Home ರಾಜ್ಯ ದಕ್ಷಿಣ ಕನ್ನಡ ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ಕೇರಳದಿಂದ ಬೇರ್ಪಡಿಸಿ ನೈಋತ್ಯ ರೈಲ್ವೆಗೆ ಸೇರ್ಪಡೆ: ಅಧಿಕೃತ ಆದೇಶ ಹೊರಡಿಸಿದ ರೈಲ್ವೆ...

ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ಕೇರಳದಿಂದ ಬೇರ್ಪಡಿಸಿ ನೈಋತ್ಯ ರೈಲ್ವೆಗೆ ಸೇರ್ಪಡೆ: ಅಧಿಕೃತ ಆದೇಶ ಹೊರಡಿಸಿದ ರೈಲ್ವೆ ಮಂಡಳಿ

0

ಹೊಸದೆಹಲಿ: ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲ್ವೆ ಪ್ರದೇಶವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸಿ ರೈಲ್ವೆ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ. ಈ ಮಹತ್ವದ ವ್ಯಾಪ್ತಿ ಬದಲಾವಣೆಯು 2026 ರ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.

ರೈಲ್ವೆ ಮಂಡಳಿಯ ನಿರ್ದೇಶನದ ಪ್ರಕಾರ, ಉಳ್ಳಾಲ ಸೇರಿದಂತೆ ಮಂಗಳೂರು ಪ್ರದೇಶವನ್ನು ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಹಸ್ತಾಂತರಿಸಲಾಗುತ್ತದೆ. ಇದರೊಂದಿಗೆ ನೈಋತ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆ ನಡುವಿನ ಇಂಟರ್‌ಚೇಂಜ್ ಪಾಯಿಂಟ್ (ರೈಲುಗಳ ಹಸ್ತಾಂತರ ಕೇಂದ್ರ) ಪಡೀಲ್‌ನಿಂದ ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದೆ.

ಇನ್ನು ಕೊಂಕಣ ರೈಲ್ವೆಯ (KRCL) ವ್ಯಾಪ್ತಿಯಲ್ಲಿರುವ ತೋಕೂರು ನಿಲ್ದಾಣವು ಪ್ರಸ್ತುತ ಇರುವಂತೆಯೇ ಮುಂದುವರಿಯಲಿದ್ದು, ಅದು ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ. ಈ ಸಂಬಂಧಿತ ನಿಖರವಾದ ವಿಭಾಗೀಯ ಹಾಗೂ ವಲಯ ಗಡಿಗಳನ್ನು ಗೆಜೆಟ್ ಅಧಿಸೂಚನೆಯಲ್ಲಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಸಿಬ್ಬಂದಿ ನಿರ್ವಹಣೆಗೆ ಸಂಬಂಧಿಸಿದಂತೆ, ಗೆಜೆಟೆಡ್ ಅಧಿಕಾರಿಗಳ ವಲಯ ಬದಲಾವಣೆಗೆ ಪ್ರತ್ಯೇಕ ವರ್ಗಾವಣೆ ಆದೇಶಗಳು ಹೊರಬರಲಿವೆ. ನಾನ್-ಗೆಜೆಟೆಡ್ ಸಿಬ್ಬಂದಿಯನ್ನು ‘ಇದ್ದ ಸ್ಥಿತಿಯಲ್ಲೇ’ (As is where is basis) ಹುದ್ದೆಗಳೊಂದಿಗೆ ವರ್ಗಾಯಿಸಲಾಗುವುದು. ಆದಾಗ್ಯೂ, ಸಿಬ್ಬಂದಿಗೆ ದಕ್ಷಿಣ ರೈಲ್ವೆಯಲ್ಲಿ ಮುಂದುವರಿಯಲು ಅಥವಾ ನೈಋತ್ಯ ರೈಲ್ವೆಗೆ ಬದಲಾಗಲು ಆಯ್ಕೆಯನ್ನು ನೀಡಲಾಗುವುದು. ನೈಋತ್ಯ ರೈಲ್ವೆ ಆಯ್ಕೆ ಮಾಡಿಕೊಳ್ಳುವ ಸಿಬ್ಬಂದಿಯನ್ನು ಆಡಳಿತಾತ್ಮಕ ಆಧಾರದ ಮೇಲೆ ವರ್ಗಾಯಿಸಲಾಗುತ್ತದೆ ಮತ್ತು ಅವರ ಪ್ರಸ್ತುತ ಗ್ರೇಡ್‌ನ ಸೇವಾವಧಿಯ ಆಧಾರದ ಮೇಲೆ ಜ್ಯೇಷ್ಠತೆಯನ್ನು (ಸೀನಿಯಾರಿಟಿ) ನಿಗದಿಪಡಿಸಲಾಗುತ್ತದೆ.

ಅಕ್ಟೋಬರ್ 1, 2026 ರಿಂದ ಈ ಹೊಸ ವ್ಯವಸ್ಥೆ ಅಧಿಕೃತವಾಗಿ ಜಾರಿಗೆ ಬರಲಿದ್ದು, ಹುದ್ದೆಗಳ ವರ್ಗಾವಣೆ, ಸಿಬ್ಬಂದಿಯ ಆಯ್ಕೆ ಪ್ರಕ್ರಿಯೆ ಮತ್ತು ಕಂಟ್ರೋಲ್ ಬೋರ್ಡ್‌ಗಳ ಹಸ್ತಾಂತರ ಸೇರಿದಂತೆ ಎಲ್ಲಾ ಅಗತ್ಯ ಪೂರ್ವಸಿದ್ಧತೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ರೈಲ್ವೆ ಮಂಡಳಿಯು ನೈಋತ್ಯ ರೈಲ್ವೆ, ದಕ್ಷಿಣ ರೈಲ್ವೆ ಮತ್ತು ಕೊಂಕಣ ರೈಲ್ವೆ ನಿಗಮಗಳಿಗೆ ನಿರ್ದೇಶನ ನೀಡಿದೆ.

You cannot copy content of this page

Exit mobile version