ಕಡಿಮೆ ಕರೆಂಟ್ ಬಳಸಿದರೂ ಬರಲಿದೆ ಭಾರಿ ಬಿಲ್: ಮಾಸಿಕ ಕನಿಷ್ಠ ಶುಲ್ಕ ಹೆಚ್ಚಿಸಲು ಕೇಂದ್ರದ ಸಿಇಎ ಪ್ರಸ್ತಾಪ

ಇತ್ತೀಚೆಗಷ್ಟೇ ವಾಣಿಜ್ಯ ಎಲ್‌ಪಿಜಿ, ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ದರಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದ ಕೇಂದ್ರದ ಬಿಜೆಪಿ ಸರ್ಕಾರ, ಇದೀಗ ಜನಸಾಮಾನ್ಯರಿಗೆ ಮತ್ತೊಂದು ದೊಡ್ಡ ಶಾಕ್ ನೀಡಲು ಸಿದ್ಧತೆ ನಡೆಸಿದೆ. ದೇಶಾದ್ಯಂತ ವಿದ್ಯುತ್ ಬಿಲ್ ಹೆಚ್ಚಿಸುವ ನಿಟ್ಟಿನಲ್ಲಿ ಮಾಸಿಕ ಕನಿಷ್ಠ ಶುಲ್ಕವನ್ನು (ಮಿನಿಮಮ್ ಫಿಕ್ಸೆಡ್ ಚಾರ್ಜಸ್) ಗಣನೀಯವಾಗಿ ಏರಿಕೆ ಮಾಡಲು ಸೆಂಟ್ರಲ್ ಎಲೆಕ್ಟ್ರಿಸಿಟಿ ಅಥಾರಿಟಿ (CEA) ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪನೆಗಳನ್ನು ಸಲ್ಲಿಸಿದೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿಯುವವರೆಗೂ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಪದೇ ಪದೇ ಹೇಳಿದ್ದ ಸರ್ಕಾರ, ಫಲಿತಾಂಶ ಬಂದ ಬೆನ್ನಲ್ಲೇ ಪೂರ್ಣವಾಗಿ ಉಲ್ಟಾ ಹೊಡೆದಿದೆ. ಮೊದಲು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಬರೊಬ್ಬರಿ 993 ರೂಪಾಯಿ ಹೆಚ್ಚಿಸಿದ್ದ ಮೋದಿ ಸರ್ಕಾರ, ಆನಂತರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್‌ಗೆ 3 ರೂಪಾಯಿ ಹಾಗೂ ಸಿಎನ್‌ಜಿ ದರವನ್ನು ಎರಡು ದಿನಗಳ ಹಿಂದಷ್ಟೇ 2 ರೂಪಾಯಿ ಹೆಚ್ಚಿಸಿತ್ತು. ಇದೀಗ ಭಾನುವಾರ ಮತ್ತೆ ದೆಹಲಿ, ಎನ್‌ಸಿಆರ್ ಹಾಗೂ ಮಧ್ಯಪ್ರದೇಶದಲ್ಲಿ ಸಿಎನ್‌ಜಿ ದರವನ್ನು ಕಿಲೋಗೆ ಮತ್ತೊಂದು ರೂಪಾಯಿ ಹೆಚ್ಚಳ ಮಾಡಲಾಗಿದ್ದು, ದೆಹಲಿಯಲ್ಲಿ ಸಿಎನ್‌ಜಿ ಬೆಲೆ 80.09 ರೂಪಾಯಿಗೆ ತಲುಪಿದೆ. ಈ ಬೆನ್ನಲ್ಲೇ ವಿದ್ಯುತ್ ದರ ಏರಿಕೆಯ ಪ್ರಸ್ತಾಪ ಕೇಳಿಬಂದಿರುವುದು ಜನಸಾಮಾನ್ಯರನ್ನು ಕಂಗಾಲು ಮಾಡಿದೆ.

