ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿಯೊಬ್ಬ ಬರೋಬ್ಬರಿ ೮ ಎಕರೆ ಭೂಮಿಯನ್ನು ಖರೀದಿಸಿ, ಅದರಲ್ಲಿ ಶಾಲಾ-ಕಾಲೇಜುಗಳ ಸ್ಥಾಪನೆಗಾಗಿ ಭವ್ಯ ಕಟ್ಟಡಗಳನ್ನು ನಿರ್ಮಿಸುತ್ತಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (CBI), ಆರೋಪಿಯ ಇಷ್ಟೊಂದು ಭಾರಿ ಪ್ರಮಾಣದ ಆದಾಯದ ಮೂಲಗಳ ಬಗ್ಗೆ ಈಗ ತೀವ್ರ ನಿಗಾ ಇರಿಸಿದೆ.
ನೀಟ್ ಪೇಪರ್ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪ್ರಸಿದ್ಧ ‘ರೇಣುಕೈ ಕೆಮಿಸ್ಟ್ರಿ ಕ್ಲಾಸಸ್’ (RCC) ಸಂಸ್ಥಾಪಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್‌ನನ್ನು ಸಿಬಿಐ ಈಗಾಗಲೇ ಬಂಧಿಸಿದೆ. ಈತ ಮಹಾರಾಷ್ಟ್ರದ ಲಾತೂರ್ ಸೇರಿದಂತೆ ವಿವಿಧೆಡೆ ಸುಮಾರು ಒಂಬತ್ತು ಕೋಚಿಂಗ್ ಸೆಂಟರ್‌ಗಳನ್ನು ನಡೆಸುತ್ತಿದ್ದಾನೆ. ಇನ್ನು ನೀಟ್ ಪರೀಕ್ಷೆ ನಡೆಸುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಸಮಿತಿಯ ಸದಸ್ಯರಾಗಿದ್ದ ರಸಾಯನಶಾಸ್ತ್ರ ಉಪನ್ಯಾಸಕ ಪಿ.ವಿ. ಕುಲಕರ್ಣಿ ಎಂಬುವವರಿಗೆ ಈ ಶಿವರಾಜ್ ಅತ್ಯಂತ ಆಪ್ತನಾಗಿದ್ದ ಎನ್ನಲಾಗಿದೆ.
ಶಿವರಾಜ್ ಲಾತೂರ್ ಸಮೀಪದ ಖೋಪೆಗಾಂವ್ ಪ್ರದೇಶದಲ್ಲಿ ೮ ಎಕರೆ ಜಮೀನನ್ನು ಖರೀದಿಸಿದ್ದ. ಅಲ್ಲಿ ದೊಡ್ಡ ಮಟ್ಟದ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲು ಯೋಜಿಸಿದ್ದ ಈತ, ಆ ಎಂಟು ಎಕರೆ ಜಾಗದ ಪೈಕಿ ಎರಡೂವರೆ ಎಕರೆ ಪ್ರದೇಶದಲ್ಲಿ ಭಾರಿ ಪ್ರಮಾಣದ ಬಹುಮಹಡಿ ಕಟ್ಟಡವನ್ನು ನಿರ್ಮಿಸುತ್ತಿದ್ದಾನೆ. ಪ್ರಸ್ತುತ ಈ ಕಟ್ಟಡದ ನಿರ್ಮಾಣ ಕಾರ್ಯವು ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.
ಒಬ್ಬ ಕೋಚಿಂಗ್ ಸೆಂಟರ್ ಮಾಲೀಕನಿಗೆ ಇಷ್ಟೊಂದು ದೊಡ್ಡ ಜಮೀನು ಖರೀದಿಸಲು ಮತ್ತು ಕೋಟ್ಯಂತರ ರೂಪಾಯಿ ವೆಚ್ಚದ ಭಾರಿ ಕಟ್ಟಡ ನಿರ್ಮಿಸಲು ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ನೀಟ್ ಪೇಪರ್ ಸೋರಿಕೆಯ ದಂಧೆಯ ಹಣವನ್ನೇ ಈ ಕಟ್ಟಡ ನಿರ್ಮಾಣಕ್ಕೆ ಬಳಸಲಾಗಿದೆಯೇ ಎಂಬ ನಿಟ್ಟಿನಲ್ಲಿ ಸಿಬಿಐ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ದೇಶಾದ್ಯಂತ ಭಾರಿ ಸದ್ದು ಮಾಡಿರುವ ಈ ನೀಟ್ ಪೇಪರ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇದುವರೆಗೆ ಒಟ್ಟು 10 ಮಂದಿ ಆರೋಪಿಗಳನ್ನು ಬಂಧಿಸಿದೆ.
