ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯದಲ್ಲಿ ನಡೆಯುತ್ತಿರುವ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 13ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕನ್ನಡ ಒಕ್ಕೂಟಗಳ ಸಭೆಯ ಬಳಿಕ ಮಾತನಾಡಿದ ಹೋರಾಟಗಾರ ವಾಟಾಳ್ ನಾಗರಾಜ್, ಆಸ್ಪತ್ರೆ ಮತ್ತು ಆಂಬುಲೆನ್ಸ್ ಸೇವೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಸಂಪೂರ್ಣ ಬಂದ್‌ಗೆ ಎಲ್ಲರೂ ಬೆಂಬಲ ನೀಡುವಂತೆ ಮನವಿ ಮಾಡಿದರು. ರೈತರು, ಕಾರ್ಮಿಕರು, ಹೋಟೆಲ್ ಸಂಘ, ಎಪಿಎಂಸಿ, ಲಾರಿ ಮಾಲೀಕರು, ಆಟೋ ಚಾಲಕರು, ಚಿತ್ರರಂಗ ಸೇರಿದಂತೆ ವಿವಿಧ ವಲಯಗಳ ಬೆಂಬಲ ಕೋರಲಾಗಿದೆ. ಜೊತೆಗೆ ಮಾಲ್‌ಗಳು, ಚಿತ್ರಮಂದಿರಗಳು, ಬಸ್‌ಗಳು, ಓಲಾ-ಉಬರ್ ಸೇವೆಗಳು ಹಾಗೂ ವಿಮಾನ ಸಂಚಾರವೂ ಬಂದ್‌ಗೆ ಬೆಂಬಲ ನೀಡಬೇಕೆಂದು ಒತ್ತಾಯಿಸಿದರು.
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳ ನಡೆಯನ್ನು ಟೀಕಿಸಿದ ಅವರು, ರೈತರು ಹಾಗೂ ಕನ್ನಡಪರ ಸಂಘಟನೆಗಳೊಂದಿಗೆ ಮೊದಲು ಚರ್ಚೆ ನಡೆಸಬೇಕು ಮತ್ತು ತುರ್ತು ವಿಧಾನಸಭೆ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ನಟ-ರಾಜಕಾರಣಿ ವಿಜಯ್ ಅವರ ಆಗಸ್ಟ್ 3ರ ಕರ್ನಾಟಕ ಭೇಟಿ ಕುರಿತು ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಕಾವೇರಿ ವಿಚಾರದಲ್ಲಿ ಕರ್ನಾಟಕದ ಪರ ನಿಲುವು ಸ್ಪಷ್ಟಪಡಿಸದಿದ್ದರೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು. ಬಂದ್‌ಗೆ ಪದೇಪದೇ ಕರೆ ನೀಡುತ್ತಾರೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಅವರು, ತಾವು ಹಲವು ದಶಕಗಳಿಂದ ಕನ್ನಡ ಮತ್ತು ರೈತರ ಪರ ಹೋರಾಟ ನಡೆಸುತ್ತಿದ್ದು, ಹೋರಾಟವೇ ತಮ್ಮ ಬದ್ಧತೆಯಾಗಿದೆ ಎಂದು ಹೇಳಿದರು.
