Tuesday, June 18, 2024

ಸತ್ಯ | ನ್ಯಾಯ |ಧರ್ಮ

ಆತ್ಮ ವಂಚಕ ರಾಜಕಾರಣಿಗಳಿಂದ ಕಾವೇರಿ ರಾಜಕಾರಣ

“ಕಾವೇರಿ ವಿಚಾರದಲ್ಲಿ ನಮ್ಮ ಅನುಭವಗಳೆಲ್ಲ ಕಹಿಯಾಗಿರುವಂತವು. ಯಾಕೆಂದರೆ, ತಮಿಳುನಾಡಿನಲ್ಲಿ ಇರುವಂತೆ ನಮ್ಮಲ್ಲಿ ರಾಜಕೀಯ ಒಗ್ಗಟ್ಟು ಇಲ್ಲ. ಡಿಎಂಕೆ ಇರಲಿ, ಎಐಎಡಿಎಂಕೆ ಇರಲಿ ಕಾವೇರಿ ವಿಚಾರ ಬಂದಾಗ ಒಂದಾಗಿ ಬಿಡುತ್ತಾರೆ. ಆದರೆ, ಇಲ್ಲಿ ಏನಾಗುತ್ತೆ ಅನ್ನೋದನ್ನು ನಾನು ನೋಡುತ್ತಾ ಬಂದಿದ್ದೇನೆ. ಸಿದ್ದರಾಮಯ್ಯನೂ ಅಂತದ್ದೇ ಪರಿಸ್ಥಿತಿ ಎದುರಿಸದಂತಾಗಲಿ ಎಂದು ನಾನು ಆಶಿಸುತ್ತೇನೆ. ಹಾಗಾಗಿ, ಆದೇಶಿಸಿರುವಷ್ಟು ನೀರನ್ನು ದಯಮಾಡಿ ಹರಿಸಿ ಎಂದು ಹೇಳುತ್ತೇನೆ – ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, 2016

‘ಸರಕಾರ ತಮಿಳುನಾಡಿಗೆ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು’. ‘ಕಾಂಗ್ರೆಸ್ ಮತ್ತು ಡಿಎಂಕೆ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವುದರಿಂದ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ’. ‘ಸುಪ್ರೀಂ ಕೋರ್ಟ್ ಗೆ ಮೊದಲೇ ಹೋಗುವುದು ಬಿಟ್ಟು ನೀರು ಖಾಲಿಯಾದ ಮೇಲೆ ಹೋಗುತ್ತಿದ್ದಾರೆ’. ಪ್ರಾಧಿಕಾರ ಮತ್ತು ನ್ಯಾಯಾಲಯದ ಮುಂದೆ ಸರಕಾರ ಸರಿಯಾದ ವಾದ ಮಂಡಿಸಲು ವಿಫಲವಾಗಿದೆ. ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಈ ಸರಕಾರ ವಿಫಲವಾಗಿದೆ’. ‘ನಮ್ಮ ಕಾಲದಲ್ಲಿ ಸುಪ್ರೀಂ ಕೋರ್ಟ್ ಆದೇಶವಿದ್ದರೂ ನಾವು ನೀರು ಬಿಟ್ಟಿರಲಿಲ್ಲ’…

ಇವೆಲ್ಲ ಮೊನ್ನೆ ಕಾವೇರಿ ಗಲಾಟೆ ಪರಮಾವಧಿಗೆ ತಲಪಿದ್ದಾಗ ಮಾಧ್ಯಮಗಳಲ್ಲಿ ಕೇಳಿಬಂದ ತರಹೇವಾರಿ ಹೇಳಿಕೆಗಳು. ಜನಸಾಮಾನ್ಯರಿಗೆ ಕಾವೇರಿ ನದಿ ನೀರಿನ ಹಂಚಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುವುದು ಸಾಧ್ಯವಿಲ್ಲ. ಅದರಲ್ಲೂ ಕಾವೇರಿ ಕೊಳ್ಳದ ರೈತರು ಈ ವಿಚಾರದಲ್ಲಿ ಭಾವಾವೇಶಕ್ಕೆ ಒಳಗಾಗಿ ಇಂತಹ ಮಾತುಗಳನ್ನು ಆಡಿದರೆ ಅದರಲ್ಲಿ ತಪ್ಪೂ ಇಲ್ಲ, ಅಚ್ಚರಿಯೂ ಇಲ್ಲ. ಆದರೆ, ಈಗಾಗಲೇ ಸರಕಾರ ನಡೆಸಿ, ಕಾವೇರಿ ಸಮಸ್ಯೆ ಎದುರಿಸಿದ ರಾಜಕಾರಣಿಗಳೂ ಇಂತಹ ಹಗುರ ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆ ಏನು ಹೇಳೋಣ?!

ತಮಿಳುನಾಡಿನವರಿಂದ ಒಂದು ವಿಷಯವನ್ನಂತೂ ನಾವು ಅವಶ್ಯವಾಗಿ ಕಲಿಯುವ ಅಗತ್ಯವಿದೆ. ಅದು ಭಾಷೆಯ ವಿಷಯವಿರಬಹುದು, ನೆಲ, ನೀರಿನ ವಿಷಯವಿರಬಹುದು, ಕೇಂದ್ರೀಯ ಅನುದಾನಗಳ ವಿಷಯವಿರಬಹುದು, ತಮಿಳುನಾಡಿನ ಹಿತಾಸಕ್ತಿಯ ವಿಷಯ ಬಂದಾಗ ಅಲ್ಲಿನ ಎಲ್ಲ ರಾಜಕೀಯ ಪಕ್ಷಗಳೂ ಒಂದಾಗಿ ತಮ್ಮ ರಾಜ್ಯದ ಪರ ನಿಲ್ಲುತ್ತವೆ. ಸಂಸತ್ತಿನಲ್ಲಿ ಒಟ್ಟಾಗಿ ಹೋರಾಡುತ್ತವೆ.

ಬಿಜೆಪಿಯ ಆಕ್ಷೇಪಾರ್ಹ ನಡೆ

ಆದರೆ ನಮ್ಮ ರಾಜ್ಯದ ರಾಜಕೀಯ ಪಕ್ಷಗಳು ಇದಕ್ಕೆ ವಿರುದ್ಧ!. ಉದಾಹರಣೆಗೆ, ಈಗ ಸಂಸತ್ತಿನಲ್ಲಿ ಬಿಜೆಪಿಯ 25 ಸದಸ್ಯರಿದ್ದಾರೆ; ರಾಜ್ಯಸಭಾ ಸದಸ್ಯರೂ ಇದ್ದಾರೆ. ಕಾವೇರಿ ನೀರಿನ ವಿಷಯದಲ್ಲಿ ಪ್ರಧಾನಿಯವರು ಈ ವಿಷಯದಲ್ಲಿ ಹಸ್ತಕ್ಷೇಪ ನಡೆಸಬೇಕಿತ್ತು ಮತ್ತು ಹೀಗೆ ಹಸ್ತಕ್ಷೇಪ ಮಾಡುವಂತೆ ಈ ಸಂಸದರು ಒತ್ತಾಯ ಮಾಡಬೇಕಿತ್ತು. ಇತರ ದಿನಗಳ ಕತೆ ಏನೇ ಇರಲಿ, ಕಾವೇರಿ ನೀರು ಹಂಚಿಕೆ ವಿವಾದದಂತಹ ಸಂದರ್ಭದಲ್ಲಿ, ಕಾಂಗ್ರೆಸ್ ವಿರುದ್ಧ ಹೋರಾಡುವುದು ಬಿಟ್ಟು, ರಾಜ್ಯಕ್ಕೆ ನ್ಯಾಯ ದೊರೆಯುವ ಉದ್ದೇಶದಿಂದ ಹೊರಗಿನ ಶಕ್ತಿಗಳ ವಿರುದ್ಧ ಹೋರಾಡಬೇಕಾಗಿತ್ತು.

ಆದರೆ, ಕಳೆದ ಒಂದು ದಶಕದಿಂದ ಹಿಂದಿ ಹೇರಿಕೆಯ ಸಹಿತ ಅನೇಕ ವಿಷಯಗಳಲ್ಲಿ ನಮ್ಮ ಬಿಜೆಪಿಯ ಸಂಸದರು ಕೇಂದ್ರದ ಪರ, ಅದೂ ಬಹಿರಂಗವಾಗಿಯೇ ನಿಂತುದೇ ಹೆಚ್ಚು. ಶೋಭಾ ಕರಂದ್ಲಾಜೆಯವರಂತೂ ಹಿಂದಿ ಬಾರದಿದ್ದರೂ (ಇಂಗ್ಲಿಷ್ ನಲ್ಲಿ ಮಾತನಾಡುವ ಅವಕಾಶವಿದ್ದರೂ), ವರಿಷ್ಠರನ್ನು ಮೆಚ್ಚಿಸಲೋ ಎಂಬಂತೆ ಹಿಂದಿ ಮಾತನಾಡಲು ಯತ್ನಿಸಿ ನಗೆಪಾಟಲಿಗೀಡಾಗುತ್ತಿರುತ್ತಾರೆ. ದೊಡ್ಡ ಸ್ಥಾನದಲ್ಲಿರುವ ಪ್ರಹ್ಲಾದ ಜೋಷಿಯವರಿಗೂ ಕರ್ನಾಟಕದ ಹಿತಾಸಕ್ತಿಗಿಂತಲೂ ಬಿಜೆಪಿಯ ಮತ್ತು ನರೇಂದ್ರ ಮೋದಿಯವರ ಹಿತಾಸಕ್ತಿಯೇ ಮುಖ್ಯ. ತಮ್ಮ ಮತದಾರರು ಇದನ್ನು ಗಮನಿಸಬಹುದು ಎಂಬ ಅಳುಕೂ ಇಲ್ಲದೆ ಹೀಗೆ ಕರ್ನಾಟಕದ ಹಿತಾಸಕ್ತಿ ಕಡೆಗಣಿಸಿ ಅವರು ನಡೆದುಕೊಳ್ಳುತ್ತಿರುತ್ತಾರೆ!

ಮೊನ್ನೆಯ ಕಾವೇರಿ ಗಲಾಟೆಯ ಸಂದರ್ಭದಲ್ಲಿ ಬಿಜೆಪಿಯವರು ತಮ್ಮ ಪಾಲಿನ ಕೆಲಸ ಮಾಡಲಾಗದಿದ್ದರೆ ಕನಿಷ್ಠಪಕ್ಷ ಸುಮ್ಮನಾದರೂ ಇರಬಹುದಾಗಿತ್ತು. ಆದರೆ ಅವರೂ ಹೋರಾಟದಲ್ಲಿ ಸೇರಿಕೊಂಡರು. ಕಾವೇರಿ ನೀರಿನ ಪರವಾಗಿ ಅಲ್ಲ, ಕರ್ನಾಟಕದ ಕಾಂಗ್ರೆಸ್ ಸರಕಾರದ ವಿರುದ್ಧ. ರಾಜಕೀಯ ಲಾಭವೇ ಅವರಿಗೆ ಮುಖ್ಯವಾಯಿತು.!

ಅವರು ಮಂಡಿಸಿದ ವಾದವಾದರೂ ಎಂಥದ್ದು? ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಸಿದ್ಧರಾಮಯ್ಯ ಸರಕಾರ ವಿಫಲವಾಗಿದೆ, ಸರಿಯಾದ ವಾದ ಮಂಡಿಸಲಿಲ್ಲ, ಪ್ರಧಾನಿಯವರು ಕರ್ನಾಟಕಕ್ಕೆ ಮತ್ತು ತಮಿಳುನಾಡಿಗೆ ಮಾತ್ರ ಪ್ರಧಾನಿಯಲ್ಲ, ನೀವೇ ತಮಿಳುನಾಡು ಸರಕಾರದೊಂದಿಗೆ ಮಾತಾಡಿ ಸಮಸ್ಯೆ ಬಗೆಹರಿಸಬೇಕು, ಪ್ರಧಾನಿಯವರು ಯಾಕೆ ಹಸ್ತಕ್ಷೇಪ ಮಾಡಬೇಕು? ಹೀಗೆ.

ಸರಿಯಾದ ವಾದ ಮಂಡಿಸಿಲ್ಲ ಅಂದರೆ ಏನು?!

