ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಜಾರಿ ನಿರ್ದೇಶನಾಲಯದ (ED) ಬೆನ್ನಲ್ಲೇ ಈಗ ಕೇಂದ್ರ ತನಿಖಾ ದಳ (CBI) ಸಂಕಷ್ಟ ತಂದೊಡ್ಡಿದೆ. ಪ್ರಕರಣದ ಸಮಗ್ರ ತನಿಖೆ ನಡೆಸುತ್ತಿರುವ ಸಿಬಿಐ, ವಿಚಾರಣೆಗೆ ಹಾಜರಾಗುವಂತೆ ನಾಗೇಂದ್ರ ಅವರಿಗೆ ಅಧಿಕೃತವಾಗಿ ನೋಟಿಸ್ ನೀಡಿದೆ.
ಕಳೆದ ಜನವರಿ 1 ರಂದು ಸಿಬಿಐ ಅಧಿಕಾರಿಗಳು ಬಳ್ಳಾರಿಯಲ್ಲಿರುವ ನಾಗೇಂದ್ರ ಅವರ ಆಪ್ತ ವಿಶ್ವನಾಥ್ ಮತ್ತು ಮಾರುತಿ ಎಂಬುವವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಲಭ್ಯವಾದ ಮಹತ್ವದ ದಾಖಲೆಗಳು ಮತ್ತು ಮಾಹಿತಿಯ ಆಧಾರದ ಮೇಲೆ ಈಗ ನೇರವಾಗಿ ನಾಗೇಂದ್ರ ಅವರಿಗೇ ನೋಟಿಸ್ ಜಾರಿ ಮಾಡಲಾಗಿದೆ. ಈ ಬೆಳವಣಿಗೆಯು ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದ್ದು, ಮರಳಿ ಸಚಿವ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ನಾಗೇಂದ್ರ ಅವರಿಗೆ ಇದು ದೊಡ್ಡ ಹಿನ್ನಡೆಯಾಗಿದೆ.
ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ನಾಗೇಂದ್ರ ಅವರು ಕೆಲವು ತಿಂಗಳುಗಳ ಕಾಲ ಜೈಲು ವಾಸ ಅನುಭವಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಆರಂಭದಲ್ಲಿ ರಾಜ್ಯ ಸರ್ಕಾರದ ವಿಶೇಷ ತನಿಖಾ ತಂಡ (SIT) ಈ ಪ್ರಕರಣದ ತನಿಖೆ ನಡೆಸಿತ್ತು. ಆದರೆ, ಬಿಜೆಪಿ ನಾಯಕರಾದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೈಕೋರ್ಟ್ ಮೆಟ್ಟಿಲೇರಿ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಪ್ರಕರಣದ ಸಂಪೂರ್ಣ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲು ಆದೇಶಿಸಿತ್ತು.
ಈಗ ಸಿಬಿಐ ವಿಚಾರಣೆಗೆ ನೋಟಿಸ್ ನೀಡಿರುವುದು ಹಗರಣದ ಆಳ-ಅಗಲವನ್ನು ಮತ್ತಷ್ಟು ಕೆದಕುವ ಮುನ್ಸೂಚನೆ ನೀಡಿದೆ. ಒಂದು ವೇಳೆ ವಿಚಾರಣೆಯ ವೇಳೆ ಪೂರಕ ಸಾಕ್ಷ್ಯಗಳು ಲಭ್ಯವಾದರೆ ನಾಗೇಂದ್ರ ಅವರಿಗೆ ಮತ್ತೆ ಬಂಧನದ ಭೀತಿ ಎದುರಾಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ವಾಲ್ಮೀಕಿ ನಿಗಮದ ಹಣ ದುರುಪಯೋಗ ಪ್ರಕರಣವು ಈಗ ಹೊಸ ತಿರುವು ಪಡೆದುಕೊಂಡಿದೆ.
