ಬಂಟ್ವಾಳ : ಇಲ್ಲಿನ ಬಿ.ಸಿ.ರೋಡ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವಕನೊಬ್ಬ ಸಾರ್ವಜನಿಕರ ಎದುರೇ ತಲವಾರಿನಿಂದ ಹಲ್ಲೆ ನಡೆಸಿ ಯುವತಿಯನ್ನು ಗುರುವಾರ ಹತ್ಯೆ ಮಾಡಿದ್ದಾನೆ. ಕಕ್ಯಪದವು ಸಮೀಪದ ಕೊಡಂಗೆಯ ನಿವಾಸಿ ಬಾಳಪ್ಪ ಗೌಡ ಅವರ ಪುತ್ರಿ ಲಾವಣ್ಯ (25) ಹತ್ಯೆಯಾದ ಯುವತಿ. ಅವರು ಕಲ್ಲಡ್ಕದ ಚಿಕಿತ್ಸಾಲಯ ಒಂದರಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದರು.
ಚೇತನ್ ಯುವತಿಯನ್ನು ಹತ್ಯೆ ಮಾಡಿದ ಆರೋಪಿ. ಆತ ಯುವತಿಯ ದೂರದ ಸಂಬಂಧಿ. ಆತ ಯುವತಿಯನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಲಸ ಮುಗಿಸಿ ಮನೆಗೆ ಮರಳುವ ಸಲುವಾಗಿ ಯುವತಿ ಬಿ.ಸಿ.ರೋಡ್ ಬಸ್‌ನಿಲ್ದಾಣದಲ್ಲಿ ಕಕ್ಯಪದವಿಗೆ ಹೋಗುವ ಬಸ್ ಹತ್ತಿದ್ದಳು. ಆರೋಪಿ ಐ10 ಕಾರಿನಲ್ಲಿ ಬಸ್‌ನಿಲ್ದಾಣದ ಬಳಿ ಕಾಯುತ್ತಿದ್ದ. ಆಕೆ ಸೀಟೊಂದರಲ್ಲಿ ಕುಳಿತಿದ್ದಾಗ ಬಸ್ ಹತ್ತಿದ್ದ ಆರೋಪಿ ಬ್ಯಾಗಿನಿಂದ ತಲವಾರು ತೆಗೆದಿದ್ದ. ಅದನ್ನು ನೋಡಿ ಯುವತಿ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಳು. ಅವಳನ್ನು ಬೆನ್ನಟ್ಟಿದ ಯುವಕ, ಬಸ್‌ನಿಲ್ದಾಣದಲ್ಲಿ ಸಾರ್ವಜನಿಕರ ಎದುರೇ ಆಕೆಯ ಕುತ್ತಿಗೆಯ ಹಿಂಭಾಗಕ್ಕೆ ತಲವಾರಿನಿಂದ ಕಡಿದಿದ್ದ. ಸ್ವಲ್ಪ ದೂರ ಓಡುತ್ತಲೇ ಆಕೆ ಕುಸಿದು ಬಿದ್ದಿದ್ದಳು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ತಕ್ಷಣವೇ ಸಾರ್ವಜನಿಕರು ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