ಪ್ರಸ್ತಾಪನೆಯಲ್ಲಿ ಏನಿದೆ ಮತ್ತು ಯಾರಿಗೆ ನಷ್ಟ? ಸಿಇಎ ಸಲ್ಲಿಸಿರುವ ಹೊಸ ಪ್ರಸ್ತಾಪನೆಗಳು ಜಾರಿಗೆ ಬಂದರೆ, ಗ್ರಾಹಕರು ತಾವು ಬಳಸುವ ವಿದ್ಯುತ್ ಪ್ರಮಾಣದೊಂದಿಗೆ ಸಂಬಂಧವಿಲ್ಲದೆಯೇ ಪ್ರತಿ ತಿಂಗಳು ಕಡ್ಡಾಯವಾಗಿ ಭಾರಿ ಮೊತ್ತದ ಕನಿಷ್ಠ ಬಿಲ್ ಪಾವತಿಸಬೇಕಾಗುತ್ತದೆ. ಅಂದರೆ ಅತ್ಯಂತ ಕಡಿಮೆ ವಿದ್ಯುತ್ ಬಳಸುವ ಬಡ ಮತ್ತು ಮಧ್ಯಮ ವರ್ಗದವರ ಮೇಲೂ ಇದು ಭಾರಿ ಆರ್ಥಿಕ ಹೊರೆಯನ್ನು ಹೇರಲಿದೆ. ಪ್ರಸ್ತುತ ವಿದ್ಯುತ್ ಸರಬರಾಜು ಸಂಸ್ಥೆಗಳು (ಬೆಸ್ಕಾಂ, ಮೆಸ್ಕಾಂ ನಂತಹ ಡಿಸ್ಕಮ್‌ಗಳು) ವಿದ್ಯುತ್ ಲೈನ್‌ಗಳ ನಿರ್ವಹಣೆ, ನೌಕರರ ಸಂಬಳ ಮುಂತಾದ ಸ್ಥಿರ ವೆಚ್ಚಗಳಿಗಾಗಿ ಶೇಕಡಾ 38 ರಿಂದ 56 ರಷ್ಟು ಹಣ ವ್ಯಯಿಸುತ್ತಿವೆ. ಆದರೆ ಪ್ರಸ್ತುತ ಗ್ರಾಹಕರಿಂದ ಬರುತ್ತಿರುವ ಮಾಸಿಕ ಸ್ಥಿರ ಶುಲ್ಕದ ಪಾಲು ಕೇವಲ ಶೇಕಡಾ 9 ರಿಂದ 20 ರಷ್ಟು ಮಾತ್ರ ಇದೆ.

ಇತ್ತೀಚಿನ ದಿನಗಳಲ್ಲಿ ಕೈಗಾರಿಕೆಗಳು ಹಾಗೂ ಶ್ರೀಮಂತ ಗ್ರಾಹಕರು ಹೆಚ್ಚಾಗಿ ರೂಫ್‌ಟಾಪ್ ಸೋಲಾರ್ (ಮನೆ ಮೇಲ್ಛಾವಣಿ ಸೌರಶಕ್ತಿ) ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುತ್ತಿರುವುದರಿಂದ ಡಿಸ್ಕಮ್‌ಗಳಿಂದ ಖರೀದಿಸುವ ವಿದ್ಯುತ್ ಪ್ರಮಾಣ ಕಡಿಮೆಯಾಗಿದ್ದು, ತೈಲ ಹಾಗೂ ವಿದ್ಯುತ್ ಸಂಸ್ಥೆಗಳ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ. ಈ ನಷ್ಟದಿಂದ ಹೊರಬರಲು ಮತ್ತು ವಿದ್ಯುತ್ ಕಂಪನಿಗಳ ಖಜಾನೆ ತುಂಬಿಸಲು ಸಿಇಎ ಈ ದರ ಏರಿಕೆಯ ಮಾರ್ಗವನ್ನು ಹುಡುಕಿದೆ.

2030ರ ವೇಳೆಗೆ ಹಂತ ಹಂತವಾಗಿ ದರ ಏರಿಕೆ: ಕೇಂದ್ರದ ಈ ಸಂಸ್ಥೆಯು ಒಮ್ಮೆಗೆ ಹೊರೆ ಹೇರದೆ ಹಂತ ಹಂತವಾಗಿ ಈ ಮಾಸಿಕ ಸ್ಥಿರ ಶುಲ್ಕವನ್ನು ಹೆಚ್ಚಿಸಲು ಯೋಜಿಸಿದೆ. ಇದರ ಪ್ರಕಾರ, ಮುಂಬರುವ 2030 ರ ವೇಳೆಗೆ ಗೃಹಬಳಕೆ ಹಾಗೂ ಕೃಷಿ ಗ್ರಾಹಕರ ಮೇಲಿನ ಸ್ಥಿರ ಶುಲ್ಕವನ್ನು ಶೇಕಡಾ 25 ರಷ್ಟು ಮತ್ತು ಕೈಗಾರಿಕಾ ಹಾಗೂ ವಾಣಿಜ್ಯ ಗ್ರಾಹಕರ ಮೇಲಿನ ಶುಲ್ಕವನ್ನು ಶೇಕಡಾ 100 ರಷ್ಟು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಇದರೊಂದಿಗೆ ರೂಫ್‌ಟಾಪ್ ಸೋಲಾರ್ ಮತ್ತು ನೆಟ್ ಮೀಟರಿಂಗ್ ಬಳಸುವ ಗ್ರಾಹಕರಿಗೆ ಪ್ರತ್ಯೇಕ ಹಾಗೂ ವಿಶೇಷ ವಿದ್ಯುತ್ ಸುಂಕದ ನೀತಿಯನ್ನು ಜಾರಿಗೆ ತರಲು ಶಿಫಾರಸು ಮಾಡಲಾಗಿದೆ. ಈ ಪ್ರಸ್ತಾಪನೆಗಳನ್ನು ಮುಂದಿನ ದಿನಗಳಲ್ಲಿ ‘ಫೋರಂ ಆಫ್ ರೆಗ್ಯುಲೇಟರ್ಸ್’ ಮುಂದೆ ಮಂಡಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.

Related Articles

ಇತ್ತೀಚಿನ ಸುದ್ದಿಗಳು