ಮತದಾರರ ಹಕ್ಕು ರಕ್ಷಿಸುವವರು ಯಾರು?

“..ಫಾರಂ 7 ಹಗರಣ, ಸಹಸ್ರಾರು ಜನರನ್ನು ಮತದಾರರ ಪಟ್ಟಿಯಿಂದ ಹೊರಹಾಕುವ ಬಿಜೆಪಿ ಒಳಸಂಚು ಬಯಲಾಗಿದೆ. ಅದನ್ನು ಬಿಜೆಪಿ ಪಕ್ಷದ ನಾಯಕರು ಕನಿಷ್ಟ ಪಾಪ ಪ್ರಜ್ಞೆಯೂ ಇಲ್ಲದೇ ಸಮರ್ಥಿಸಿಕೊಳ್ಳುತ್ತಿದ್ದಾರೆ..” ವಿಮರ್ಶಕರಾದ ಶಶಿಕಾಂತ ಯಡಹಳ್ಳಿ ಅವರ ಬರಹದಲ್ಲಿ

ಈ ವಿಶೇಷ ಮತದಾರರ ಪರಿಷ್ಕರಣೆ ( SIR) ಎಂಬ ಬಿಜೆಪಿ ಪ್ರಾಯೋಜಿತ ರಾಷ್ಟ್ರೀಯ ಪ್ರಹಸನ ದಿನಕ್ಕೊಂದು ತಿರುವು ಪಡೆಯುತ್ತಿದೆ. ಮುಖ್ಯ ಚುನಾವಣಾ ಆಯುಕ್ತರ ಏಕಪಕ್ಷೀಯ ನಿರ್ಧಾರಗಳಿಗೆ ಸಹ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದು ದೇಶಾದ್ಯಂತ ಸುದ್ದಿಯಾಗಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ದೇಶಾದ್ಯಂತ ಪ್ರತಿಭಟನೆಗೆ ಇಳಿದಿದ್ದಾರೆ. ಜೆನ್ ಜೀಗಳ ಜಿರಲೆ ಪಕ್ಷ SIR ರದ್ದತಿಗೆ ಆಗ್ರಹಿಸಿ ದೇಶಾದ್ಯಂತ ಹೋರಾಟಕ್ಕೆ ಕರೆ ಕೊಟ್ಟಿದೆ.

ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಫಾರಂ 7 ರ ಹಗರಣ ಆಳುವ ಕಾಂಗ್ರೆಸ್ ಪಕ್ಷ ಹಾಗೂ ಸರಕಾರವನ್ನು ಕೆರಳಿಸಿದೆ. ಸಹಸ್ರಾರು ಜನರನ್ನು ಮತದಾರರ ಪಟ್ಟಿಯಿಂದ ಹೊರಹಾಕುವ ಬಿಜೆಪಿ ಒಳಸಂಚು ಬಯಲಾಗಿದೆ. ಅದನ್ನು ಬಿಜೆಪಿ ಪಕ್ಷದ ನಾಯಕರು ಕನಿಷ್ಟ ಪಾಪ ಪ್ರಜ್ಞೆಯೂ ಇಲ್ಲದೇ ಸಮರ್ಥಿಸಿಕೊಳ್ಳುತ್ತಿದ್ದಾರೆ.

ಮೊದಲೇ SIR ಎನ್ನುವ ಸಂಚಿಗೆ ದೇಶದ ಬಿಜೆಪಿ ಏತರ ಪಕ್ಷಗಳು ಬಲಿಯಾಗಿವೆ. 13 ಕೋಟಿಗೂ ಹೆಚ್ಚು ಜನರನ್ನು ಮತದಾರರ ಪಟ್ಟಿಯಿಂದ ಈ ಚುನಾವಣಾ ಆಯೋಗ ಹೊರಗಿಟ್ಟಿದೆ. ಈ ಪೂರ್ವಯೋಜಿತ ಶಡ್ಯಂತ್ರಕ್ಕೆ ಬಿಹಾರ, ಹರಿಯಾಣ, ಪಶ್ಚಿಮ ಬಂಗಾಳ, ಆಸ್ಸಾಂ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸರಕಾರಗಳೇ ಪತನಗೊಂಡಿವೆ. ವಿರೋಧ ಪಕ್ಷಗಳು ತೀವ್ರ ಹಿನ್ನಡೆಯನ್ನು ಅನುಭವಿಸಿವೆ.

