ದೆಹಲಿ ಕೊಳಗೇರಿ ತೆರವು ಕಾರ್ಯಾಚರಣೆ ಮಸೀದಿ ಬಳಿ ವಾಸವಿದ್ದ – 700 ಕುಟುಂಬಗಳು ಬೀದಿಪಾಲು

ನವದೆಹಲಿ : ಇಲ್ಲಿನ (Delhi) ರೇಸ್ ಕೋರ್ಸ್ ಮಸೀದಿ (Masjid) ಸಮೀಪದ ಕೊಳಗೇರಿ ಪ್ರದೇಶಗಳಲ್ಲಿ ನೆಲೆಸಿದ್ದ ಏಳುನೂರಕ್ಕೂ ಅಧಿಕ ಕುಟುಂಬಗಳು (700 families) ತೆರವು ಕಾರ್ಯಾಚರಣೆಯಿಂದಾಗಿ ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿವೆ. ಭಾಯಿ ರಾಮ್ ಕ್ಯಾಂಪ್, ಮಸೀದಿ ಕ್ಯಾಂಪ್ ಮತ್ತು ಡಿಐಡಿ ಕಾಲೋನಿ ಸೇರಿದಂತೆ ಪ್ರಧಾನಮಂತ್ರಿ ನಿವಾಸದ ಸಮೀಪವಿರುವ ಜೈಪುರ ಪೋಲೋ ಮೈದಾನದ ಸುತ್ತಲಿನ ಬಡಾವಣೆಗಳಲ್ಲಿ ಈ ತೆರವು ನಡೆದಿದೆ.

ದಶಕಗಳಿಂದ ಇಲ್ಲಿ ವಾಸಿಸುತ್ತಿದ್ದ ಕುಟುಂಬಗಳನ್ನು ಹೊರ ದೆಹಲಿಯ ಸಾವ್ದಾ ಘೇವ್ರಾಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದು, ಅದು ಸುಮಾರು 45 ಕಿಲೋಮೀಟರ್ ದೂರದಲ್ಲಿದೆ. ಇದರಿಂದ ತಮ್ಮ ದಿನಗೂಲಿ ಕೆಲಸ, ಮಕ್ಕಳ ಶಿಕ್ಷಣ ಮತ್ತು ಮೂಲ ಸೌಕರ್ಯಗಳಿಗೆ ತೊಂದರೆಯಾಗುತ್ತದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ತೆರವು ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಆಗಸ್ಟ್ ನಲ್ಲಿ ಸರ್ಕಾರದ ಆದೇಶ ಕಾನೂನುಬಾಹಿರವಲ್ಲ ಎಂದು ಹೇಳಿ ಪುನರ್ವಸತಿ ಮೇಲ್ವಿಚಾರಣೆಗೆ ಸಮಿತಿ ರಚಿಸಿದೆ. ಇದೇ ವೇಳೆ ಐತಿಹಾಸಿಕ ರೇಸ್ ಕೋರ್ಸ್ ಮಸೀದಿಗೂ ಭೂ ಮತ್ತು ಅಭಿವೃದ್ಧಿ ಕಚೇರಿ ಆರು ದಿನಗಳಲ್ಲಿ ಖಾಲಿ ಮಾಡುವ ನೋಟಿಸ್ ನೀಡಿದೆ. 1977ರಿಂದ ಗೆಜೆಟೆಡ್ ವಕ್ಫ್ ಆಸ್ತಿಯಾಗಿದ್ದರೂ ವಕ್ಫ್ ಮಂಡಳಿ ಕ್ರಮ ಕೈಗೊಳ್ಳಲಿಲ್ಲ ಎಂದು ಎಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ. ಜಮಿಯತ್ ಉಲಮಾ ಇ ಹಿಂದ್ ನಿಯೋಗ ಅಕ್ಟೋಬರ್ 19ರಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿ ಮಾಡಿ ಮಸೀದಿ ಮತ್ತು ಸ್ಮಶಾನದ ರಕ್ಷಣೆ, ವಿದ್ಯುತ್ ನೀರಿನ ಪುನಃಸ್ಥಾಪನೆ ಹಾಗೂ ಪ್ರಾರ್ಥನೆಗೆ ಅವಕಾಶ ಕೋರಿದೆ. ಕಾಂಗ್ರೆಸ್ ಸಂಸದ ಸೈಯದ್ ನಾಸಿರ್ ಹುಸೇನ್ ಕೂಡ ಪುನರ್ವಸತಿ ಇಲ್ಲದೆ ಮನೆ ಉರುಳಿಸಿದ್ದನ್ನು ಖಂಡಿಸಿ ತಕ್ಷಣ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ನಾವು ಅಭಿವೃದ್ಧಿಗೆ ವಿರೋಧಿಗಳಲ್ಲ, ಉದ್ಯೋಗ ಮತ್ತು ಮಕ್ಕಳ ಓದಿಗೆ ಅನುಕೂಲವಿರುವ ಸ್ಥಳದಲ್ಲಿ ಗೌರವಯುತ ಪುನರ್ವಸತಿ ಬೇಕು ಎಂಬುದು ನಿವಾಸಿಗಳ ಬೇಡಿಕೆಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು