ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್ಎಲ್) ಕಳುಹಿಸಿದ್ದ ಆಡಿಯೊ ಮಾದರಿಯ ವರದಿ ಈಗ ಹೊರ ಬಂದಿದ್ದು, ಆಡಿಯೊದಲ್ಲಿ ಇರುವುದು ಮುನಿರತ್ನ ಅವರದ್ದೇ ಧ್ವನಿ ಎನ್ನುವುದು ದೃಢಪಟ್ಟಿದೆ.
ಗುತ್ತಿಗೆದಾರ ಚೆಲುವರಾಜು ಅವರಿಗೆ ಬೈಯುವ ಸಂದರ್ಭದಲ್ಲಿ ಜಾತಿ ನಿಂದನೆ ಮಾಡಿದ ಆರೋಪ ಇದಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಈ ಆಡಿಯೋ ಧ್ವನಿ ನನ್ನದಲ್ಲ ಎಂದು ಶಾಸಕ ಮುನಿರತ್ನ ತನ್ನ ಮೇಲಿದ್ದ ಆರೋಪ ತಳ್ಳಿ ಹಾಕಿದ್ದರು.
ಅಶೋಕನಗರ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಎಫ್‌ಎಸ್ಎಲ್ ತಜ್ಞರು ಮುನಿರತ್ನ ಅವರ ಧ್ವನಿ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಿದ್ದರು. ಅಲ್ಲದೇ ದೂರುದಾರ ವೇಲು ನಾಯ್ಕರ್ ಅವರ ಧ್ವನಿ ಮಾದರಿಯನ್ನೂ ಸಂಗ್ರಹಿಸಲಾಗಿತ್ತು. ಪೊಲೀಸರು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಆಡಿಯೋದ ಮೂಲ ತುಣುಕು ಹಾಗೂ ಆಡಿಯೋ ರೆಕಾರ್ಡ್ ಮಾಡಿದ್ದ ಸಾಧನವನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ತಜ್ಞರ ವರದಿ ತನಿಖಾಧಿಕಾರಿಗಳ ಕೈ ಸೇರಿದೆ ಎಂದು ತಿಳಿದು ಬಂದಿದೆ.
ಶಾಸಕರು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿ ಗುತ್ತಿಗೆದಾರ ವೇಲು ನಾಯ್ಕರ್ ಅವರು ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಮುನಿರತ್ನ ವಿರುದ್ಧ ಸೆಪ್ಟಂಬರ್.13 ರಂದು ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಶಾಸಕ ಮುನಿರತ್ನ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಮತ್ತೆ ಸಂಕಷ್ಟ ಎದುರಾಗಿದೆ. ಈಗಾಗಲೇ ಅತ್ಯಾಚಾರ ಆರೋಪ ಎದುರುಸುತ್ತಿರುವ ಶಾಸಕ ಮುನಿರತ್ನ ಮೇಲೆ ಇದ್ದ ಇನ್ನೊಂದು ಆರೋಪ ದೃಢಪಟ್ಟಿದೆ.