ಆಕಾಶದಲ್ಲಿ ಸಂಭವಿಸುವ ವಿಮಾನ ಅಪಘಾತಗಳು ವಿರಳವಾದರೂ, ಅವು ಅನೇಕ ಗಣ್ಯರ ಪ್ರಾಣಗಳನ್ನು ಬಲಿಪಡೆದಿವೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ವಿಮಾನ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ, ಕಳೆದ ನಾಲ್ಕು ದಶಕಗಳಲ್ಲಿ ನಡೆದ ಪ್ರಮುಖ ವಿಮಾನ ಅಪಘಾತಗಳು ಮತ್ತು ಅವುಗಳಲ್ಲಿ ಮರಣ ಹೊಂದಿದ ಗಣ್ಯರ ವಿವರಗಳು ಇಲ್ಲಿವೆ:
ಸಂವಹನ ಕೊರತೆಯಿಂದ ಹೋಮಿ ಬಾಬಾ ಸಾವು ಪ್ರಖ್ಯಾತ ಅಣು ಭೌತಶಾಸ್ತ್ರಜ್ಞ ಹಾಗೂ ದೇಶದ ಅಣು ಕಾರ್ಯಕ್ರಮದ ಪಿತಾಮಹ ಹೋಮಿ ಜಹಾಂಗೀರ್ ಬಾಬಾ ಕೂಡ ವಿಮಾನ ಅಪಘಾತದಲ್ಲೇ ಕಣ್ಣುಮುಚ್ಚಿದರು. 1966ರ ಜನವರಿ 24ರಂದು ಹೋಮಿ ಬಾಬಾ ಪ್ರಯಾಣಿಸುತ್ತಿದ್ದ ವಿಮಾನ ಸ್ವಿಸ್ ಆಲ್ಪ್ಸ್ ಪರ್ವತಗಳಲ್ಲಿ ಪತನಗೊಂಡಿತು. ಜಿನೀವಾದಲ್ಲಿದ್ದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಅಧಿಕಾರಿಗಳೊಂದಿಗೆ ವಿಮಾನದ ಪೈಲಟ್‌ಗಳಿಗೆ ಸರಿಯಾದ ಸಂವಹನ ಇಲ್ಲದಿದ್ದರಿಂದಲೇ ಈ ಅಪಘಾತ ಸಂಭವಿಸಿದೆ ಎಂದು ತೀರ್ಮಾನಿಸಲಾಯಿತು.
ಪಾಕ್ ದಾಳಿಯಲ್ಲಿ ಅದಕ್ಕೂ ಮುನ್ನ, ಅಂದರೆ 1965ರಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ಬಲವಂತರಾಯ್ ಮೆಹ್ತಾ ಕೂಡ ಇಂತಹದೇ ದುರ್ಘಟನೆಯಲ್ಲಿ ಮೃತಪಟ್ಟರು. ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, ಮೆಹ್ತಾ ಅವರು ಪ್ರಯಾಣಿಸುತ್ತಿದ್ದ ವಿಮಾನವನ್ನು ಗಡಿ ಸಮೀಪದಲ್ಲಿ ಪಾಕಿಸ್ತಾನಿ ಯುದ್ಧ ವಿಮಾನಗಳು, ಇದೊಂದು ಯುದ್ಧ ವಿಮಾನವೆಂದು ತಪ್ಪಾಗಿ ಭಾವಿಸಿ ಹೊಡೆದುರುಳಿಸಿದವು.
1973ರಲ್ಲಿ ಕೇಂದ್ರ ಉಕ್ಕು ಮತ್ತು ಗಣಿ ಖಾತೆ ಸಚಿವ ಮೋಹನ್ ಕುಮಾರಮಂಗಲಂ ಮರಣ ಹೊಂದಿದರು. ದೆಹಲಿ ಸಮೀಪದಲ್ಲಿ ಇಂಡಿಯನ್ ಏರ್‌ಲೈನ್ಸ್‌ಗೆ ಸೇರಿದ 440 ವಿಮಾನ ಪತನಗೊಂಡ ಘಟನೆಯಲ್ಲಿ ಮೃತಪಟ್ಟ ಸಚಿವರ ಮೃತದೇಹವನ್ನು ಪಾರ್ಕರ್ ಪೆನ್ ಮತ್ತು ಹಿಯರಿಂಗ್ ಏಡ್ (ಶ್ರವಣ ಸಾಧನ) ಸಹಾಯದಿಂದ ಗುರುತಿಸಲಾಯಿತು.
ವೈಮಾನಿಕ ಕಸರತ್ತು ನಡೆಸುತ್ತಿದ್ದ ಸಂಜಯ್ ಗಾಂಧಿ 1980ರ ಜೂನ್ 23ರಂದು ನಡೆದ ವಿಮಾನ ಅಪಘಾತದಲ್ಲಿ ಇಂದಿರಾ ಗಾಂಧಿಯವರ ಪುತ್ರ ಹಾಗೂ ಕಾಂಗ್ರೆಸ್ ನಾಯಕ ಸಂಜಯ್ ಗಾಂಧಿ ಮರಣ ಹೊಂದಿದರು. ಪೈಲಟ್ ತರಬೇತಿ ಪಡೆದಿದ್ದ ಸಂಜಯ್, ದೆಹಲಿಯ ಫ್ಲೈಯಿಂಗ್ ಕ್ಲಬ್‌ಗೆ ಸೇರಿದ ಸಣ್ಣ ವಿಮಾನದಲ್ಲಿ ಕಸರತ್ತು ನಡೆಸುತ್ತಿದ್ದಾಗ, ಅನಿರೀಕ್ಷಿತವಾಗಿ ನಿಯಂತ್ರಣ ತಪ್ಪಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದರು.
ನಾಗರಿಕ ವಿಮಾನಯಾನ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ಮಾಧವರಾವ್ ಸಿಂಧಿಯಾ ಉತ್ತರ ಪ್ರದೇಶದಲ್ಲಿ ಚಾರ್ಟರ್ಡ್ ವಿಮಾನ ಪತನಗೊಂಡು ಮೃತಪಟ್ಟರು. 2001ರ ಸೆಪ್ಟೆಂಬರ್ 30ರಂದು ಯುಪಿಯ ಕಾನ್ಪುರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾಗ, ಮಾರ್ಗಮಧ್ಯೆ ಹವಾಮಾನ ವೈಪರೀತ್ಯದಿಂದಾಗಿ ಮೈನ್‍ಪುರಿಯಲ್ಲಿ ವಿಮಾನವು ಏಕಾಏಕಿ ಪತನಗೊಂಡಿತು.
ಕೆರೆಯಲ್ಲಿ ಬಿದ್ದ ಹೆಲಿಕಾಪ್ಟರ್ 2002ರ ಮಾರ್ಚ್ 3ರಂದು ಅಂದಿನ ಲೋಕಸಭಾ ಸ್ಪೀಕರ್ ಹಾಗೂ ತೆಲುಗು ದೇಶಂ ನಾಯಕ ಜಿ.ಎಂ.ಸಿ. ಬಾಲಯೋಗಿ ಇದೇ ರೀತಿ ವಿಮಾನ (ಹೆಲಿಕಾಪ್ಟರ್) ಅಪಘಾತದಲ್ಲಿ ಕಣ್ಣುಮುಚ್ಚಿದರು. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಿಂದ ಹೆಲಿಕಾಪ್ಟರ್‌ನಲ್ಲಿ ಹೊರಟ ಅವರು, ಕೈಕಲೂರು ಸಮೀಪದ ಕೆರೆಯಲ್ಲಿ ಹೆಲಿಕಾಪ್ಟರ್ ಪತನಗೊಂಡ ಘಟನೆಯಲ್ಲಿ ಪ್ರಾಣ ಕಳೆದುಕೊಂಡರು.
