ಚೆನ್ನೈ: ತಮಿಳುನಾಡಿನ ನಾಮಕ್ಕಲ್‌ನ ಮಲ್ಲಸಮುದ್ರಂನಲ್ಲಿರುವ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಯ ನೇಮ್‌ಬೋರ್ಡ್‌ನಲ್ಲಿ ‘ಹರಿಜನ ಕಾಲೋನಿ’ ಎಂಬ ಪದವನ್ನು ಸರ್ಕಾರ ಸೋಮವಾರ ಕಪ್ಪು ಬಣ್ಣ ಬಳಿದು ಅಳಿಸಿ, ” ಮಲ್ಲಸಮುದ್ರಂ ಪೂರ್ವ ” ಎಂದು ಮರುನಾಮಕರಣ ಮಾಡಲಾಗಿದೆ. ಹರಿಜನ ಕಾಲೋನಿ ಎಂದು ಬರೆದಿರುವ ಬಗ್ಗೆ ಇಬ್ಬರು ವ್ಯಕ್ತಿಗಳು ಮುಖ್ಯಮಂತ್ರಿ ಸ್ಟಾಲಿನ್ ಅವರ ಗಮನಕ್ಕೆ ತಂದಿದ್ದರು.
ತಮ್ಮ X ನಲ್ಲಿ, ಸ್ಟಾಲಿನ್ ಅವರು, “ಸಮಾನತೆಯ ಸಮಾಜದ ಕಡೆಗೆ ನಮ್ಮ ಪ್ರಯಾಣಕ್ಕೆ ಬೆಂಬಲ ನೀಡಿರುವ ಗಣೇಶನ್ ಮತ್ತು ವಕೀಲ ಅನ್ಬಳಗನ್ ಅವರಂತವರು ಶ್ಲಾಘನೀಯರು” ಎಂದು ಆ ಇಬ್ಬರು ವ್ಯಕ್ತಿಗಳನ್ನು ಅಭಿನಂದಿಸಿದ್ದಾರೆ. ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರು ಸೋಮವಾರ ಹರಿಜನ ಕಾಲೋನಿ ಎಂಬ ಹೆಸರನ್ನು ಅಧಿಕೃತವಾಗಿ “ಮಲ್ಲಸಮುದ್ರನ್ ಪೂರ್ವ” ಎಂದು ಬದಲಾಯಿಸಿದರು, ಶಾಲೆಯ ಬೋರ್ಡ್‌ನಿಂದ ಈ ಹೆಸರನ್ನು ಕಪ್ಪು ಬಣ್ಣ ಬಳಿದು ಅಳಿಸಿದರು.

ಗಣೇಶನ್ ಅವರನ್ನು ಸಚಿವರು ಶಾಲು ಹೊದಿಸಿ ಸನ್ಮಾನಿಸಿದರು ಮತ್ತು ಅನ್ಬಳಗನ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದರು. ದಿವಂಗತ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರನ್ನು ಉಲ್ಲೇಖಿಸಿ, ಸಚಿವರು ಎಕ್ಸ್‌ನಲ್ಲಿ, “ಸಮಾನತೆಯನ್ನು ಬೆಳೆಸುವ ಏಕೈಕ ಅಸ್ತ್ರ ಶಿಕ್ಷಣ,” ಎಂದು ಬರೆದುಕೊಂಡಿದ್ದಾರೆ.
ತಮಿಳುನಾಡು ಸರ್ಕಾರ ಈ ದಲಿತ ಸಮುದಾಯವನ್ನು ಆದಿ ದ್ರಾವಿಡರು ಎಂದು ಕರೆಯುತ್ತಾರೆ. ಕೇಂದ್ರದ 1982 ರ ಅಧಿಕೃತ ಸುತ್ತೋಲೆಯು ಪರಿಶಿಷ್ಟ ಜಾತಿ (Scheduled Caste) ಎಂಬ ಪದದ ಬಳಕೆಯನ್ನು ಪ್ರತಿಪಾದಿಸುತ್ತದೆ.