Home ದೇಶ ‌ಜ್ಞಾನೇಶ್‌ ಕುಮಾರ್ ಪುತ್ರಿ ಮೇಧಾ ರೂಪಮ್ ಅರ್ಜಿ ವಿಚಾರಣೆಗೆ ತರಾತುರಿ ತೋರಿದ ಕೋರ್ಟ್: ಸಿಜೆಐ ಸೂರ್ಯಕಾಂತ್‌ಗೆ...

‌ಜ್ಞಾನೇಶ್‌ ಕುಮಾರ್ ಪುತ್ರಿ ಮೇಧಾ ರೂಪಮ್ ಅರ್ಜಿ ವಿಚಾರಣೆಗೆ ತರಾತುರಿ ತೋರಿದ ಕೋರ್ಟ್: ಸಿಜೆಐ ಸೂರ್ಯಕಾಂತ್‌ಗೆ ವಕೀಲರ ಸಂಘದಿಂದ ಪತ್ರ

0

ದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ಪುತ್ರಿ ಹಾಗೂ ನೋಯ್ಡಾ ಜಿಲ್ಲಾಧಿಕಾರಿ (ಡಿಎಂ) ಮೇಧಾ ರೂಪಮ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ನಡೆಸಿದ ರೀತಿ ಮತ್ತು ಅದಕ್ಕೆ ನೀಡಲಾದ ಆದ್ಯತೆಯ ಕುರಿತು ‘ಲಾಯರ್ಸ್ ಅಸೋಸಿಯೇಷನ್ ಫಾರ್ ಕಾನ್‌ಸ್ಟಿಟ್ಯೂಷನ್’ (ಎಲ್‌ಎಎಫ್‌ಸಿ) ತೀವ್ರ ಆತಂಕ ವ್ಯಕ್ತಪಡಿಸಿದೆ. ಈ ಸಂಬಂಧ ವಕೀಲರ ಸಂಘವು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರಿಗೆ ಬಹಿರಂಗ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಸ್ತುತ ಚಾಲ್ತಿಯಲ್ಲಿರುವ ನ್ಯಾಯಪೀಠಗಳ ಕಾರ್ಯಹಂಚಿಕೆ (ರೋಸ್ಟರ್) ನಿಯಮಗಳನ್ನು ಬದಿಗೊತ್ತಿ, ಮೇಧಾ ರೂಪಮ್ ಅವರ ಅರ್ಜಿಯನ್ನು ನಿರ್ದಿಷ್ಟ ಪೀಠಕ್ಕೆ ವಿಶೇಷವಾಗಿ ನಿಯೋಜಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಪಾರದರ್ಶಕತೆಯ ಮೇಲೆ ಪರಿಣಾಮ ಬೀರಿದೆ ಎಂದು ಸಂಘವು ಆರೋಪಿಸಿದೆ. ಸಾರ್ವಜನಿಕ ಸೇವಕರಾಗಿರುವ ಅರ್ಜಿದಾರರು ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯ ಚುನಾವಣಾ ಆಯುಕ್ತರ ಪುತ್ರಿಯಾಗಿರುವ ಕಾರಣ, ಸಾಮಾನ್ಯ ನಿಯಮಾವಳಿಗಳನ್ನು ಮೀರಿ ಪ್ರಕರಣವನ್ನು ತ್ವರಿತವಾಗಿ (ಔಟ್-ಆಫ್-ಟರ್ನ್) ಪಟ್ಟಿ ಮಾಡಿ ವಿಶೇಷ ಆದ್ಯತೆ ನೀಡಿರುವುದು ತಪ್ಪು ಸಂಪ್ರದಾಯಕ್ಕೆ ನಾಂದಿ ಹಾಡಲಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಕಾರ್ಮಿಕರ ವೇತನ ಹೆಚ್ಚಳಕ್ಕೆ ಆಗ್ರಹಿಸಿ 2026ರಲ್ಲಿ ನೋಯ್ಡಾದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಆಕೃತಿ ಚೌಧರಿ ಅವರನ್ನು ಪೊಲೀಸರು ಬಂಧಿಸಿದ್ದರು. ತರುವಾಯ, ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರು ಆಕೃತಿ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್‌ಎ) ಮುನ್ನೆಚ್ಚರಿಕೆ ಬಂಧನ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಆಕೃತಿ ಚೌಧರಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್, ಎನ್‌ಎಸ್‌ಎ ಅಡಿಯಲ್ಲಿ ಬಂಧನ ಆದೇಶ ಹೊರಡಿಸಿದ್ದ ಕ್ರಮವನ್ನು ಕಟುವಾಗಿ ಆಕ್ಷೇಪಿಸಿ ರದ್ದುಗೊಳಿಸಿತ್ತು.ಜೊತೆಗೆ, ಕಾನೂನುಬಾಹಿರವಾಗಿ ಬಂಧನದಲ್ಲಿಟ್ಟಿದ್ದಕ್ಕಾಗಿ ಐದು ಲಕ್ಷ ರೂಪಾಯಿ ಪರಿಹಾರವನ್ನು ಜಿಲ್ಲಾಧಿಕಾರಿ ಮೇಧಾ ರೂಪಮ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ವೇತನದಿಂದ ವಸೂಲಿ ಮಾಡಿ ಸಂತ್ರಸ್ತೆಗೆ ಪಾವತಿಸುವಂತೆ ಆದೇಶಿಸಿತ್ತು. ಹೈಕೋರ್ಟ್‌ನ ಈ ನಿರ್ದೇಶನ ಹಾಗೂ ತಮ್ಮ ಸೇವಾ ದಾಖಲೆಗಳಲ್ಲಿನ ವ್ಯತಿರಿಕ್ತ ಅಭಿಪ್ರಾಯಗಳನ್ನು ಪ್ರಶ್ನಿಸಿ ಮೇಧಾ ರೂಪಮ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ತುರ್ತು ವಿಚಾರಣೆ ಹಾಗೂ ಪೀಠ ನಿಯೋಜನೆಯ ಕ್ರಮವು ಇದೀಗ ಕಾನೂನು ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

You cannot copy content of this page

Exit mobile version