ಬೆಂಗಳೂರು: ಕಳೆದ ಐದು ದಶಕಗಳಿಂದ ಕರ್ನಾಟಕದ ಜನಚಳುವಳಿಯಲ್ಲಿ ಬೀದಿನಾಟಕ, ರಂಗನಾಟಕ ಹಾಗೂ ಜನಜಾಥೆಗಳ ಮೂಲಕ ಸಕ್ರಿಯವಾಗಿ ತೊಡಗಿಸಿಕೊಂಡು ಬಂದಿರುವ ‘ಸಮುದಾಯ’ ತನ್ನ ಐವತ್ತನೇ ವರ್ಷಾಚರಣೆಯ ಅಂಗವಾಗಿ “ಮನುಷ್ಯತ್ವದೆಡೆಗೆ ಸಮುದಾಯ 50” ಘೋಷಣೆಯೊಂದಿಗೆ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಸರಣಿಯಲ್ಲಿ, ಜನವರಿ 10 ಹಾಗೂ 11, 2026ರಂದು ಬೆಂಗಳೂರಿನಲ್ಲಿ ಎರಡು ದಿನಗಳ ಸಫ್ದರ್ ಹಶ್ಮಿ–ಬಾದಲ್ ಸರ್ಕಾರ್ ಬೀದಿನಾಟಕೋತ್ಸವ ಹಾಗೂ ವಿಚಾರಗೋಷ್ಠಿಯನ್ನು ಯಶಸ್ವಿಯಾಗಿ ಆಯೋಜಿಸಿತು.
ಸಮುದಾಯ ತನ್ನ ಆರಂಭದಿಂದಲೂ ಜನರ ಬಳಿಗೆ ಹೋಗಲು, ಜನಸಮುದಾಯವನ್ನು ತಲುಪಲು ಕಂಡುಕೊಂಡ ಪ್ರಮುಖ ಮಾರ್ಗವೇ ಬೀದಿನಾಟಕ. ರೈತ ಜಾಥೆಗಳು, ಯುದ್ಧ ವಿರೋಧಿ ಹೋರಾಟಗಳು ಸೇರಿದಂತೆ ಜನರ ಸಂಕಟಗಳಿಗೆ ಸ್ಪಂದಿಸಿ ಅವರ ಧ್ವನಿಯಾಗುವ ಕಾರ್ಯವನ್ನು ಸಮುದಾಯ ನಿರಂತರವಾಗಿ ನಡೆಸಿಕೊಂಡು ಬಂದಿದೆ. ಮೂರನೇ ರಂಗಭೂಮಿ ಪರಿಕಲ್ಪನೆಯ ಹರಿಕಾರರಾದ ಖ್ಯಾತ ನಾಟಕಕಾರ–ನಿರ್ದೇಶಕ ಬಾದಲ್ ಸರ್ಕಾರ್ ಅವರನ್ನು 1970ರ ದಶಕದಲ್ಲಿಯೇ ಕರ್ನಾಟಕಕ್ಕೆ ಆಹ್ವಾನಿಸಿ ರಂಗ ಕಾರ್ಯಾಗಾರಗಳನ್ನು ನಡೆಸಿಸಿದ್ದ ಸಮುದಾಯ, ಜನನಾಟ್ಯಮಂಚ್‌ನ ಸಫ್ದರ್ ಹಶ್ಮಿ ಅವರ ಜನಚಳುವಳಿಯ ಬೀದಿನಾಟಕ ಪರಂಪರೆಯೊಂದಿಗೆ ಆಪ್ತ ಸಂಬಂಧ ಹೊಂದಿದೆ. 1989ರಲ್ಲಿ ಬೀದಿನಾಟಕವಾಡುತ್ತಲೇ ಪ್ರಭುತ್ವದ ಗೂಂಡಾಗಳ ದಾಳಿಗೆ ಬಲಿಯಾಗಿ ಹುತಾತ್ಮರಾದ ಸಫ್ದರ್ ಹಶ್ಮಿ ಅವರ ಸ್ಮರಣೆಯೂ ಈ ಉತ್ಸವದ ಕೇಂದ್ರಬಿಂದು ಆಗಿತ್ತು.