ಈಗ ಕರ್ನಾಟಕದಲ್ಲಿ SIR ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ಈಗಾಗಲೇ ಒಂದು ಕೋಟಿಯಷ್ಟು ಮತದಾರರನ್ನು ಮತಪಟ್ಟಿಯಿಂದ ಹೊರಗೆ ಹಾಕಲಾಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಪರಿಷ್ಕರಣೆ ನೆಪದಲ್ಲಿ ತನ್ನ ಪಕ್ಷದ ಬೆಂಬಲಿಗರಾದ ಅಲ್ಪ ಸಂಖ್ಯಾತರು ಹಾಗೂ ದಲಿತರನ್ನು ಹೆಚ್ಚು ಸಂಖ್ಯೆಯಲ್ಲಿ ಮತಪಟ್ಟಿಗೆಯಿಂದ ಹೊರಕ್ಕೆ ಹಾಕಿದರೆ ಇನ್ನೆರಡು ವರ್ಷದಲ್ಲಿ ಬರುವ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷಕ್ಕೆ ಬಂದ ದುರ್ಗತಿಯೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬರುತ್ತದೆ ಎನ್ನುವ ಆತಂಕ ಕಾಡುತ್ತಿದೆ.

ಅದಕ್ಕಾಗಿ 61 ಸಾವಿರ ಚುನಾವಣಾ ಬೂತ್ ಗಳಿರುವ ಕರ್ನಾಟಕದಲ್ಲಿ ತಮ್ಮ ಪಕ್ಷದ 50 ಸಾವಿರ ಕಾರ್ಯಕರ್ತರನ್ನು ಬಿಎಲ್ ಓ 2 ಆಗಿ ನೇಮಿಸಲಾಗಿದೆ. ಈಗಿರುವ BLO ಗಳ ಕಾರ್ಯಚಟುವಟಿಕೆಗಳ ಮೇಲೆ ಕಣ್ಗಾವಲಿಡಲು ಈ ವ್ಯವಸ್ಥೆಯನ್ನು ಕಾಂಗ್ರೆಸ್ ಮಾಡಿದೆ. ಎಲ್ಲಿ ಕಾಂಗ್ರೆಸ್ ತನ್ನ ಅಧಿಕಾರ ಬಳಸಿಕೊಂಡು ತನ್ನನ್ನು ಬೆಂಬಲಿಸುವ ಮತದಾರರನ್ನು ಲಿಸ್ಟನಿಂದ ತೆಗೆದು ಹಾಕುತ್ತಾರೋ ಎನ್ನುವ ಭಯದಿಂದ ಬಿಜೆಪಿ ಪಕ್ಷ ಸಹ 20 ಸಾವಿರ BLO ಗಳನ್ನು ನೇಮಿಸಿದೆ. ಇಲ್ಲಿ ಯಾರೂ ಯಾರನ್ನೂ ನಂಬುವ ಪರಿಸ್ಥಿತಿಯಲ್ಲಿಲ್ಲ.

