Saturday, June 15, 2024

ಸತ್ಯ | ನ್ಯಾಯ |ಧರ್ಮ

ಅನ್ನಭಾಗ್ಯ ಯೋಜನೆ ತಪ್ಪಿಸಲು ಕೇಂದ್ರ ಷಡ್ಯಂತ್ರ : ಪ್ರಿಯಾಂಕ್ ಖರ್ಗೆ ಆರೋಪ

ದ್ವೇಷದ ರಾಜಕಾರಣಕ್ಕೆ ಬಿದ್ದು ರಾಜ್ಯದಲ್ಲಿ ಅನ್ನ ಭಾಗ್ಯ ಯೋಜನೆ ಜಾರಿಗೊಳಿಸದಂತೆ ಕೇಂದ್ರ ಬಿಜೆಪಿ ಸರ್ಕಾರ ರಾಜಕೀಯ ಕುತಂತ್ರ ಮಾಡುತ್ತಿದೆ. ಇದಕ್ಕೆ ರಾಜ್ಯದ ಬಿಜೆಪಿ ನಾಯಕರೂ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಕಲಬುರಗಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕನ್ನಡಿಗರ ಆಸ್ಮಿತೆಗೆ ಧಕ್ಕೆಯಾಗುತ್ತಿರುವುದಕ್ಕೆ, ನಿರುದ್ಯೋಗ ಸಮಸ್ಯೆ ಹೆಚ್ಚಿರುವುದಕ್ಕೆ ರಾಜ್ಯದ ಜನತೆ ಬಿಜೆಪಿ ವಿರುದ್ದ ತಿರುಗಿ ಬಿದ್ದಿದ್ದರು. ಅದರ ಪರಿಣಾಮವೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಬಂದಿದೆ. ಇದನ್ನು ಸಹಿಸಿಕೊಳ್ಳಲು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಆಗದಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ದ ದ್ವೇ಼ಷದ ರಾಜಕಾರಣ ಪ್ರಾರಂಭಿಸಿದೆ ಎಂದು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರದ ವತಿಯಿಂದ 5 ಕೆಜಿ ಹಾಗೂ ಕೇಂದ್ರದಿಂದ 5 ಕೆಜಿ ಸೇರಿ ಒಟ್ಟು 10 ಕೆಜಿ ಅಕ್ಕಿಯನ್ನು ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಜನರಿಗೆ ವಿತರಿಸುವುದಾಗಿ ಸಿಎಂ ಜೂನ್ 2 ರಂದು ಹೇಳಿದ್ದರು ಅದರಂತೆ ಭಾರತೀಯ ಆಹಾರ ನಿಗಮಕ್ಕೆ (Food Corporation of India ) ಗೆ ಪತ್ರ ಬರೆದು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಕೋರಿರುತ್ತಾರೆ. ಆಗ ಉತ್ತರಿಸಿದ ಎಫ್ ಸಿ ಐ ಜೂನ್ 12 ರಂದು ಪತ್ರ ಬರೆದು ಪ್ರತಿ ಕ್ವಿಂಟಾಲ್ ಗೆ ರೂ 3400 ರಂತೆ 2.08 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಒಪ್ಪಿರುತ್ತದೆ.

ಆದರೆ ಅಚ್ಚರಿಯಂತೆ, ಕೇಂದ್ರ ಆಹಾರ ಸರಬರಾಜು ಹಾಗೂ ಸಾರ್ವಜನಿಕ ವಿತರಣಾ ಇಲಾಖೆಯ ಅಣತಿಯಂತೆ ಎಫ್ ಸಿ ಐ ಜೂನ್ 13 ರಂದು ರಾಜ್ಯಕ್ಕೆ ಬರೆದ ಮತ್ತೊಂದು ಪತ್ರದಲ್ಲಿ ಅಕ್ಕಿ ಸರಬರಾಜು ಮಾಡಲು ಆಗುವುದಿಲ್ಲ ಎಂಬ ಪ್ರತಿಕ್ರಿಯೆ ನೀಡುತ್ತದೆ.. ಎಫ್ ಸಿ ಐ ನಲ್ಲಿ ಸಾಕಷ್ಟು ಅಕ್ಕಿ ದಾಸ್ತಾನು ಇದ್ದು ಖಾಸಗಿಯವರಿಗೆ ಸರಬರಾಜು ಮಾಡಲು ಸಿದ್ಧರಿದ್ದರೂ ಕೂಡಾ ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡಲು ನಿರಾಕರಿಸಿರುವುದು ಗಮನಿಸಿದರೆ ಕೇಂದ್ರಕ್ಕೆ ಕನ್ನಡಿಗರ ಹಿತಾಸಕ್ತಿ ಕಾಪಾಡುವುದು ಬೇಕಿಲ್ಲ ಹಾಗೂ ರಾಜ್ಯವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುವುದು ಬೇಕಿಲ್ಲ ಎಂದು ಗೊತ್ತಾಗುತ್ತದೆ ಎಂದು ಹೇಳಿದರು.

