ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಆಧರಿಸಿ ನೀಡಿದ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಉತ್ತರಿಸಿದ್ದಾರೆ.
‘ರಜಾಕಾರರಿಂದ ತಾಯಿ, ಸಹೋದರಿ ಸುಟ್ಟು ಹೋದರೂ ಮಲ್ಲಿಕಾರ್ಜುನ ಖರ್ಗೆ ಮೌನ ವಹಿಸಿದ್ದಾರೆ’ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ನನ್ನ ಅಜ್ಜಿಯನ್ನು ಸುಟ್ಟಿದ್ದು ರಜಾಕಾರರೇ ಹೊರತು ಮುಸ್ಲಿಮರು ಅಥವಾ ಮುಸ್ಲಿಮ್ ಸಮುದಾಯ ಅಲ್ಲ ಎಂದು ಹೇಳಿದ್ದಾರೆ.
ಕೆಲವರಿಂದ ಇಡೀ ಸಮುದಾಯ ದೂಷಿಸಲು ಆಗುತ್ತದೆಯೇ? ಇಷ್ಟೆಲ್ಲ ಮಾತಾಡುವ ಇವರು ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಕೊಡ್ತಾರಾ? ಎಂದು ಪ್ರಶ್ನಿಸಿದರು. ‘ಎಲ್ಲದಕ್ಕೂ ಜಾತಿ-ಧರ್ಮ ಎಳೆದು ತರುವ ನೀವು ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಕೊಡುತ್ತೀರಾ?’ ಎಂದು ಪ್ರಶ್ನಿಸಿದರು.
ಮುಂದುವರಿದು.. ಬಿಜೆಪಿ ಸರ್ಕಾರ ಹೆಣದ ಮೇಲೆ ಹಣ ಮಾಡಿರುವುದು ಸ್ಪಷ್ಟವಾಗಿದ್ದು, ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವರಾಗಿದ್ದ ಶ್ರೀರಾಮುಲು ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್‌ಗೆ ಆಯೋಗ ಶಿಫಾರಸು ಮಾಡಿದೆ. ಬಲವಾದ ಸಾಕ್ಷ್ಯಗಳಿದ್ದರೆ ಯಾವುದೇ ಕ್ರಮಕ್ಕೂ ಸರ್ಕಾರ ಹಿಂಜರಿಯಲ್ಲ ಎಂದು ಹೇಳಿದ್ದಾರೆ.