ಉತ್ಸವವನ್ನು ಸಮುದಾಯದ ಸ್ಥಾಪಕರಲ್ಲೊಬ್ಬರಾದ ನಿರ್ದೇಶಕ ಪ್ರಸನ್ನ ಅವರು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು. ಮಾತನಾಡಿದ ಅವರು, “ಸಮುದಾಯ ಆರಂಭವಾದ ಕಾಲಕ್ಕಿಂತ ಇಂದಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಅಂದಿನ ತುರ್ತುಪರಿಸ್ಥಿತಿಯೊಂದಿಗೆ ಹೋಲಿಸಿದರೆ ಇಂದಿನ ಫ್ಯಾಸಿಸಂ ಗಂಭೀರವಾಗಿದೆ. ಇದನ್ನು ಎದುರಿಸಲು ಮತ್ತೆ ಜನರ ನಡುವೆ ಹೋಗಿ, ಅವರ ವಿಶ್ವಾಸವನ್ನು ಪಡೆದು ಹೋರಾಟ ನಡೆಸಬೇಕಿದೆ. ವಚನ ಚಳುವಳಿ, ಅಲ್ಲಮ–ಮಂಟೇಸ್ವಾಮಿ ಪರಂಪರೆ ನಮಗೆ ಶಕ್ತಿ ನೀಡುತ್ತವೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಇಪ್ಟಾ ರಾಷ್ಟ್ರೀಯ ಅಧ್ಯಕ್ಷ ರಾಕೇಶ್, “ಇಂದು ದೇಶವನ್ನು ಆಳುತ್ತಿರುವ ಶಕ್ತಿಗಳು ಪ್ರಜಾಪ್ರಭುತ್ವದ ಅಂಗಗಳನ್ನೇ ಬಳಸಿ ಸಂವಿಧಾನಿಕ ಫ್ಯಾಸಿಸಂ ಹರಡುತ್ತಿವೆ. ಜನರ ಹಕ್ಕುಗಳನ್ನು ಕಸಿಯುತ್ತಿರುವ ಈ ಪ್ರಕ್ರಿಯೆಯ ವಿರುದ್ಧ ಹೋರಾಡಲು ನಮ್ಮ ಜನಪದ ಪರಂಪರೆ, ವಚನ ಚಳುವಳಿ ಹಾಗೂ ಬಸವ–ಅಲ್ಲಮ–ವಿವೇಕಾನಂದರಂತಹ ಚಿಂತಕರ ದಾರಿಯಿದೆ,” ಎಂದರು. ಕೆಜಿಎಫ್ ಸಮುದಾಯದ ಫ್ಲೋರಾ ಅಚ್ಯುತ ಅವರು ಸಮುದಾಯದ ಆರಂಭದ ದಿನಗಳ ಬೀದಿನಾಟಕಗಳು ಹಾಗೂ ಜಾಥೆಗಳ ನೆನಪುಗಳನ್ನು ಹಂಚಿಕೊಂಡರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಮುದಾಯ ಬೆಂಗಳೂರು ಗೌರವಾಧ್ಯಕ್ಷ ಬಂಜಗೆರೆ ಜಯಪ್ರಕಾಶ ವಹಿಸಿದ್ದರು. ಸಮುದಾಯ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮನೋಜ್ ವಾಮಂಜೂರು ಉಪಸ್ಥಿತರಿದ್ದರು.
ಜನವರಿ 10ರಂದು ನಡೆದ ಮೊದಲ ದಿನದ ಬೀದಿನಾಟಕೋತ್ಸವದಲ್ಲಿ ಮೂರು ನಾಟಕಗಳು ಪ್ರದರ್ಶನಗೊಂಡವು. ವಿಜಯನಗರ ಬಿಂಬ (ರಿ.) ಬೆಂಗಳೂರು ತಂಡದ ‘ವಿಲೇವಾರಿ’ (ರಚನೆ–ನಿರ್ದೇಶನ: ಡಾ. ಎಸ್.ವಿ. ಕಶ್ಯಪ್), ಸಮುದಾಯ ಮಂಗಳೂರು ತಂಡದ ‘ಹೂವು ಮತ್ತು ದಾರ’ (ರಚನೆ: ಉದಯ ಗಾಂವ, ನಿರ್ದೇಶನ: ದಿವಾಕರ್ ಕಟೀಲ್) ಹಾಗೂ ಸಮುದಾಯ ಧಾರವಾಡದ ‘ಮಾನವರಾಗೋಣ’ (ರಚನೆ: ಬಿ.ಐ. ಈಳಿಗೇರ, ನಿರ್ದೇಶನ: ಜೋಸೆಫ್ ಮಲ್ಲಾಡಿ) ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡವು.
ಎರಡನೇ ದಿನವಾದ ಜನವರಿ 11ರಂದು ಬೆಳಗಿನ ಮೊದಲ ವಿಚಾರಗೋಷ್ಠಿಯಲ್ಲಿ ತಮಿಳುನಾಡಿನ ಚೆನ್ನೈ ಕಲೈಕುಳು ತಂಡದ ಸಂಚಾಲಕ–ನಿರ್ದೇಶಕ ಪ್ರಳಯನ್ ಚಂದ್ರಶೇಖರ್ ಬೀದಿನಾಟಕದ ತಮ್ಮ ಅನುಭವಗಳು ಹಾಗೂ ಪ್ರಯೋಗಗಳ ಬಗ್ಗೆ ಮಾತನಾಡಿದರು. ಕವಯತ್ರಿ–ಚಿಂತಕಿ ದು. ಸರಸ್ವತಿ ಅವರು ಬಾದಲ್ ಸರ್ಕಾರ್ ಅವರೊಂದಿಗೆ ನಡೆಸಿದ ರಂಗ ಚಳುವಳಿಯ ಅನುಭವಗಳನ್ನು ಭಾವನಾತ್ಮಕವಾಗಿ ಹಂಚಿಕೊಂಡರು. ಖ್ಯಾತ ನಿರ್ದೇಶಕ ಸುರೇಶ್ ಆನಗಳ್ಳಿ ಜಾಗತಿಕ ರಂಗಭೂಮಿಯ ಹೊಸ ಪ್ರಯೋಗಗಳು ಹಾಗೂ ಪರಿಕಲ್ಪನೆಗಳ ಬಗ್ಗೆ ವಿವರಿಸಿದರು.
ಮಧ್ಯಾಹ್ನ ನಡೆದ ಎರಡನೇ ಗೋಷ್ಠಿಯಲ್ಲಿ ‘ಲೆಫ್ಟ್‌ವರ್ಡ್’ ಸಂಪಾದಕ ಸುಧನ್ವ ದೇಶಪಾಂಡೆ ಸಫ್ದರ್ ಹಶ್ಮಿ ಅವರೊಂದಿಗಿನ ಒಡನಾಟ ಹಾಗೂ ಅವರ ನಿಧನದ ನಂತರ ಮಾಲಾಶ್ರೀ ಹಶ್ಮಿ ತೋರಿದ ಧೈರ್ಯ–ಬದ್ಧತೆ ಕುರಿತು ಮಾತನಾಡಿದರು. ರಂಗ ನಿರ್ದೇಶಕ ಐ.ಕೆ. ಬೊಳುವಾರು ಅವರು ಹಶ್ಮಿ ನಿಧನದ ಸಂದರ್ಭದಲ್ಲಿ ಮುಂಗಾರು ಪತ್ರಿಕೆಗೆ ಬರೆದ ಲೇಖನವನ್ನು ಪ್ರಸ್ತುತಪಡಿಸಿದರು. ಮಹಿಳಾ ಚಳುವಳಿಯ ನಾಯಕಿ ಕೆ.ಎಸ್. ವಿಮಲಾ ಸಮುದಾಯದ ರಂಗಾನುಭವಗಳು ತಮ್ಮ ಚಳುವಳಿ ಕಾರ್ಯಗಳಿಗೆ ನೀಡಿದ ಸ್ಪೂರ್ತಿಯನ್ನು ವಿವರಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕವಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಮಾತನಾಡಿ, “ಸಮುದಾಯ ಬಂಡಾಯ ಸಾಹಿತ್ಯ ಹಾಗೂ ದಲಿತ ಚಳುವಳಿಗಳಿಗೆ ಅಣ್ಣನಂತೆ ಜೊತೆ ನಿಂತಿದೆ,” ಎಂದರು. ಸಮಾರೋಪ ಭಾಷಣ ಮಾಡಿದ ಸಮುದಾಯ ಕರ್ನಾಟಕದ ಗೌರವಾಧ್ಯಕ್ಷ ಜನಾರ್ಧನ್ (ಜನ್ನಿ) ಅವರು, “ಸಮುದಾಯ ನಮಗೆ ಅಸ್ಮಿತೆ ಹಾಗೂ ಗುರುತನ್ನು ನೀಡಿದೆ. ಇಂದು ಜನರ ಮೆಚ್ಚುಗೆ ದೊರೆಯುತ್ತಿದ್ದರೆ ಅದರ ಹಿಂದೆ ಸಮುದಾಯದ ಪಾತ್ರವೇ ಕಾರಣ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲೆಯ ‘ಕಟ್ಟುತ್ತೇವ ನಾವು’ ಹಾಡಿನ ಕವಿ–ನಾಟಕಕಾರ ಸತೀಶ್ ಕುಲಕರ್ಣಿ ಹಾಗೂ ಬೆಂಗಳೂರಿನ ಅಭಿನಯ ತರಂಗದ ಗೌರಿದತ್ತು ಅವರಿಗೆ ರಂಗ ಸನ್ಮಾನ ಮಾಡಲಾಯಿತು. ಸಮುದಾಯ ಕರ್ನಾಟಕದ ಅಧ್ಯಕ್ಷ ಜೆ.ಸಿ. ಶಶಿಧರ್, ಖಜಾಂಚಿ ದೇವೇಂದ್ರ ಗೌಡ, ಕೆ.ಎಸ್. ವಿಮಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬೆಂಗಳೂರು ಸಮುದಾಯದ ಅಧ್ಯಕ್ಷ ಡಾ. ಬಿ.ಆರ್. ಮಂಜುನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಎರಡನೇ ದಿನ ಐದು ಬೀದಿನಾಟಕಗಳು ಪ್ರದರ್ಶನಗೊಂಡವು. ಶಿವಮೊಗ್ಗ ಸಮುದಾಯದ ‘ಒಂದನ್ನಾದರೂ ಒತ್ತಿ ಎರಡನ್ನಾದರೂ ಒತ್ತಿ’ (ರಚನೆ–ನಿರ್ದೇಶನ: ಡಾ. ಲವ ಜಿ.ಆರ್.), ಹೊಸಪೇಟೆಯ ಬಹುತ್ವ ತಂಡದ ‘ಕತ್ತೆಪುರಾಣ’ (ಅನುವಾದ: ಪ್ರೊ. ಬಿ. ಗಂಗಾಧರಮೂರ್ತಿ, ನಿರ್ದೇಶನ: ಡಾ. ಸಹನಾ ಪಿಂಜಾರ್), ಬೆಂಗಳೂರು ಸಮುದಾಯದ ‘ಪಾಪನಿವೇದನೆ’ (ರಚನೆ: ಡಾ. ರಾಜಪ್ಪ ದಳವಾಯಿ, ನಿರ್ದೇಶನ: ಉದಯ ಸೋಸಲೆ), ಹಶ್ಮೀ ಥಿಯೇಟರ್ ಫೋರಂನ ‘ಫಾರ್ ಸೇಲ್’ (ರಚನೆ–ನಿರ್ದೇಶನ: ಡಾ. ಟಿ.ಎಚ್. ಲವಕುಮಾರ್) ಹಾಗೂ ಅಭಿನಯ ತರಂಗ, ಬೆಂಗಳೂರು ತಂಡದ ‘ಹತ್ಯೆ’ (ರಚನೆ–ನಿರ್ದೇಶನ: ಯೋಗೇಶ್ ಸಿ.) ಜನಮನ ಸೆಳೆದವು.
ಉತ್ಸವದ ಎರಡೂ ದಿನ ಗಾಯಕಿ ಉಮಾ ವೈ.ಜಿ. ಮತ್ತು ತಂಡ ರಂಗಗೀತೆಗಳು ಹಾಗೂ ಹೋರಾಟದ ಹಾಡುಗಳನ್ನು ಪ್ರಸ್ತುತಪಡಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಜೀವ ತುಂಬಿದರು.