ಹೀಗಿರುವಾಗ ಬಿಜೆಪಿ ಇನ್ನೊಂದು ರೀತಿಯಲ್ಲಿ ತನ್ನ ಶಡ್ಯಂತ್ರವನ್ನು ಆರಂಭಿಸಿತು. ಬಿಜೆಪಿಗೆ ಮತ ಹಾಕದ ಅಲ್ಪಸಂಖ್ಯಾತರು ಹಾಗೂ ದಲಿತರ ಮತಗಳನ್ನು ಮತಪಟ್ಟಿಯಿಂದ ಹೊರಹಾಕಲು ಫಾರಂ ನಂ 7 ಎನ್ನೋ ಕಳ್ಳಾಟ ಶುರುಮಾಡಿಕೊಂಡಿದೆ. ಫಾರಂ 7 ಇರೋದೇ ಕಳ್ಳ ಮತದಾರರನ್ನು ತೆಗೆದು ಹಾಕಲು. ಆದರೆ ಅಸಲಿ ಮತದಾರರನ್ನೇ ತೆಗೆಸಿ ಹಾಕಲು ಬಿಜೆಪಿ ಶಡ್ಯಂತ್ರ ಮಾಡಿದ್ದು ಈಗ ಬಟಾ ಬಯಲಾಗಿದೆ. ಕಾಂಗ್ರೆಸ್ ಸಿಡೆದೆದ್ದು ನಿಂತಿದೆ. ಸಿಎಂ ಡಿ.ಕೆ.ಶಿವಕುಮಾರರವರು ತಮ್ಮ ಸಚಿವ ಸಂಪುಟದ ಎಲ್ಲರನ್ನೂ ಸೇರಿಸಿಕೊಂಡು ಕರ್ನಾಟಕದ ಮುಖ್ಯ ಚುನಾವಣಾ ಆಯೋಗದ ಕಚೇರಿಗೆ ಹೋಗಿ ಧರಣಿ ಕುಳಿತರು. ದಾಖಲೆಗಳ ರಾಶಿಯನ್ನೇ ಚುನಾವಣಾ ಆಯುಕ್ತರ ಮುಂದೆ ಇರಿಸಿದರು. ಕೊನೆಗೂ ಕಾಂಗ್ರೆಸ್ಸಿನ ಬೇಡಿಕೆಗೆ ಚುನಾವಣಾಧಿಕಾರಿ ಅನ್ಬುಕುಮಾರ ಆದೇಶಿಸಿದ್ದಾರೆ. ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಸುಳ್ಳು ಅರ್ಜಿ ಸಲ್ಲಿಸಿದವರ ಮೇಲೆ ಕ್ರಮ ತೆಗೆದುಕೊಳ್ಳಲು ಅಧಿಕೃತವಾಗಿ ಆದೇಶಿಸಿದ್ದಾರೆ. ಒಂದು ಹಂತಕ್ಕೆ ಕಾಂಗ್ರೆಸ್ ಯಶಸ್ಸು ಸಾಧಿಸಿದರೆ, ಬಿಜೆಪಿ ಕುತಂತ್ರಕ್ಕೆ ಹಿನ್ನಡೆಯಾಗಿದೆ.

ಹಾಗಾದರೆ ಏನಿದು ಫಾರಂ 7 ಗೋಲ್ಮಾಲ್. SIR ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಯ ಹೆಸರನ್ನು ತೆಗೆದುಹಾಕಲು ಆಕ್ಷೇಪನೆ ಸಲ್ಲಿಸಲು ಫಾರಂ 7 ಬಳಸಲಾಗುತ್ತದೆ. ಮರಣ ಹೊಂದಿದ್ದರೆ, ಶಾಶ್ವತ ಸ್ಥಳಾಂತರ ಆದವರ ಹೆಸರನ್ನು ಓಟರ್ ಲಿಸ್ಟಿಂದ ತೆಗೆದು ಹಾಕಲು ಈ ಫಾರಂ ತುಂಬಿ BLO ಗಳಿಗೆ ಸಲ್ಲಿಸಬೇಕಾಗುತ್ತದೆ. ಈ ಅವಕಾಶವನ್ನು ಬಳಸಿಕೊಂಡ ಬಿಜೆಪಿಗರು ತಮಗೆ ಮತ ಹಾಕದವರ ಹೆಸರು ಹಾಗೂ ವಿವರಗಳನ್ನು ಈ ಪಾರಂಗಳಲ್ಲಿ ನಲ್ಲಿ ಬರೆದು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಸಲ್ಲಿಸಿದ್ದಾರೆ. ಈ ಫಾರಂನಲ್ಲಿ ವಿವರಗಳನ್ನು ಬರೆಯ ಬೇಕಾಗುತ್ತದೆ. ಆದರೆ ಬೇನಾಮಿಯಾಗಿ ಅರ್ಜಿ ಸಲ್ಲಿಸಿದವರು ವಿವರಗಳನ್ನು ಪೂಋವ ಮುದ್ರಿತ ಮಾಡಿಸಿ ಬಲ್ಕ್ ಆಗಿ ಸಲ್ಲಿಸಿ ಸಿಕ್ಕಾಕಿಕೊಂಡಿದ್ದಾರೆ. ಕೆಲವು ಕಡೆ ಒಂದೇ ವ್ಯಕ್ತಿ ಅಥವಾ ಕೆಲವೇ ವ್ಯಕ್ತಿಗಳಿಂದ ಹೆಚ್ಚಿನ ಸಂಖ್ಯೆಯ ಆಕ್ಷೇಪನೆಗಳು ಸಲ್ಲಿಕೆಯಾಗಿವೆ. ನಿರ್ದಿಷ್ಟ ಸಮುದಾಯದ ಮತದಾರರನ್ನು ಗುರಿಯಾಗಿಸಲಾಗಿದೆ.

