ದೇಶಾದ್ಯಂತ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಸಿದ ಕೇಂದ್ರ ಸರ್ಕಾರ: ಗೃಹ ಬಳಕೆ ಸಿಲಿಂಡರ್ ₹60 ಹೆಚ್ಚಳ

ದೇಶಾದ್ಯಂತ ಗೃಹ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ. ಶನಿವಾರದಿಂದಲೇ ಪರಿಷ್ಕೃತ ದರಗಳು ಜಾರಿಗೆ ಬಂದಿದ್ದು, 14.2 ಕೆಜಿ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗೆ ₹60 ಹೆಚ್ಚಳವಾಗಿದೆ. ಇದೇ ವೇಳೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನೂ ₹115ರವರೆಗೆ ಏರಿಸಲಾಗಿದೆ.

ಈ ಹೆಚ್ಚಳದಿಂದ ದೇಶದಾದ್ಯಂತ ಗೃಹ ಗ್ರಾಹಕರು ಹಾಗೂ ಎಲ್‌ಪಿಜಿಯನ್ನು ಅವಲಂಬಿಸಿರುವ ವ್ಯಾಪಾರ ಸಂಸ್ಥೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಪ್ರಮುಖ ನಗರಗಳಲ್ಲಿ ಗೃಹ ಬಳಕೆಯ ಸಿಲಿಂಡರ್ ದರಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ₹853ರಿಂದ ₹913ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ₹852.50 ಇದ್ದ ದರ ಈಗ ₹912.50ಕ್ಕೆ ತಲುಪಿದೆ. ಕೋಲ್ಕತ್ತಾದಲ್ಲಿ ₹879 ಇದ್ದ ಬೆಲೆ ₹930ಕ್ಕೆ ಏರಿಕೆಯಾಗಿದೆ. ಚೆನ್ನೈನಲ್ಲಿ ₹868.50 ಇದ್ದ ದರ ₹928.50ಕ್ಕೆ ಹೆಚ್ಚಳವಾಗಿದೆ.

ಇದರಿಂದ ಏಪ್ರಿಲ್ 2025 ನಂತರ ಗೃಹ ಬಳಕೆಯ ಎಲ್‌ಪಿಜಿ ದರದಲ್ಲಿ ಇದು ಮೊದಲ ಪರಿಷ್ಕರಣೆ ಎಂದು ಹೇಳಲಾಗಿದೆ. ಆ ಸಮಯದಲ್ಲಿ ದೆಹಲಿಯಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹853ಕ್ಕೆ ನಿಗದಿಪಡಿಸಲಾಗಿತ್ತು.

ಇನ್ನೊಂದೆಡೆ, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ ಹೆಚ್ಚಳ ಕಂಡಿದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ₹1,768.50ರಿಂದ ₹1,883ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ₹1,720.50 ಇದ್ದ ದರ ₹1,835ಕ್ಕೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ₹1,875.50 ಇದ್ದ ದರ ₹1,990ಕ್ಕೆ ತಲುಪಿದೆ. ಚೆನ್ನೈನಲ್ಲಿ ₹1,929 ಇದ್ದ ದರ ₹2,043.50ಕ್ಕೆ ಏರಿಕೆಯಾಗಿದೆ.

ಇದರಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸಣ್ಣ ವ್ಯಾಪಾರ ಸಂಸ್ಥೆಗಳ ವೆಚ್ಚ ಹೆಚ್ಚುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದರ ನಡುವೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆ ಇಂಧನ ಕೊರತೆ ಉಂಟಾಗುವ ಸಾಧ್ಯತೆ ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ದೇಶದಲ್ಲಿ ಸಾಕಷ್ಟು ಇಂಧನ ಸಂಗ್ರಹವಿದೆ ಎಂದು ಭರವಸೆ ನೀಡಿದ್ದಾರೆ.

“ನಮ್ಮ ನಾಗರಿಕರಿಗೆ ಕೈಗೆಟುಕುವ ಹಾಗೂ ಸುಸ್ಥಿರ ಇಂಧನ ಪೂರೈಕೆಯನ್ನು ಖಚಿತಪಡಿಸುವುದು ನಮ್ಮ ಆದ್ಯತೆ. ಭಾರತದಲ್ಲಿ ಇಂಧನ ಕೊರತೆಯಿಲ್ಲ,” ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯೂ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಇದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿನ ವದಂತಿಗಳನ್ನು ತಳ್ಳಿಹಾಕಿದೆ. ದೇಶಾದ್ಯಂತ ಇಂಧನ ಪೂರೈಕೆ ಹಾಗೂ ವಿತರಣಾ ವ್ಯವಸ್ಥೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು