ಬುಲ್ಡೋಜರ್ ನ್ಯಾಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಆರೆಸ್ಸೆಸ್-ಬಿಜೆಪಿ ಬುಲ್ಡೋಜರ್ ರಾಜಕೀಯದ ಕಪಾಳಕ್ಕೆ ಬಿದ್ದ ಏಟು ಎಂದು ದೆಹಲಿ ರಾಜ್ಯ ಸಿಪಿಎಂ ಸಮಿತಿ ಹೇಳಿದೆ.
ಈ ಕುರಿತು ಬುಧವಾರ ಹೇಳಿಕೆ ಬಿಡುಗಡೆ ಮಾಡಿರುವ ಪಕ್ಷವು ಬಿಜೆಪಿಯ ಬುಲ್ಡೋಜರ್ ರಾಜಕೀಯದ ವಿರುದ್ಧ ದೆಹಲಿ ರಾಜ್ಯ ಸಮಿತಿಯು ಹಿಂದಿನಿಂದಲೂ ಹೋರಾಡುತ್ತಿದೆ ಎಂದು ನೆನಪಿಸಿದೆ. ಬೃಂದಾಕಾರಟ್ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ದೆಹಲಿಯ ಜಹಾಂಗೀರ್‌ಪುರದಲ್ಲಿ ಅಲ್ಪಸಂಖ್ಯಾತರ ಮನೆಗಳು ಮತ್ತು ಜೀವನೋಪಾಯದ ಮೇಲೆ ಬುಲ್ಡೋಜರ್‌ಗಳಿಂದ ದಾಳಿ ಮಾಡುವುದನ್ನು ಪಕ್ಷದ ಪಾಲಿಟ್‌ಬ್ಯೂರೋ ಸದಸ್ಯರೊಂದಿಗೆ ಸೇರಿ ತಡೆದಿದ್ದರು. ಅಲ್ಲದೆ ಈ ಅನ್ಯಾಯ ಎಸಗಿದ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಮತ್ತು ಇತರ ಅಧಿಕಾರಿಗಳೊಂದಿಗೆ ಯುಪಿ ಮುಖ್ಯಮಂತ್ರಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಸಮಿತಿ ಒತ್ತಾಯಿಸಿತ್ತು.
ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ: ಬೃಂದಾಕಾರಟ್
ಬುಲ್ಡೋಜರ್ ಕ್ರಮವನ್ನು ಕಾನೂನುಬಾಹಿರ ಮತ್ತು ದುರುದ್ದೇಶಪೂರಿತ ಎಂದು ಘೋಷಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ ಎಂದು ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯರಾದ ಬೃಂದಾ ಕಾರಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಈ ತೀರ್ಪನ್ನು ಮೊದಲೇ ನೀಡಿದ್ದರೆ ಚೆನ್ನಾಗಿರುತ್ತಿತ್ತು, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಹಲವು ಮನೆಗಳನ್ನು ಉಳಿಸಿದಂತಾಗುತ್ತಿತ್ತು. ಈಗಲಾದರೂ ಈ ತೀರ್ಪು ಬಂದಿದ್ದು, ಈ ತೀರ್ಪಿನಿಂದ ಬಡವರಿಗೆ ಅದರಲ್ಲೂ ಬಿಜೆಪಿಯಿಂದ ಗುರಿಯಾಗಿರುವ ಅಲ್ಪಸಂಖ್ಯಾತರಿಗೆ ಹಾಗೂ ಭವಿಷ್ಯದಲ್ಲಿ ಸಂಕಷ್ಟಕ್ಕೆ ಸಿಲುಕುವವರಿಗೆ ನ್ಯಾಯ ಸಿಗಲಿದೆ ಎಂದು ಬೃಂದಾಕಾರಟ್ ಹೇಳಿದ್ದಾರೆ.