ಬಾಲ್ಕಿ ಕ್ಷೇತ್ರದ ನಿಟ್ಡೂರು ಪ್ರದೇಶದಲ್ಲಿ 500 ಕ್ಕೂ ಹೆಚ್ಚು ಇಂತಹ ಬೇನಾಮಿ ಅರ್ಜಿಗಳು Polling Stationನಲ್ಲಿ ಸಲ್ಲಿಕೆ ಯಾಗಿವೆ. 384 ಫಾರಂ 7 ಅರ್ಜಿಗಳಲ್ಲಿ 346 ಅರ್ಜಿಗಳು 10 ವ್ಯಕ್ತಿಗಳಿಂದ ಸಲ್ಲಿಕೆ ಯಾಗಿವೆ. ಈ ಅರ್ಜಿಗಳಲ್ಲಿ ಬಹುತೇಕ ಮುಸ್ಲಿಂ ಮತದಾರರನ್ನು ಗುರಿಯಾಗಿಸಿದ್ದವಾಗಿವೆ. ಬೆಳಗಾವಿಯಲ್ಲಿ 200 ಫಾರಂಗಳಿಗೆ ಸಹಿ ಮಾಡುವಂತೆ BLO ಮೇಲೆ ಒತ್ತಡ ಹೇರಲಾಗಿದೆ. ಬಬಲೇಶ್ವರದಲ್ಲಿ 3244 ಅರ್ಜಿಗಳನ್ನು 34 ವ್ಯಕ್ತಿಗಳು ಸಲ್ಲಿಸಿದ್ದಾರೆ. ವಿಜಯಪುರದಲ್ಲಿ 14000, ಬಳ್ಳಾರಿ ನಗರದಲ್ಲಿ 8000, ಬಳ್ಳಾರಿ ಗ್ರಾಮೀಣದಲ್ಲಿ 10000, ಮೈಸೂರಲ್ಲಿ 1200 ಫಾರಂ 7 ಅರ್ಜಿಯನ್ನು ಸಲ್ಲಿಸಲಾಗಿದೆ. ಬೆಳಗಾವಿ ದಕ್ಷಿಣದಲ್ಲಿ 2598 ಫಾರಂಗಳನ್ನು ಪರಿಶೀಲಿಸಲು ಬಿಜೆಪಿ ಶಾಸಕ ಅಭಯ್ ಪಾಟೀಲ್ ಶಿಪಾರಸ್ಸು ಮಾಡಿದ್ದಾರೆ. ಬಾಗಲಕೋಟೆ ಶಿವಮೊಗ್ಗದಲ್ಲೂ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಎಲ್ಲಾ ಪ್ರಕರಣಗಳನ್ನು ದಾಖಲೆ ಸಮೇತ ಸಿಎಂ ಡಿಕೆಸಿಯವರು ಚುನಾವಣಾ ಆಯುಕ್ತರ ಮುಂದಿರಿಸಿದ್ದಾರೆ. ಎಲ್ಲಾ ಬೇನಾಮಿ ಅರ್ಹಿದಾರರ ಮೇಲೆ FIR ದಾಖಲಿಸುವ ಕೆಲಸ ಆರಂಭಿಸಲಾಗಿದೆ. ಆದರೆ ನಿಜಕ್ಕೂ ಕಾನೂನು ಕ್ರಮಗಳು ಆಗ್ತಾವಾ? ಗೊತ್ತಿಲ್ಲ.

ಯಾಕೆಂದರೆ 2023 ರಲ್ಲಿ ಆಳಂದ ಮತಕ್ಷೇತ್ರದಲ್ಲಿ ಒಟ್ಟು 6018 ಕಳ್ಳ ಅರ್ಜಿಗಳು ಆನ್ ಲೈನಿನಲ್ಲಿ ಸಲ್ಲಿಕೆಯಾಗಿದ್ದವು. ಪರಿಶೀಲನೆ ನಂತರ ಕೇವಲ 24 ಅರ್ಜಿಗಳು ನಿಜವಾಗಿದ್ದು 5994 ಅರ್ಜಿಗಳು ಪೋರ್ಜರಿ ಆಗಿದ್ದವು. ಆಗಲೂ FIR ದಾಖಲಿಸಲಾಗಿತ್ತು. ಆದರೆ ಇಲ್ಲಿವರೆಗೂ ಯಾರ ಮೇಲೂ ಯಾವುದೇ ಕ್ರಮ ಆಗಿಲ್ಲ.

ಹೋಗಲಿ ಈ ಫಾರಂ 7 ಪ್ರಕರಣವನ್ನು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರರವರು ಸಮರ್ಥಿಸಿಕೊಂಡಿದ್ದಾರೆ. “ಅನುಮಾನಾಸ್ಪದ ಮತದಾರರ ಬಗ್ಗೆ ಫಾರಂ 7 ಮೂಲಕ ಆಕ್ಷೇಪ ವ್ಯಕ್ತಪಡಿಸುವ ಹಕ್ಕಿದೆ” ಎಂದು ಹೇಳಿದ್ದಾರೆ. ಇದು ಈ ಸುಳ್ಳು ಅರ್ಜಿ ಸಲ್ಲಿಸುವ ಬಿಜೆಪಿ ಕಾರ್ಯಕರ್ತರಿಗೆ ಪ್ರೋತ್ಸಾಹಿಸುವಂತಿದೆ. ಬಿಜೆಪಿಯ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕರವರು “ಕಾಂಗ್ರೆಸ್ಸಿಗರು ನ್ಯಾಯಾಲಯದ ಮೊರೆಹೋಗಲಿ, ಚುನಾವಣಾ ಆಯೋಗದ ಮೇಲೇಕೆ ಒತ್ತಡ ಹೇರಲಾಗುತ್ತಿದೆ” ಎಂದು ಪ್ರಶ್ನಿಸುತ್ತಾರೆ. ಚುನಾವಣಾ ಆಯೋಗದ SIR ಪ್ರಕ್ರಿಯೆಯಲ್ಲಿ ಅಕ್ರಮಗಳಾದಾಗ ಚುನಾವಣಾ ಆಯುಕ್ತರನ್ನು ಪ್ರಶ್ನಿಸದೇ ನ್ಯಾಯಾಲಯಕ್ಕೆ ಹೋಗಬೇಕಾ? ಇನ್ನೊಬ್ಬ ಬಿಜೆಪಿಯ ಹಿರಿಯ ನಾಯಕರಾದ ಜಗದೀಶ್ ಶೆಟ್ಟರವರು “ಬಿಜೆಪಿ ಕಾರ್ಯಕರ್ತರ ಮೇಲೆ FIR ದಾಖಲಿಸಿ ಹೆದರಿಸಲಾಗುತ್ತಿದೆ” ಎಂದು ಆಕ್ಷೇಪಿಸಿದ್ದಾರೆ. ಪೋರ್ಜರಿ ಕೆಲಸ ಯಾರು ಮಾಡಿದರೇನು, ಅವರ ಮೇಲೆ ದೂರು ದಾಖಲಿಸದೇ ಸನ್ಮಾನಿಸಬೇಕಾ?

ಇಷ್ಟಕ್ಕೂ ಚುನಾವಣಾ ಅಯೋಗದ ಲೋಪಗಳನ್ನು ಪ್ರಶ್ನಿಸಿದರೆ ಈ ಬಿಜೆಪಿಗರಿಗೇಕೆ ಸಕಲ ಅಂಗಾಂಗಗಳಲ್ಲಿ ಉರಿ? ಯಾಕೆ ಚುನಾವಣಾ ಆಯೋಗ, ಆಯುಕ್ತರು ಹಾಗೂ ಅಧಿಕಾರಿಗಳ ಸಮರ್ಥನೆಗೆ ಇಳಿಯುತ್ತಾರೆ? ಇದರಿಂದಲೇ ಗೊತ್ತಾಗುತ್ತದೆ ಚುನಾವಣಾ ಆಯೋಗ ಎನ್ನುವುದು ಸ್ವಾಯತ್ತ ಸಂಸ್ಥೆ ಅಲ್ಲಾ ಅದು ಬಿಜೆಪಿ ಪಕ್ಷದ ಶಾಖೆಯಂತೆ ಕೆಲಸ ಮಾಡುತ್ತದೆ ಎಂದು. ಅದಕ್ಕೆ ಮೋದಿ ಸರಕಾರವು ಸಂವಿಧಾನಕ್ಕೆ ತಿದ್ದುಪಡಿ ತಂದು ಮುಖ್ಯ ಚುನಾವಣಾ ಆಯುಕ್ತರಾದ ಗ್ಯಾನೇಶ್ ಕುಮಾರರಿಗೆ ಜೀವನ ಪರ್ಯಂತ ಕಾನೂನಾತ್ಮಕ ರಕ್ಷಣೆ ಕೊಟ್ಟಿದ್ದು.

