Home ರಾಜ್ಯ ದಕ್ಷಿಣ ಕನ್ನಡ ಆಟವಾಡುತ್ತಲೇ ಕುಸಿದು ಬಿದ್ದು 15 ವರ್ಷದ ಬಾಲಕ – ದುರ್ಮರಣ

ಆಟವಾಡುತ್ತಲೇ ಕುಸಿದು ಬಿದ್ದು 15 ವರ್ಷದ ಬಾಲಕ – ದುರ್ಮರಣ

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪದ ಸುರಿಂಜೆಯಲ್ಲಿ ಸ್ನೇಹಿತರೊಂದಿಗೆ ವಾಲಿಬಾಲ್ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ದಿಢೀರ್ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಮೃತ ಬಾಲಕನನ್ನು ಸುರಿಂಜೆಯ ಕೋಟೆ ಬೊಲ್ಲಾರು ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಲಿಖಿತ್ ಅಮೀನ್ ಎಂದು ಗುರುತಿಸಲಾಗಿದೆ.

ಸುರಿಂಜೆ ಆಟದ ಮೈದಾನದಲ್ಲಿ ಲಿಖಿತ್ ಸ್ನೇಹಿತರೊಂದಿಗೆ ವಾಲಿಬಾಲ್ ಆಡುತ್ತಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಕೋರ್ಟ್‌ನಲ್ಲೇ ಕುಸಿದುಬಿದ್ದಿದ್ದಾನೆ.

ಸಿಸಿಟಿವಿ ದೃಶ್ಯದಲ್ಲಿ ಲಿಖಿತ್ ವಾಲಿಬಾಲ್ ಸರ್ವ್ ಮಾಡಿದ ಬಳಿಕ ಎದುರಾಳಿ ತಂಡದ ಶಾಟ್‌ ಅನ್ನು ಹಿಂತಿರುಗಿಸಲು ನೆಟ್‌ನತ್ತ ಓಡುವಾಗ ದಿಢೀರ್ ಕುಸಿದು ಬಿದ್ದಿದ್ದಾನೆ. ಇದನ್ನು ನೋಡಿದ ಆಘಾತಕ್ಕೊಳಗಾದ ಇತರ ಆಟಗಾರರು ತಕ್ಷಣ ಆತನತ್ತ ಧಾವಿಸಿದ್ದಾರೆ. ಸ್ಥಳದಲ್ಲಿದ್ದವರು ಕೂಡಲೇ ಲಿಖಿತ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆದರೆ ವೈದ್ಯರು ಆತನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಆತನನ್ನು ಉಳಿಸಲು ವೈದ್ಯರು ಪ್ರಯತ್ನಿಸಿದರೂ ಫಲಿಸಲಿಲ್ಲ.

ಲಿಖಿತ್ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy content of this page

Exit mobile version