ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಆಹಾರ ಸುರಕ್ಷತಾ ಇಲಾಖೆ (Food Safety Department) ಅಧಿಕಾರಿಗಳು ಇತ್ತೀಚೆಗೆ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ, ಕಳಪೆ ಆಹಾರ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದರೂ ಸಾರ್ವಜನಿಕರಲ್ಲಿ ಈ ವ್ಯವಸ್ಥೆಯ ಬಗ್ಗೆ ವಿಶ್ವಾಸ ಮೂಡುತ್ತಿಲ್ಲ. ಲೋಕಲ್ ಸರ್ಕಲ್ಸ್ ನಡೆಸಿದ ನೂತನ ಸಮೀಕ್ಷೆಯೊಂದರಲ್ಲಿ ನಗರದ ಶೇಕಡಾ 43ರಷ್ಟು ಜನರು ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯ ಕಾರ್ಯವೈಖರಿಯ ಮೇಲೆ ಅತ್ಯಂತ ಕಡಿಮೆ ಅಥವಾ ಯಾವುದೇ ನಂಬಿಕೆ ಇಲ್ಲ ಎಂದು ತಿಳಿಸಿದ್ದಾರೆ.
ಸಮೀಕ್ಷೆಯಲ್ಲಿ ಭಾಗವಹಿಸಿದ್ದ 2,762 ನಿವಾಸಿಗಳ ಪೈಕಿ ಶೇಕಡಾ 31ರಷ್ಟು ಮಂದಿ ಕಡಿಮೆ ವಿಶ್ವಾಸ ವ್ಯಕ್ತಪಡಿಸಿದ್ದರೆ, ಕೇವಲ ಶೇಕಡಾ 23ರಷ್ಟು ಜನರು ಮಾತ್ರ ಪ್ರಸ್ತುತ ಆಹಾರ ಸುರಕ್ಷತಾ ನಿಯಂತ್ರಣ ವ್ಯವಸ್ಥೆಯನ್ನು ಬೆಂಬಲಿಸಿದ್ದಾರೆ. ದೊಡ್ಡ ಮಟ್ಟದ ಅನಾಹುತಗಳು ಅಥವಾ ಘಟನೆಗಳು ಸಂಭವಿಸಿದಾಗ ಮಾತ್ರ ದಾಳಿ ನಡೆಸುವ ಬದಲು, ವರ್ಷಪೂರ್ತಿ ನಿರಂತರವಾಗಿ ತಪಾಸಣೆ ನಡೆಸಬೇಕು ಎಂಬುದು ನಾಗರಿಕರ ಪ್ರಮುಖ ಆಗ್ರಹವಾಗಿದೆ.
ಯಾವ ಹೋಟೆಲ್‌ನಲ್ಲಿ ಕೊನೆಯ ಬಾರಿ ಪರಿಶೀಲನೆ ನಡೆಸಲಾಗಿದೆ ಮತ್ತು ಅಲ್ಲಿ ಏನೆಲ್ಲಾ ಲೋಪಗಳು ಪತ್ತೆಯಾಗಿವೆ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ಮುಕ್ತವಾಗಿ ಪ್ರಕಟಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಷ್ಟೇ ಅಲ್ಲದೆ, ಇತ್ತೀಚೆಗೆ ನಕಲಿ ಔಷಧ ಜಾಲಗಳು ಪತ್ತೆಯಾಗಿರುವುದು ಕೂಡ ಸಾರ್ವಜನಿಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ವಿಚಾರವಾಗಿ ಸ್ಪಂದಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಅಕ್ರಮ ಅಥವಾ ಅನೈರ್ಮಲ್ಯ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಅಧಿಕಾರಿಗಳಿಗೆ ದೂರು ನೀಡುವಂತೆ ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಜೊತೆಗೆ ಆಹಾರ ಸುರಕ್ಷತಾ ಜಾರಿ ಕಾರ್ಯಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಹೆಚ್ಚಿಸಲು, ತಾಲೂಕು ಮಟ್ಟದಲ್ಲಿ ತಜ್ಞರು ಹಾಗೂ ಹಿರಿಯ ನಾಗರಿಕರನ್ನೊಳಗೊಂಡ ‘ಆಹಾರ ಸುರಕ್ಷತಾ ಕಣ್ಗಾವಲು ತಂಡ’ಗಳನ್ನು ರಚಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ.