ಬಿಜೆಪಿ ಹೇಗಾದರೂ ಮಾಡಿ ವಿರೋಧ ಪಕ್ಷಗಳ ಬೆಂಬಲಿಗರ ಹೆಸರನ್ನು ಮತದಾರರ ಪಟ್ಟಿಯಿಂದ ಹೊರಗೆ ಹಾಕಲು ಶತಾಯ ಗತಾಯ ಪ್ರಯತ್ನಿಸುತ್ತಿದೆ. ಹಾಗೂ ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಯಶಸ್ವಿಯೂ ಆಗಿದೆ. ಇದರಿಂದ ಪಾಠ ಕಲಿತ ಕರ್ನಾಟಕದ ಕಾಂಗ್ರೆಸ್ ಬಿಜೆಪಿ ಹಾಗೂ ಚುನಾವಣಾ ಆಯೋಗದ ಕುತಂತ್ರಗಳನ್ನು ಸೋಲಿಸಿ ತನ್ನ ಬೆಂಬಲಿಗ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಈಗ ದೇಶಾದ್ಯಂತ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿವೆ. ಪ್ರಧಾನಿ ಮೋದಿ ಹಾಗೂ ಗ್ರಹ ಮಂತ್ರಿ ಅಮಿತ್ ಶಾ ವಿರುದ್ಧ ಕೂಡಾ ಘೋಷಣೆಗಳನ್ನು ಕೂಗಲಾಗುತ್ತಿದೆ. SIR ಎನ್ನುವ ಶಡ್ಯಂತ್ರ ಬಯಲಾಗುತ್ತಿದೆ. ಚುನಾವಣಾ ಆಯೋಗ ಇಕ್ಕಟ್ಟಿನಲ್ಲಿದೆ, ಮೋದಿ ಶಾ ಬಿಕ್ಕಟ್ಟಿನಲ್ಲಿದ್ದಾರೆ. ಜನಾಕ್ರೋಶಕ್ಕೆ ಮಣಿದು, ಜನರ ಕೋಪ ಶಮನಗೊಳಿಸಲು ಅಕ್ಟೋಬರ್ 2 ರಂದು ಮುಖ್ಯ ಚುನಾವಣಾ ಆಯುಕ್ತರು “ಡಿಲೀಟ್ ಆದ 13.3 ಕೋಟಿಯಲ್ಲಿ ಅರ್ಹ ಮತದಾರರ ಮರುಸೇರ್ಪಡೆಗೆ ದೇಶಾದ್ಯಂತ ಅಭಿಯಾನವನ್ನು ಘೋಷಿಸಿದ್ದಾರೆ. ಪ್ರತಿ ಮನೆಗೂ ತೆರಳಿ ಫಾರಂ 6 ತುಂಬಲು BLO ಗಳಿಗೆ ಆದೇಶಿಸಿದ್ದಾರೆ. 1 ತಿಂಗಳ ಒಳಗೆ ಮನೆ ಮನೆ ಸಮೀಕ್ಷೆ ಪೂರ್ಣಗೊಳಿಸಲು ಸೂಚಿಸಿದ್ದಾರೆ. SIR ಪೂರ್ವ ಮತ್ತು ಪ್ರಸ್ತುತ ಪಟ್ಟಿಯನ್ನು ಹೋಲಿಸಿ ಮತದಾರರನ್ನು ಗುರುತಿಸಲು ಅಭಿಯಾನ ಆರಂಭಿಸಲು ಹೇಳಲಾಗಿದೆ.

