Home ಬೆಂಗಳೂರು ಮೋದಿ ಮತ್ತು ಅವರ ಸಹಚರರು ಟೆಲಿಪ್ರಾಂಪ್ಟರ್ ಇಲ್ಲದೆ ಇಡೀ ವಂದೇ ಮಾತರಂ ಹಾಡಿದರೆ ರಾಜೀನಾಮೆ ನೀಡುವೆ:...

ಮೋದಿ ಮತ್ತು ಅವರ ಸಹಚರರು ಟೆಲಿಪ್ರಾಂಪ್ಟರ್ ಇಲ್ಲದೆ ಇಡೀ ವಂದೇ ಮಾತರಂ ಹಾಡಿದರೆ ರಾಜೀನಾಮೆ ನೀಡುವೆ: ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲು

0

ಬೆಂಗಳೂರು: ವಂದೇ ಮಾತರಂ ಕುರಿತ ಸಿಡಬ್ಲ್ಯುಸಿ (CWC) ನಿರ್ಣಯದ ಮೇಲಿನ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜಂತರ್ ಮಂತರ್ ಪ್ರತಿಭಟನೆ, ಆರ್‌ಎಸ್‌ಎಸ್‌ನ ಲೋಪದೋಷಗಳು, ನಿರುದ್ಯೋಗ ಮತ್ತು ಆರ್ಥಿಕ ಬಿಕ್ಕಟ್ಟಿನಂತಹ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ವಂದೇ ಮಾತರಂ ವಿವಾದವನ್ನು ತಂತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಸ್ತುತ ಡಾಲರ್ ಎದುರು ರೂಪಾಯಿ ಮೌಲ್ಯ 98 ರೂ.ಗೆ ಕುಸಿದಿದೆ. ಅಮೆರಿಕದಿಂದ 500 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಖರೀದಿಸಬೇಕಾದ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಎಲ್ಲಾ ವೈಫಲ್ಯಗಳನ್ನು ಮರೆಮಾಚಲು ವಂದೇ ಮಾತರಂ ವಿವಾದವನ್ನು ಮುನ್ನೆಲೆಗೆ ತರಲಾಗುತ್ತಿದೆ. ನಮಗೆ ವಂದೇ ಮಾತರಂ ಬಗ್ಗೆ ಹೇಳಿಕೊಡಲು ಇವರು ಯಾರು? ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಎಲ್ಲಿದ್ದವು?” ಎಂದು ಪ್ರಶ್ನಿಸಿದರು.

1937 ರಲ್ಲಿ ಪಂಡಿತ್ ನೆಹರೂ, ನೇತಾಜಿ ಸುಭಾಷ್ ಚಂದ್ರ ಬೋಸ್, ರವೀಂದ್ರನಾಥ ಟ್ಯಾಗೋರ್ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಈ ಬಗ್ಗೆ ಚರ್ಚಿಸಿದ್ದರು ಮತ್ತು ಸಂವಿಧಾನ ರಚನಾ ಸಭೆಯಲ್ಲೂ ಚರ್ಚೆಯಾಗಿದೆ; ಹಾಗಾದರೆ ಇವರೆಲ್ಲರೂ ದೇಶದ್ರೋಹಿಗಳೇ ಎಂದು ಅವರು ಪ್ರಶ್ನಿಸಿದರು.

ಬಿಜೆಪಿಯವರಿಗೆ ಅಷ್ಟೊಂದು ದೇಶಭಕ್ತಿ ಇದ್ದರೆ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ನಾಗಪುರಕ್ಕೆ ತೆರಳಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಆರ್‌ಎಸ್‌ಎಸ್‌ನ ‘ನಮಸ್ತೆ ಸದಾ ವತ್ಸಲೇ’ ಗೀತೆಯನ್ನು ಕೈಬಿಟ್ಟು, ಎಲ್ಲಾ ಶಾಖೆಗಳಲ್ಲೂ ತ್ರಿವರ್ಣ ಧ್ವಜಕ್ಕೆ ಕೈಮುಗಿದು ವಂದೇ ಮಾತರಂ ಹಾಡುವಂತೆ ಸೂಚಿಸಲಿ ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಅಲ್ಲದೆ, “ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇಡೀ ಬಿಜೆಪಿ ಸಚಿವ ಸಂಪುಟಕ್ಕೆ ನಾನು ಬಹಿರಂಗ ಸವಾಲು ಹಾಕುತ್ತೇನೆ; ಟೆಲಿಪ್ರಾಂಪ್ಟರ್ ನೆರವಿಲ್ಲದೆ ಕೊನೆಯ ಎರಡು ಚರಣಗಳನ್ನೂ ಒಳಗೊಂಡಂತೆ ಇಡೀ ರಾಷ್ಟ್ರೀಯ ಗೀತೆಯನ್ನು (ವಂದೇ ಮಾತರಂ) ಸಂಪೂರ್ಣವಾಗಿ ಹಾಡಿ ತೋರಿಸಲಿ. ಅವರು ಹಾಗೆ ಹಾಡಿದರೆ ಮಾತ್ರ ನಾನು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ,” ಎಂದು ಸವಾಲು ಹಾಕಿದರು.

You cannot copy content of this page

Exit mobile version