ಒಂದು ಕಡೆ ರಾಜ್ಯಕ್ಕೆ ಅಕ್ಕಿ ವಿತರಣೆ ಮಾಡಲು ಆಗುವುದಿಲ್ಲ ಎಂದು ಹೇಳುತ್ತಾ ಇನ್ನೊಂದು ಕಡೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ‌ ಎಸ್ ಜೈಶಂಕರ್ ಅಮೇರಿಕಾ ಹಾಗೂ ಯೂರೋಪ್ ದೇಶಗಳಿಗೆ ಆಹಾರ ಧಾನ್ಯ ಸರಬರಾಜು ಮಾಡುವುದಾಗಿ ಹೇಳಿದ್ದಾರೆ. ತನ್ನದೇ ದೇಶದ ಜನರನ್ನು ಹಸಿವಿಗೆ ದೂಡಿ, ಬೇರೆ ದೇಶಕ್ಕೆ ಆಹಾರ ಸರಬರಾಜು ಮಾಡೋದು ದೇಶದ್ರೋಹವಲ್ಲವೇ? ಎಂದು ಪ್ರಶ್ನಿಸಿದರು.

ಜುಲೈ 1 ರಂದು ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡುವುದಿಲ್ಲವೇ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಛತ್ರಿಸಗಡ್ ರಾಜ್ಯವನ್ನು ಸಂಪರ್ಕಸಲಾಗಿದ್ದು ಅವರು 1.50 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಒಪ್ಪಿದ್ದಾರೆ ಹಾಗಾಗಿ ಯೋಜನೆ ಜಾರಿಗೊಳಿಸುತ್ತೇವೆ. ಆದರೆ ಜುಲೈ 1 ರಂದು ಜಾರಿಗೆ ತರಬೇಕೆಂದರೆ ಕೇಂದ್ರ ಬಿಜೆಪಿ ಸರ್ಕಾರ ಮನಸು ಮಾಡಿ ರಾಜ್ಯದ ಜನರು ಮತ ಹಾಕದಿದ್ದರೂ ಪರವಾಗಿಲ್ಲ ಎಂದು ಅಕ್ಕಿ ಸರಬರಾಜು ಮಾಡಿದರೆ ಸಾಧ್ಯವಾಗುತ್ತದೆ ಎಂದರು.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬೇಕಾಗುವಷ್ಟು ಅನುದಾನ‌ ನೀಡಲು ಸಿದ್ದವಿರುವುದಾಗಿ ಹೇಳಿದ ಸಚಿವರು, ಮಳೆ ಕೊರತೆಯಿಂದಾಗಿ ಮೋಡ ಬಿತ್ತನೆ ಕುರಿತಂತೆ ಕಂದಾಯ ಸಚಿವರು ಈಗಾಗಲೇ ಹೇಳಿಕೆ ನೀಡಿರುತ್ತಾರೆ ಎಂದರು.

ಯಾರನ್ನು ತಮ್ಮ ಆಪ್ತ ಕಾರ್ಯದರ್ಶಿ ಮಾಡಿಕೊಳ್ಳುವುದು ತಮ್ಮ ವಿವೇಚನೆ ಎಂದ ಪ್ರಿಯಾಂಕ್ ಖರ್ಗೆ ಕೆಕೆಆರ್ ಡಿಬಿಯ ವಿರುದ್ದ ನನ್ನ ಆರೋಪವಿತ್ತು. ಪ್ರಸ್ತುತ ನಡೆಯುತ್ತಿರುವ ಕೆಕೆಆರ್ ಡಿಬಿ ಅವ್ಯವಹಾರದ ತನಿಖೆಯಲ್ಲಿ ಆಪ್ತ ಕಾರ್ಯದರ್ಶಿ ತಪ್ಪಿತಸ್ಥರು ಎಂದು ಕಂಡುಬಂದರೆ ಅವರ ವಿರುದ್ದವೂ ಕ್ರಮ ಜರುಗಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ, ಶಾಸಕರಾದ ಕನೀಜ್ ಫಾತೀಮಾ, ಅಲ್ಲಮಪ್ರಭು ಪಾಟೀಲ, ಬಿ.ಆರ್. ಪಾಟೀಲ, ಮಾಜಿ ಸಚಿವ ರೇವು ನಾಯಕ ಬೆಳಮಗಿ, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಡೇವಿಡ್ ಸಿಮೆಯೋನ್, ಸುಭಾಷ ರಾಠೋಡ, ಶಿವಾನಂದ ಪಾಟೀಲ ಸೇರಿದಂತೆ ಮತ್ತಿತರಿದ್ದರು‌.

Related Articles

ಇತ್ತೀಚಿನ ಸುದ್ದಿಗಳು