ಆದರೆ ಆಗಬೇಕಾಗಿದ್ದ ಅನಾಹುತ ಆಗಿ ಹೋಗಿದೆ. ಧರೋಡೆ ಆದ ನಂತರ ದಿಡ್ಡಿ ಬಾಗಿಲು ಹಾಕಿ ಏನು ಪ್ರಯೋಜನ. ಡಿಲೀಟ್ ಮಾಡಲಾದ 13 ಕೋಟಿ ಮತದಾರರಿಂದಾಗಿ ಬಿಹಾರ, ಆಸ್ಸಾಂ, ಪಶ್ಚಿಮ ಬಂಗಾಳ, ಮಹಾರಾಷ್ಟ್ರಗಳಲ್ಲಿ ಬಿಜೆಪಿ ಸರಕಾರಗಳು ಸ್ಥಾಪಿತವಾಗಿದೆ. ಈಗ ಆ ರಾಜ್ಯಗಳಲ್ಲಿ ಬಿಟ್ಟು ಹೋದ ಮತದಾರರ ಮರು ಸೇರ್ಪಡೆ ಮಾಡಿ ಏನುಪಯೋಗ. ಮರುಸೇರ್ಪಡೆಯ ನಂತರ ಆ ರಾಜ್ಯಗಳಲ್ಲಿ ಮರುಚುನಾವಣೆ ಮಾಡಿ ಆದ ಪ್ರಮಾದವನ್ನು ಸರಿಪಡಿಸಲು ಮೋದಿ ಶಾ ಒಪ್ಪಲು ಸಾಧ್ಯವೂ ಇಲ್ಲಾ, ಈ ವಿಷಯದಲ್ಲಿ ಸುಪ್ರಿಂ ಕೋರ್ಟ ಸಹ ಏನೂ ಮಾಡಲಾಗುವುದಿಲ್ಲ.

ಇನ್ನು ಮುಂದೆ ಚುನಾವಣೆಗಳು ಆಗುವ ರಾಜ್ಯಗಳಲ್ಲಾದರೂ ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿ ಪ್ರತಿಯೊಬ್ಬ ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸುವ ಮೂಲಕ ನ್ಯಾಯಯುತ ಚುನಾವಣೆಗೆ ತಯಾರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕಾರ್ಯಪ್ರವೃತ್ತವಾಗಬೇಕಿದೆ. ಆದರೆ ಆ ಸಾಧ್ಯತೆಗಳು ತುಂಬಾ ಕಡಿಮೆ ಇದೆ. ಮೋದಿ ಶಾ ಗಳು ಅದಕ್ಕೆ ಯಾವತ್ತೂ ಒಪ್ಪಲು ಸಾಧ್ಯವಿಲ್ಲ. ಯಾಕೆಂದರೆ ಅವರಿಗೆ ಅಧಿಕಾರದಿಂದ ಕೆಳಗಿಳಿಯುವ ಇಚ್ಚೆ ಇಲ್ಲ. ನೇರವಾಗಿ ಜನರಿಂದ ಆಯ್ಕೆಯಾಗುವ ಸಾದ್ಯತೆಗಳು ಇಲ್ಲದೇ ಇರುವಾಗ EVM, SIR ದುರುಪಯೋಗದ ವಾಮಮಾರ್ಗಗಳ ಮೂಲಕ ಅಧಿಕಾರ ಹಿಡಿಯಲು ಎಲ್ಲಾ ರೀತಿಯ ತಂತ್ರ ಕುತಂತ್ರಗಳನ್ನು ಮೋದಿ ಶಾ ನೇತೃತ್ವದ ಬಿಜೆಪಿ ಮಾಡುತ್ತಲೇ ಇರುತ್ತದೆ. ಇದಕ್ಕೆ ಆರೆಸ್ಸೆಸ್ ಹಿನ್ನೆಲೆಯಲ್ಲಿದ್ದುಕೊಂಡೆ ಸಪೋರ್ಟ್ ಮಾಡುತ್ತದೆ. ಇದೇ ಈ ದೇಶದ ಚುನಾವಣಾ ವ್ಯವಸ್ಥೆಯ ದುರಂತ. ಕೊನೆಗೂ ಉಳಿಯುವ ಕಟ್ಟ ಕಡೆಯ ಪ್ರಶ್ನೆ ಮತದಾರರ ಮತದಾನದ ಹಕ್ಕು ರಕ್ಷಿಸುವವರು ಯಾರು?

Related Articles

ಇತ್ತೀಚಿನ ಸುದ್ದಿಗಳು