2004ರ ಏಪ್ರಿಲ್ 17ರಂದು ಪ್ರಖ್ಯಾತ ಸಿನಿ ನಟಿ ಸೌಂದರ್ಯ ಕೂಡ ವಿಮಾನ ಅಪಘಾತದಲ್ಲೇ ಸಾವನ್ನಪ್ಪಿದರು. ಬೆಂಗಳೂರಿನಿಂದ ಕರೀಂನಗರಕ್ಕೆ ಖಾಸಗಿ ವಿಮಾನದಲ್ಲಿ ಹೊರಟ ಕೆಲವೇ ನಿಮಿಷಗಳಲ್ಲಿ ಸಿಂಗಲ್ ಎಂಜಿನ್ ವಿಮಾನ ಪತನಗೊಂಡಿತು. ಅವರೂ ಸೇರಿದಂತೆ ನಾಲ್ವರು ಸಾವನ್ನಪ್ಪಿದರು.
2005ರ ಮಾರ್ಚ್ 31ರಂದು ಹರಿಯಾಣದ ವಿದ್ಯುತ್ ಸಚಿವ ಹಾಗೂ ಪ್ರಮುಖ ಉದ್ಯಮಿ ಓ.ಪಿ. ಜಿಂದಾಲ್ ವಿಮಾನ ಅಪಘಾತದಲ್ಲಿ ಮೃತಪಟ್ಟರು. ದೆಹಲಿಂದ ಚಂಡೀಗಢಕ್ಕೆ ಹೊರಟಿದ್ದ ಅವರ ವಿಮಾನ ಯುಪಿಯ ಸಹರಾನ್‌ಪುರದಲ್ಲಿ ಪತನಗೊಂಡಿತು.
ನಲ್ಲಮಲ ಕಾಡಿನಲ್ಲಿ ಹೆಲಿಕಾಪ್ಟರ್ ಪತನ: ವೈ.ಎಸ್. ರಾಜಶೇಖರ ರೆಡ್ಡಿ ಸಾವು 2009ರಲ್ಲಿ ಅಂದಿನ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ನಲ್ಲಮಲ ಕಾಡಿನಲ್ಲಿ ಹೆಲಿಕಾಪ್ಟರ್ ಪತನಗೊಂಡು ಮರಣ ಹೊಂದಿದರು. ಹವಾಮಾನ ವೈಪರೀತ್ಯದಿಂದಾಗಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದಟ್ಟವಾದ ಕಾಡಿನಲ್ಲಿ ಪತನಗೊಂಡಿತು.
ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಸಾವು ದೇಶದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ 2021ರ ಡಿಸೆಂಬರ್ 8ರಂದು ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮರಣ ಹೊಂದಿದರು. ತಮಿಳುನಾಡಿನ ಕೂನೂರು ಸಮೀಪ ನಡೆದ ಅಪಘಾತದಲ್ಲಿ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 11 ಮಂದಿ ಸಾವನ್ನಪ್ಪಿದರು.
2011ರ ಏಪ್ರಿಲ್ 30ರಂದು ಅಂದಿನ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ದೋರ್ಜಿ ಖಂಡು ಮತ್ತು ಇತರ ನಾಲ್ವರು ಹೆಲಿಕಾಪ್ಟರ್ ಪತನಗೊಂಡು ಮೃತಪಟ್ಟರು. ಹೆಲಿಕಾಪ್ಟರ್ ಮೇಲಿನ ನಿಯಂತ್ರಣ ತಪ್ಪಿದ್ದೇ ಇದಕ್ಕೆ ಕಾರಣ ಎಂದು ಭಾವಿಸಲಾಗಿದೆ. ಇತ್ತೀಚೆಗೆ, ಕಳೆದ ವರ್ಷ ಅಂದಿನ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟರು.
