇಕಾಯಿತು ಎಂದು ಅವರು ಹೇಳಿದ್ದಾರೆ.

ಈ ಘಟನೆ ಕುರಿತು ಇಂಡಿಗೋ ಸಂಸ್ಥೆ ಇನ್ನೂ ಪ್ರತಿಕ್ರಿಯಿಸಿಲ್ಲ.

Related Articles

ಇತ್ತೀಚಿನ ಸುದ್ದಿಗಳು