Home ದೇಶ ಕಳೆದ ದಶಕದಲ್ಲಿ ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ 4 ಪಟ್ಟು ಹೆಚ್ಚಳ: ಎನ್‌ಸಿಆರ್‌ಬಿ ವರದಿ ಬಹಿರಂಗ

ಕಳೆದ ದಶಕದಲ್ಲಿ ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ 4 ಪಟ್ಟು ಹೆಚ್ಚಳ: ಎನ್‌ಸಿಆರ್‌ಬಿ ವರದಿ ಬಹಿರಂಗ

0

ದೆಹಲಿ: ದೇಶದಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ದತ್ತಾಂಶಗಳು ಬಹಿರಂಗಪಡಿಸಿವೆ. ಬಿಹಾರದ ಜಮೂಯಿ, ಸಮಸ್ತಿಪುರ, ಬಂಕಾ, ದೆಹಲಿಯ ಕಲ್ಕಾಜಿ ಹಾಗೂ ಒಡಿಶಾದ ಧೆಂಕನಾಲ್‌ನಲ್ಲಿ ಇತ್ತೀಚೆಗೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಘಟನೆಗಳು ದೇಶವ್ಯಾಪಿ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಬೆನ್ನಲ್ಲೇ ಈ ಅಂಕಿಅಂಶಗಳು ಹೊರಬಿದ್ದಿವೆ.

ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, 2015 ರಲ್ಲಿ 18 ವರ್ಷದೊಳಗಿನ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 10,934 ಪ್ರಕರಣಗಳು ದಾಖಲಾಗಿದ್ದರೆ, 2024 ರ ವೇಳೆಗೆ ಆ ಸಂಖ್ಯೆ 43,675 ಕ್ಕೆ ತಲುಪಿದ್ದು, ಬರೋಬ್ಬರಿ ನಾಲ್ಕು ಪಟ್ಟು ಏರಿಕೆಯಾಗಿದೆ. 2020 ರಿಂದ 2024 ರವರೆಗಿನ ಐದು ವರ್ಷಗಳ ಅವಧಿಯಲ್ಲೇ ಬಾಲಕಿಯರ ಮೇಲೆ 1.83 ಲಕ್ಷ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 96,505 ಲೈಂಗಿಕ ಹಲ್ಲೆ ಪ್ರಕರಣಗಳು, 12,807 ಲೈಂಗಿಕ ಕಿರುಕುಳ ಪ್ರಕರಣಗಳು, ಮಕ್ಕಳನ್ನು ಅಶ್ಲೀಲತೆಗೆ ಬಳಸಿಕೊಂಡ 2,924 ಪ್ರಕರಣಗಳು ಹಾಗೂ ಇತರ ಲೈಂಗಿಕ ಅಪರಾಧಗಳ ಅಡಿಯಲ್ಲಿ 3,034 ಪ್ರಕರಣಗಳು ದಾಖಲಾಗಿವೆ.

ಒಂದೆಡೆ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ತೀರಾ ಕಳವಳಕಾರಿಯಾಗಿದೆ. 2024 ರಲ್ಲಿ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಪೈಕಿ ಶೇ. 30 ರಷ್ಟು ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದ್ದು, ಬರೋಬ್ಬರಿ ಶೇ. 86 ರಷ್ಟು ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ.

ಅಲ್ಲದೆ, ಸಂತ್ರಸ್ತ ಬಾಲಕಿಯರಿಗೆ ಪರಿಚಿತರಾಗಿರುವವರೇ ಇಂತಹ ಹೀನ ಕೃತ್ಯಗಳನ್ನು ಎಸಗುತ್ತಿರುವುದು ದತ್ತಾಂಶದಲ್ಲಿ ಬೆಳಕಿಗೆ ಬಂದಿದೆ. 2024 ರಲ್ಲಿ ದಾಖಲಾದ ಶೇ. 97 ರಷ್ಟು ಪ್ರಕರಣಗಳಲ್ಲಿ ಬಂಧುಗಳು, ಸ್ನೇಹಿತರು, ರಕ್ತಸಂಬಂಧಿಗಳು, ನೆರೆಹೊರೆಯವರು, ಸಾಮಾಜಿಕ ಜಾಲತಾಣಗಳಲ್ಲಿ ಪರಿಚಿತರಾದವರು ಅಥವಾ ವಿವಾಹದ ಆಮಿಷವೊಡ್ಡಿದ ಪರಿಚಿತರೇ ಅಪರಾಧಿಗಳಾಗಿದ್ದಾರೆ. ಇದು ಹೆಣ್ಣುಮಕ್ಕಳಿಗೆ ಅಪರಿಚಿತರಿಗಿಂತ ತಮ್ಮ ಆಸುಪಾಸಿನ ವಾತಾವರಣದಲ್ಲೇ ಹೆಚ್ಚಿನ ಅಪಾಯವಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.

ಮಂದಾರ್ ಹಿಲ್ಸ್ ಕಿರುಕುಳ ಘಟನೆ:

ಇದೇ ವೇಳೆ ಬಿಹಾರದ ಬಂಕಾ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಂದಾರ್ ಹಿಲ್ಸ್‌ನಲ್ಲಿ ಯುವತಿಯೊಬ್ಬಳಿಗೆ ಕಿರುಕುಳ ನೀಡಿರುವ ಮತ್ತೊಂದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೂನ್ 3 ರಂದು ನಡೆದ ಈ ಘಟನೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 22 ರಂದು ಎಫ್‌ಐಆರ್ ದಾಖಲಾಗಿದೆ. ಮೂವರು ಯುವಕರು ತನ್ನ ಮತ್ತು ತನ್ನ ಸ್ನೇಹಿತನಿಗೆ ಬೆದರಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳ ಪೈಕಿ ಅಬ್ದುಲ್ಲಾ ಎಂಬಾತ ಸ್ನೇಹಿತನ ಬ್ಯಾಂಕ್ ಖಾತೆಯಿಂದ 1,500 ರೂಪಾಯಿ ಹಣ ವರ್ಗಾಯಿಸಿಕೊಂಡು ಹೋಗಲು ಬಿಟ್ಟಿದ್ದ ಎನ್ನಲಾಗಿದೆ. ನಿತೀಶ್ ಕುಮಾರ್ ರಾಯ್ ಮತ್ತು ವಿಕಾಸ್ ಕುಮಾರ್ ಇತರ ಆರೋಪಿಗಳಾಗಿದ್ದು, ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂತ್ರಸ್ತೆಯ ಗುರುತು ಬಹಿರಂಗಪಡಿಸಲು ಯತ್ನಿಸಿದವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

You cannot copy content of this page

Exit mobile version