Home ದೇಶ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ದೆಹಲಿಯ ಚುನಾವಣಾ ಆಯೋಗದ ಕಚೇರಿ ಬಳಿ ಭದ್ರತೆ...

ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ದೆಹಲಿಯ ಚುನಾವಣಾ ಆಯೋಗದ ಕಚೇರಿ ಬಳಿ ಭದ್ರತೆ ಹೆಚ್ಚಳ

0

ದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ನವದೆಹಲಿಯಲ್ಲಿರುವ ಕೇಂದ್ರ ಚುನಾವಣಾ ಆಯೋಗದ (ಇಸಿಐ) ಪ್ರಧಾನ ಕಚೇರಿಯ ಸುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಕೇಂದ್ರ ಚುನಾವಣಾ ಆಯೋಗವು ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸೇರಿದಂತೆ ಹಲವು ಆಂತರಿಕ ನಿರ್ಧಾರಗಳ ವಿಚಾರದಲ್ಲಿ ಚುನಾವಣಾ ಆಯುಕ್ತರ ನಡುವೆಯೇ ಭಿನ್ನಾಭಿಪ್ರಾಯ ತಲೆದೋರಿರುವುದು ಬೆಳಕಿಗೆ ಬಂದಿತ್ತು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಬಿಜೆಪಿಗೆ ಅನುಕೂಲವಾಗುವಂತೆ ವರ್ತಿಸಿದ್ದಾರೆ ಎಂದು ವಿರೋಧ ಪಕ್ಷಗಳು ನೇರವಾಗಿ ಆರೋಪಿಸುತ್ತಿವೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಸಮಾಜವಾದಿ ಪಕ್ಷ (ಎಸ್ಪಿ) ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟುಹಿಡಿದಿದ್ದು, ದೇಶದ ವಿವಿಧ ಭಾಗಗಳಲ್ಲಿ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಎದುರು ಕಾಂಗ್ರೆಸ್ ಶಾಸಕರು ಜ್ಞಾನೇಶ್ ಕುಮಾರ್ ವಿರುದ್ಧ ಧರಣಿ ನಡೆಸಿ, ಅವರ ರಾಜೀನಾಮೆಗೆ ಮತ್ತು ಬಂಧನಕ್ಕೆ ಒತ್ತಾಯಿಸಿದರು. ಮಧ್ಯಪ್ರದೇಶ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಲ್ಲೂ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

2024ರ ಲೋಕಸಭಾ ಚುನಾವಣೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ರಿಗ್ಗಿಂಗ್ ನಡೆದಿದೆ ಎಂದು ರಾಹುಲ್ ಗಾಂಧಿ ನೇರ ಆರೋಪ ಮಾಡಿದ ಬೆನ್ನಲ್ಲೇ, ಸಂಸತ್ತಿನಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಂಡನೆ (ಇಂಪೀಚ್‌ಮೆಂಟ್) ನಿರ್ಣಯ ತರಲು ವಿರೋಧ ಪಕ್ಷಗಳು ಸಿದ್ಧತೆ ನಡೆಸಿವೆ. ಇತ್ತ ಕರ್ನಾಟಕ ಕಾಂಗ್ರೆಸ್ ಘಟಕವು ಜ್ಞಾನೇಶ್ ಕುಮಾರ್ ವಿರುದ್ಧ ಪೊಲೀಸರಿಗೆ ದೂರು ನೀಡಿ ಎಫ್‌ಐಆರ್ ದಾಖಲಿಸಿದೆ.

ಇದೇ ವೇಳೆ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ದೆಹಲಿಯ ಜಂತರ್ ಮಂತರ್‌ನಲ್ಲಿ ಮತ್ತೊಮ್ಮೆ ಹೋರಾಟಕ್ಕೆ ಕರೆ ನೀಡಿದ್ದು, 48 ಗಂಟೆಗಳ ಒಳಗೆ ಸಿಇಸಿ ರಾಜೀನಾಮೆ ನೀಡದಿದ್ದರೆ ‘ಜಂತರ್ ಮಂತರ್ 2.0’ ಪ್ರತಿಭಟನೆ ಆರಂಭಿಸುವುದಾಗಿ ಎಚ್ಚರಿಸಿದೆ. ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆಯುವುದನ್ನು ತಡೆಯಲು ದೆಹಲಿ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಚುನಾವಣಾ ಆಯೋಗದ ಕಚೇರಿಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದಾರೆ.

You cannot copy content of this page

Exit mobile version