ಆದರೆ, ವಾಸ್ತವ ಬಿಜೆಪಿಗೂ ಗೊತ್ತಿದೆ. ಈ ಲಘುವಾದ ಹೇಳಿಕೆಗಳು, ನಿಲುವುಗಳೆಲ್ಲ ಕೇವಲ ರಾಜಕೀಯ ಲಾಭಕ್ಕಾಗಿ. ನ್ಯಾಯಾಲಯದ ಮುಂದೆ ಸರಿಯಾದ ವಾದ ಮಂಡಿಸಿಲ್ಲ, ಮನವರಿಕೆ ಮಾಡಿಕೊಡಲು ವಿಫಲವಾಗಿದ್ದಾರೆ ಎಂದರೆ ಏನರ್ಥ? ಕಳೆದ ಮೂರು ನಾಲ್ಕು ದಶಕಗಳಿಂದ ದೇಶದ ಖ್ಯಾತ ವಕೀಲರಾದ ಫಾಲಿ ಎಸ್ ನಾರಿಮನ್ ರಿಂದ ಹಿಡಿದು ಘಟಾನುಘಟಿ ನ್ಯಾಯವಾದಿಗಳು ಕಾವೇರಿ ವಿಷಯದಲ್ಲಿ ಕರ್ನಾಟಕದ ಪರ ವಕಾಲತ್ತು ಮಾಡುತ್ತಲೇ ಇದ್ದಾರೆ (ನೂರು ಕೋಟಿಗೂ ಅಧಿಕ ಹಣ ಈ ವಕೀಲರಿಗೇ ಶುಲ್ಕವಾಗಿ ಸಂದಾಯವಾಗಿದೆ!). ಇವರೆಲ್ಲ ಸರಿಯಾದ ವಾದ ಮಾಡಿಲ್ಲವೆಂದು ಅರ್ಥವೇ? ಇನ್ನು, ‘ಮನವರಿಕೆ ಮಾಡಿಕೊಡುವುದು’ ಎಂದರೆ ಏನರ್ಥ? ಅದೊಂದು ಅಸಂಗತ ಹೇಳಿಕೆಯಲ್ಲವೇ?

ಕಾವೇರಿ ನದಿ ನೀರಿನ ಹಂಚಿಕೆಯ ವಿವಾದಕ್ಕೆ ನೂರು ವರ್ಷಕ್ಕೂ ಅಧಿಕ ಕಾಲದ ಇತಿಹಾಸವಿದ್ದು, ಅದು ತುಂಬಾ ಸಂಕೀರ್ಣವಾದುದು. ಪಾಮರರಾದ ನಮ್ಮ ವಿಶ್ಲೇಷಣೆಗೆ ದಕ್ಕದಂಥದ್ದು. ಆದರೂ, ಕೆಲ ಸಾಮಾನ್ಯ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಲ್ಲ. ಉದಾಹರಣೆಗೆ, ಪ್ರಾಧಿಕಾರ ಮತ್ತು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಬೇಕು ಎಂದು ಕೆಲವರು ಬಾಲಿಷ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಮ್ಮದು ಒಕ್ಕೂಟ ವ್ಯವಸ್ಥೆ. ನೀರು ಒಂದು ರಾಜ್ಯಕ್ಕೆ ಸೇರಿದ್ದಲ್ಲ, ಇಡೀ ದೇಶಕ್ಕೆ ಸೇರಿದ್ದು. ಇಲ್ಲಿ ನ್ಯಾಯಾಂಗದ ಆದೇಶವನ್ನು ಪಾಲಿಸಲೇಬೇಕು. ಇಲ್ಲವಾದರೆ ಸಾಂವಿಧಾನಿಕ ಬಿಕ್ಕಟ್ಟು ತಲೆದೋರುತ್ತದೆ. ನ್ಯಾಯಾಲಯದ ಆದೇಶವನ್ನು ಪಾಲಿಸದಿದ್ದರೆ ಜಲಾಶಯವನ್ನು ಕೇಂದ್ರ ತನ್ನ ಸುಪರ್ದಿಗೆ ಪಡೆದುಕೊಳ್ಳುವಂತೆ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆಯೂ ಸುಪ್ರೀಂ ಕೋರ್ಟ್ ಆದೇಶಿಸಬಹುದು.

ಬಂಗಾರಪ್ಪ ಹಿಂದೊಮ್ಮೆ ನೀರು ಬಿಡಲು ನಿರಾಕರಿಸಿದ್ದರು ಎಂದು ಹೇಳುವವರಿದ್ದಾರೆ. ಇದರಿಂದ ಆದ ಸಮಸ್ಯೆ ಏನು ಎಂಬುದನ್ನು ಯಾರೂ ಹೇಳುವುದಿಲ್ಲ. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದಾರೆ,  ‘ಈಗ ಎಲ್ಲರೂ 1991ರಲ್ಲಿ ಎಸ್ ಬಂಗಾರಪ್ಪನವರು, ‘ಕಾವೇರಿಕ ಕರ್ನಾಟಕದ ಸ್ವತ್ತು’ ಎಂಬ ಸುಗ್ರೀವಾಜ್ಞೆ ತಂದ ಬಗ್ಗೆ ಮಾತಾಡುತ್ತಾರೆ. ಅದು ಬಿದ್ದು ಹೋಯಿತು ಮಾತ್ರವಲ್ಲ, ಅದರ ಕಾರಣಕ್ಕೆ ನಾವು ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ನಿಂದನೆ ಮತ್ತು ಹಿನ್ನಡೆಗಳನ್ನು ಅನುಭವಿಸಬೇಕಾಯ್ತು’.

ಈ ಹಿಂದೆಯೂ ನೀರು ಬಿಟ್ಟಿರಲಿಲ್ಲವೇ?

ಈಗ ಸರಕಾರ ಪ್ರಾಧಿಕಾರದ ಆದೇಶದಂತೆ ನೀರು ಬಿಟ್ಟುದನ್ನು ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳವರು ಆಕ್ಷೇಪಿಸುತ್ತಿದ್ದಾರೆ. 2012ರ ಇಂತಹದ್ದೇ ಸಂದರ್ಭದಲ್ಲಿ ಬಿಜೆಪಿ‌ ಸರ್ಕಾರ ನ್ಯಾಯಾಲಯದ ಆದೇಶಕ್ಕೆ ಮಣಿದು ತಮಿಳುನಾಡಿಗೆ ಪ್ರತಿದಿನ 10 ಸಾವಿರ ಕ್ಯುಸೆಕ್ಸ್ ನೀರು ಬಿಟ್ಟಿತ್ತು! ಆಗ ಮುಖ್ಯಮಂತ್ರಿಯಾಗಿದ್ದವರು ಜಗದೀಶ್ ಶೆಟ್ಟರ್ ಮತ್ತು ಜಲಸಂಪನ್ಮೂಲ ಸಚಿವರಾಗಿದ್ದವರು ಬಸವರಾಜ ಬೊಮ್ಮಾಯಿ. 1995ರಲ್ಲಿ ಇಂತಹದ್ದೇ ಪರಿಸ್ಥಿತಿಯಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ದೇವೇಗೌಡ ಅವರು ತಮಿಳುನಾಡಿಗೆ ನೀರು ಬಿಟ್ಟು‌ ಅದನ್ನು ಸಮರ್ಥಿಸಿಕೊಂಡಿದ್ದರು ಕೂಡ.

ಪ್ರಧಾನಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. 1995 ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಕಾವೇರಿ ವಿವಾದದಲ್ಲಿ ಪ್ರಧಾನಿಯವರು ಮಧ್ಯೆ ಪ್ರವೇಶಿಸಬೇಕೆಂದು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದರು. ದೇವೇಗೌಡರೇ ಈ ಬಗ್ಗೆ ಮಾತನಾಡುತ್ತಾ ಒಂದೆಡೆ, ‘ಖಂಡಿತ, ಪ್ರಧಾನಿಗಳು ಇಲ್ಲಿ ಮಧ್ಯಪ್ರವೇಶ ಮಾಡಬಹುದು. 1996ರಲ್ಲಿ ನಾನು ಪ್ರಧಾನಿಯಾಗಿದ್ದಾಗ, ನರ್ಮದಾ ಆಣೆಕಟ್ಟಿನ ವಿಚಾರವಾಗಿ ಮೇಧಾ ಪಾಟ್ಕರ್ ಅವರ ಹೋರಾಟ ತೀವ್ರ ಸ್ವರೂಪ ಪಡೆದಿದ್ದಾಗ, ನಾನು ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸಿದ್ದೆ. ಅಲ್ಲಿ ನಾವೆಲ್ಲ ಚರ್ಚೆ ಮಾಡಿ, ಆಣೆಕಟ್ಟಿನ ಎತ್ತರ ಎಷ್ಟು ಇರಬೇಕು ಎಂಬ ಒಮ್ಮತದ ತೀರ್ಮಾನಕ್ಕೆ ಬಂದು, ಸಮಸ್ಯೆ ಬಗೆಹರಿಸಿದ್ದೆವು’ ಎನ್ನುತ್ತಾರೆ.

ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶದಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂ ಕೋರ್ಟ್‌ ಹಿಂದೆ ಸರಿದ ಬೆನ್ನಿಗೇ ಕರ್ನಾಟಕದಲ್ಲಿ ಈ ವಿಚಾರ ಸಂಪೂರ್ಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸರ್ಕಾರವು ಪ್ರಾಧಿಕಾರದ ಮುಂದೆಯಾಗಲಿ, ಸುಪ್ರೀಂ ಕೋರ್ಟ್‌ ಮುಂದೆಯಾಗಲಿ ಸಮರ್ಥವಾಗಿ ವಾದ ಮಂಡಿಸಿಲ್ಲ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಆದರೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೆಪ್ಟೆಂಬರ್ 19ರಂದು ನಡೆಸಿರುವ 24 ನೇ ಸಭೆಯ (ತುರ್ತು ಸಭೆ) ನಡಾವಳಿಗಳು ಬೇರೆಯದೇ ವಿಚಾರ ಹೇಳುತ್ತಿವೆ.

ಈ ಸಭೆಯಲ್ಲಿ ತಮಿಳುನಾಡು 12,500 ಕ್ಯೂಸೆಕ್ಸ್‌ ನೀರು ಬಿಡುಗಡೆಗೆ ಕೋರಿತ್ತು, ಇದಕ್ಕೆ ಪ್ರತಿಯಾಗಿ ಕರ್ನಾಟಕದ ಅಧಿಕಾರಿಗಳು ವಾಸ್ತವಾಂಶಗಳನ್ನು ಮುಂದಿಟ್ಟು, ತಮಗೆ ತಮಿಳುನಾಡು ಕೋರಿಕೆಯನ್ನು ಮನ್ನಿಸಲು ಸಾಧ್ಯವಿಲ್ಲ. ತಾವು ಕೆಆರ್‌ಎಸ್‌ ಹಾಗೂ ಕಬಿನಿಯಿಂದ ಒಟ್ಟು 2500 ಕ್ಯೂಸೆಕ್ಸ್‌ ನೀರು ಮಾತ್ರ ಹರಿಸಬಹುದು ಎಂದಿದ್ದರು. ಅಂತಿಮವಾಗಿ ಪ್ರಾಧಿಕಾರವು ಸೆ.13ರಿಂದ ಸೆ.19ರವರೆಗೆ ಪ್ರತಿದಿನ 5000 ಕ್ಯೂಸೆಕ್ಸ್‌ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಸೆ.12ರ ಅದೇಶವನ್ನು ಎತ್ತಿಹಿಡಿದಿತ್ತು.

ಪ್ರಾಧಿಕಾರದ ಮುಂದೆ ಕರ್ನಾಟಕದ ವಾದ

ಪ್ರಸಕ್ತ ವರ್ಷದಲ್ಲಿ ಮಳೆಯ ಅಭಾವ ಉಂಟಾಗಿದ್ದು, ಶೇ.75ರಷ್ಟು ನೈರುತ್ಯ ಮುಂಗಾರು ಈಗಾಗಲೇ ಪೂರ್ಣಗೊಂಡಿದೆ. ಮಳೆ ಸಾಧ್ಯತೆ ಕ್ಷೀಣಿಸಿದ್ದು, ಒಂದೊಮ್ಮೆ ಮಳೆಯಾದರೂ ಕಾವೇರಿ ಜಲಾನಯನ ಪ್ರದೇಶದಲ್ಲಿನ ಪರಿಸ್ಥಿತಿ ಬದಲಾಗುವುದಿಲ್ಲ. ಪರಿಸ್ಥಿತಿಯು ಇನ್ನೂ ಕೆಟ್ಟ ಸ್ಥಿತಿಗೆ ಹೊರಳಬಹುದು ಎಂಬುದು ನಮ್ಮ ಆತಂಕವಾಗಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಸಂಕಷ್ಟ ಹಂಚಿಕೆಗೆ ಮುಂದಾಗಬೇಕಿದೆ. ಕಾವೇರಿ ನೀರು ವಿವಾದ ನ್ಯಾಯ ಮಂಡಳಿಯ ಅಧಿಸೂಚನೆಯ ಕಲಂ VII ಜೊತೆಗೆ ಕಲಂ XIX(ಎ) ಅಡಿ ನಿರ್ದೇಶಿಸಿರುವಂತೆ ಸೂಕ್ತ ಅನುಪಾತದ ಅನ್ವಯ ನೀರು ಹಂಚಿಕೆಗೆ ಮುಂದಾಗಬೇಕು. ಈ ವಿಚಾರವನ್ನು ಸುಪ್ರೀಂ ಕೋರ್ಟ್ 2018ರ ತೀರ್ಪಿನಲ್ಲಿಯೂ ಬದಲು ಮಾಡಿಲ್ಲ.

2023ರ ಸೆಪ್ಟೆಂಬರ್ 12ರಂದು ನಡೆದ ಸಭೆಯಲ್ಲಿ CWRC ಪ್ರತಿ ದಿನ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ತಪ್ಪಾಗಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 19ರಂದು CWRC ಗೆ ಪತ್ರ ಬರೆದು ಹೊಸದಾಗಿ ಪ್ರಕರಣ ಪರಿಗಣಿಸಿ, ನಿರ್ದೇಶಿಸುವಂತೆ ಕೋರಲಾಗಿದೆ.

ಜೂನ್ 1ರಿಂದ ಸೆಪ್ಟೆಂಬರ್ 11ರವರೆಗೆ ಕರ್ನಾಟಕದ ಜಲಾಶಗಳಿಗೆ 104.273 ಟಿಎಂಸಿ ನೀರು ಮಾತ್ರ ಹರಿದುಬಂದಿದೆ. ಕಳೆದ 30 ವರ್ಷಗಳ ಸರಾಸರಿ ಮಳೆ ಪ್ರಮಾಣದ ಹೋಲಿಕೆಯಲ್ಲಿ ಶೇ. 54.42ರಷ್ಟು ಕೊರತೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 228.793 ಟಿಎಂಸಿ ನೀರು ಹರಿದು ಬರುತ್ತಿತ್ತು.

ಕರ್ನಾಟಕದಲ್ಲಿ ಬರ ಪರಿಸ್ಥಿತಿ ಇದ್ದು, ಕಾವೇರಿ ಪ್ರದೇಶದಲ್ಲಿ ಬರುವ 15 ತಾಲ್ಲೂಕುಗಳು ಬರಪೀಡಿತವಾಗಿವೆ. ಇದನ್ನು ಸಹ ಪ್ರಾಧಿಕಾರವು ಪರಿಣಿಸಬೇಕಿದೆ.

ಇದು ಪ್ರಾಧಿಕಾರದ ಮುಂದೆ ಮಂಡಿಸಲಾದ ವಾದದ ಕೆಲ ಭಾಗ.

ದೇವೇಗೌಡರ ಮಾತು ವಿವೇಕದಿಂದ ಕೂಡಿದ್ದು

“ಕಾವೇರಿ ವಿಚಾರದಲ್ಲಿ ನಮ್ಮ ಅನುಭವಗಳೆಲ್ಲ ಕಹಿಯಾಗಿರುವಂತವು. ಯಾಕೆಂದರೆ, ತಮಿಳುನಾಡಿನಲ್ಲಿ ಇರುವಂತೆ ನಮ್ಮಲ್ಲಿ ರಾಜಕೀಯ ಒಗ್ಗಟ್ಟು ಇಲ್ಲ. ಡಿಎಂಕೆ ಇರಲಿ, ಎಐಎಡಿಎಂಕೆ ಇರಲಿ ಕಾವೇರಿ ವಿಚಾರ ಬಂದಾಗ ಒಂದಾಗಿ ಬಿಡುತ್ತಾರೆ. ಆದರೆ, ಇಲ್ಲಿ ಏನಾಗುತ್ತೆ ಅನ್ನೋದನ್ನು ನಾನು ನೋಡುತ್ತಾ ಬಂದಿದ್ದೇನೆ. ಸಿದ್ದರಾಮಯ್ಯನೂ ಅಂತದ್ದೇ ಪರಿಸ್ಥಿತಿ ಎದುರಿಸದಂತಾಗಲಿ ಎಂದು ನಾನು ಆಶಿಸುತ್ತೇನೆ. ಹಾಗಾಗಿ, ಆದೇಶಿಸಿರುವಷ್ಟು ನೀರನ್ನು ದಯಮಾಡಿ ಹರಿಸಿ ಎಂದು ಹೇಳುತ್ತೇನೆ. ಬಂದ್‌ಗಳು, ವಾಹನಗಳಿಗೆ ಬೆಂಕಿ ಹಚ್ಚುವುದರಿಂದ ನಮಗೆ ಸಿಗುವುದಾದರೂ ಏನು? ಬರೀ ನಷ್ಟ! ನಮಗೀಗ ಬೇಕಿರುವುದು ರಾಜಕೀಯ ಒಗ್ಗಟ್ಟು ಹಾಗೂ ಆ ಒಗ್ಗಟ್ಟು ಬಳಸಿಕೊಂಡು ಒತ್ತಡ ರೂಪಿಸುವುದು ಮಾತ್ರ” ಇದು 2016 ರಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಆಡಿದ ವಿವೇಕಯುತ ಮಾತು.

ಮೊನ್ನೆಯ ಕರ್ನಾಟಕ ಬಂದ್ ನಿಂದ ರಾಜ್ಯಕ್ಕೆ ಅಂದಾಜು 400 ಕೋಟಿ ರುಪಾಯಿ ನಷ್ಟವಾಗಿದೆ ಎಂದು ರಾಜ್ಯ ವಾಣಿಜ್ಯ ಮಂಡಳಿ ಹೇಳಿದೆ. ಇತರ ನಷ್ಟ ಲೆಕ್ಕ ಹಾಕಿದವರಿಲ್ಲ. ಕರ್ನಾಟಕದ ರಾಜಕಾರಣಿಗಳ ಮಟ್ಟಿಗೆ ಕಾವೇರಿ ನದಿ ನೀರು ಹಂಚಿಕೆಯ ಬಗ್ಗೆ ಎಚ್ ಡಿ ದೇವೇಗೌಡರಿಗೆ ಗೊತ್ತಿರುವಷ್ಟು ಇತರ ಯಾರಿಗೂ ಗೊತ್ತಿರುವುದು ಸಾಧ್ಯವಿಲ್ಲ. ಯಾಕೆಂದರೆ, ಅವರು ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನಿಯಾಗಿ ಈ ವಿಷಯವನ್ನು ನಿಭಾಯಿಸಿದವರು. ಹಾಗಾಗಿ, ಅವರ ಈ ಮೇಲಿನ ವಿವೇಕದ ಮಾತು ನಮಗೆ ಮಾರ್ಗದರ್ಶಿಯಾಗಬೇಕು. ಭಾವದ ಕೈಗೆ ಬುದ್ಧಿಯನ್ನು ಕೊಡದೆ ವಿವೇಕದಿಂದ ನಾವು ವರ್ತಿಸಬೇಕು.

ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಬೆಂಕಿಯಿಂದ ಉಪಯೋಗವಿಲ್ಲ, ಇದ್ದರೆ ಬೆಳಕಿನಿಂದ ಮಾತ್ರ. ಹಿಂದೆ ಕಾವೇರಿ ನದಿ ನೀರು ಸಮೀಕ್ಷಾ ತಂಡಗಳನ್ನು ಹೂಗಳಿಂದ ತಮಿಳುನಾಡು ಸ್ವಾಗತಿಸಿತು. ನಾವು ಕಲ್ಲುಗಳಿಂದ ಸ್ವಾಗತಿಸಿದೆವು. ಅದರ ಪರಿಣಾಮ ಏನಾಯಿತು ಎನ್ನುವುದು ಈಗ ಇತಿಹಾಸ. ಅಂತಹ ತಪ್ಪು ಮತ್ತೊಮ್ಮೆ ಮಾಡದಿರೋಣ. ಶಾಂತಿಯುತ ಪ್ರತಿಭಟನೆ, ಒತ್ತಡ ತಂತ್ರ ಮುಂದುವರಿಯುತ್ತಲೇ ಇರಲಿ. ಆದರೆ ಒಕ್ಕೂಟ ತತ್ವಗಳು, ಸರಕಾರ, ನ್ಯಾಯಾಂಗಗಳ ಮೇಲೆ ನಂಬಿಕೆ ಇರಿಸಿಕೊಂಡು ವಿವಾದದ ಶಾಂತಿಯುತ ಪರಿಹಾರಕ್ಕೆ  ಯತ್ನಿಸೋಣ.

ಶ್ರೀನಿವಾಸ ಕಾರ್ಕಳ

ಚಿಂತಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ಇದನ್ನೂ ಓದಿ-ಚಿಲುಮೆ ಹಗರಣ : ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ

Related Articles

ಇತ್ತೀಚಿನ ಸುದ್ದಿಗಳು