ಬೆಂಗಳೂರು : ರಾಜ್ಯದ (Karnataka) ಪೊಲೀಸ್ ಠಾಣೆಗಳಲ್ಲಿ (Police Stations) ಅಳವಡಿಸಲಾಗಿರುವ ಸಿಸಿಟಿವಿ (CCTV) ಕ್ಯಾಮೆರಾಗಳು ಒಂದು ನಿಮಿಷವೂ ಬಂದ್ ಆಗದೆ ನಿರಂತರವಾಗಿ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದೆ. ರಾಜ್ಯಾದ್ಯಂತ ಇರುವ ಸಿಸಿಟಿವಿ ವ್ಯವಸ್ಥೆಯ ಕಾರ್ಯನಿರ್ವಹಣೆ ಮತ್ತು ತಾಂತ್ರಿಕ ಸ್ಥಿತಿಗತಿಯನ್ನು ಕ್ಷಣಕ್ಷಣಕ್ಕೂ ಪರಿಶೀಲಿಸಲು ಕೇಂದ್ರೀಕೃತ ಡ್ಯಾಶ್‌ಬೋರ್ಡ್ ರೂಪಿಸಬೇಕು ಎಂದು ನ್ಯಾಯಾಲಯ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಸೂಚಿಸಿದೆ.
ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಅಕ್ರಮ ಬಂಧನ ಹಾಗೂ ಕಿರುಕುಳ ನಡೆದಿದೆ ಎಂದು ಆರೋಪಿಸಿದ್ದ ವಿ. ಶೈಲಜಾ ಎಂಬುವರು ತಮ್ಮ ಆರೋಪ ಸಾಬೀತುಪಡಿಸಲು 2024ರ ಸೆಪ್ಟೆಂಬರ್ 4ರ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಕೋರಿದ್ದರು. ಆದರೆ, ವಿದ್ಯುತ್ ಕಡಿತ ಹಾಗೂ ವಿದ್ಯುತ್ ಬ್ಯಾಕಪ್ ಇಲ್ಲದ ಕಾರಣ ದೃಶ್ಯಾವಳಿ ಲಭ್ಯವಿಲ್ಲ ಎಂದು ಪೊಲೀಸರು ಅರ್ಜಿಯನ್ನು ತಿರಸ್ಕರಿಸಿದ್ದರು. ನಂತರ ಮಾಹಿತಿ ಆಯೋಗವೂ ಅರ್ಜಿ ವಜಾಗೊಳಿಸಿದ್ದರಿಂದ ಶೈಲಜಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, 11 ತಿಂಗಳುಗಳ ಕಾಲ ಯುಪಿಎಸ್ ಕೆಟ್ಟುಹೋಗಿದ್ದರೂ ಗಮನಿಸದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಠಾಣಾಧಿಕಾರಿಗಳು ಮತ್ತು ಮೇಲ್ವಿಚಾರಣಾ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಗರಂ ಆದ ನ್ಯಾಯಪೀಠ, ಅರ್ಜಿದಾರರು ಉಲ್ಲೇಖಿಸಿದ ದಿನದಂದು ಬೆಳಗ್ಗೆ 11ರಿಂದ ಮಧ್ಯಾಹ್ನ 2:30ರ ನಡುವೆ ವಿದ್ಯುತ್ ವ್ಯತ್ಯಯವಾಗಿದೆಯೇ ಎಂಬುದರ ಕುರಿತು ತನಿಖೆ ನಡೆಸಲು ಆದೇಶಿಸಿದೆ.
ವಿದ್ಯುತ್ ಕಡಿತದ ನೆಪದಲ್ಲಿ ಸಿಸಿಟಿವಿ ಸ್ಥಗಿತಗೊಂಡರೆ ಠಾಣೆಗಳಲ್ಲಿ ಕ್ಯಾಮೆರಾ ಅಳವಡಿಸುವ ಮೂಲ ಉದ್ದೇಶವೇ ವಿಫಲವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ಹೈಕೋರ್ಟ್, ಪ್ರತಿಯೊಂದು ಠಾಣೆಯ ಸಿಸಿಟಿವಿ, ರೆಕಾರ್ಡರ್, ಯುಪಿಎಸ್ ಹಾಗೂ ಇತರ ಉಪಕರಣಗಳ ಸ್ಥಿತಿಯನ್ನು ಪ್ರದರ್ಶಿಸುವ ಡ್ಯಾಶ್‌ಬೋರ್ಡ್ ನಿರ್ಮಿಸಬೇಕು ಎಂದು ಗೃಹ ಇಲಾಖೆ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ. ಯಾವುದಾದರೂ ಉಪಕರಣದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡರೆ ತಕ್ಷಣವೇ ಸ್ವಯಂಚಾಲಿತ ಎಚ್ಚರಿಕೆ ಸಂದೇಶ ರವಾನೆಯಾಗುವಂತಹ ತಂತ್ರಜ್ಞಾನ ರೂಪಿಸಲು ಸೂಚಿಸಿದೆ.
