ಎಸ್‌ಬಿಐ ಗ್ರಾಹಕರ ಡೇಟಾ ಸೋರಿಕೆ: ಡಾರ್ಕ್ ವೆಬ್‌ನಲ್ಲಿ 3,897 ಗ್ರಾಹಕರ ವೈಯಕ್ತಿಕ ಮಾಹಿತಿ ಬಹಿರಂಗ!

ಮುಂಬೈ (ಅಕ್ಟೋಬರ್ 21, 2026): ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ (SBI) ಗ್ರಾಹಕರ ಡೇಟಾ ಸೋರಿಕೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಡಾರ್ಕ್ ವೆಬ್‌ನಲ್ಲಿ (Dark Web) ಸುಮಾರು 3,897 ಗ್ರಾಹಕರ ವೈಯಕ್ತಿಕ ಗುರುತಿನ ಮಾಹಿತಿಗಳು (PII) ಬಹಿರಂಗವಾಗಿವೆ ಎಂದು ಸ್ವತಃ ಎಸ್‌ಬಿಐ ಬುಧವಾರ (ಅಕ್ಟೋಬರ್ 21) ಬಾಂಬೆ ಷೇರುಪೇಟೆ (BSE) ಮತ್ತು ರಾಷ್ಟ್ರೀಯ ಷೇರುಪೇಟೆಗೆ (NSE) ಸಲ್ಲಿಸಿದ ಅಧಿಕೃತ ಪತ್ರದಲ್ಲಿ ತಿಳಿಸಿದೆ.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (SEBI) ನಿಯಮಾವಳಿ 30ರ ಅಡಿಯಲ್ಲಿ ಬ್ಯಾಂಕ್ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಕಳೆದ ಅಕ್ಟೋಬರ್ 16, 2026 ರಂದು ಬ್ಯಾಂಕಿನ ಥ್ರೆಟ್ ಇಂಟೆಲಿಜೆನ್ಸ್ ಸರ್ವೀಸ್ ಪ್ರೊವೈಡರ್, ಡಿಫೆನ್ಸ್ ಸೈಬರ್ ಏಜೆನ್ಸಿ ಹಾಗೂ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡದಿಂದ (CERT-In) ಡಾರ್ಕ್ ವೆಬ್‌ನಲ್ಲಿ ಗ್ರಾಹಕರ ಡೇಟಾ ಸೋರಿಕೆಯಾಗಿರುವ ಶಂಕೆಯ ಕುರಿತು ಎಸ್‌ಬಿಐಗೆ ಎಚ್ಚರಿಕೆಯ ಸಂದೇಶ ರವಾನೆಯಾಗಿತ್ತು.

ಇದರ ಬೆನ್ನಲ್ಲೇ ಡಾರ್ಕ್ ವೆಬ್‌ನಲ್ಲಿ ಲಭ್ಯವಿದ್ದ ಸುಮಾರು 3,75,000 ದಾಖಲೆಗಳ ಪ್ರಾಥಮಿಕ ವಿಶ್ಲೇಷಣೆ ನಡೆಸಿದಾಗ, ಅದರಲ್ಲಿ 3,897 ಗ್ರಾಹಕರ ವೈಯಕ್ತಿಕ ಗುರುತಿನ ಮಾಹಿತಿಗಳು (PII) ಇರುವುದು ಪತ್ತೆಯಾಗಿದೆ. ಸೋರಿಕೆಯಾಗಿರುವ ಮಾಹಿತಿಯಲ್ಲಿ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗಳು, ಜನ್ಮ ದಿನಾಂಕ, ಹೆಸರು, ಲಿಂಗ, ಇಮೇಲ್ ವಿಳಾಸ, ಮನೆಯ ವಿಳಾಸ, ಬ್ಯಾಂಕ್ ಶಾಖೆ ಮತ್ತು ಸಿಐಎಫ್ (CIF) ಗುರುತಿನ ಸಂಖ್ಯೆಗಳು, ಲೀಡ್ ಐಡಿಗಳು ಹಾಗೂ ಸಾಲದ ದಾಖಲೆಗಳಿಗೆ ಸಂಬಂಧಿಸಿದ ಮೆಟಾಡೇಟಾ ಮತ್ತು ಇತರ ಫೈಲ್‌ಗಳು ಸೇರಿವೆ ಎಂದು ಬ್ಯಾಂಕ್ ವಿವರಿಸಿದೆ.

ಬಹಿರಂಗಗೊಂಡಿರುವ ಡೇಟಾದ ಸತ್ಯಾಸತ್ಯತೆ, ಸೋರಿಕೆಯ ಮೂಲ ಮತ್ತು ವ್ಯಾಪ್ತಿಯನ್ನು ಪತ್ತೆಹಚ್ಚಲು ಹಾಗೂ ಗ್ರಾಹಕರು ಮತ್ತು ಬ್ಯಾಂಕಿಗೆ ಉಂಟಾಗಬಹುದಾದ ಅಪಾಯಗಳನ್ನು ಅಂದಾಜಿಸಲು ಸಮಗ್ರ ತನಿಖೆಯ ಅಗತ್ಯವಿದೆ ಎಂದು ಬ್ಯಾಂಕ್ ತಿಳಿಸಿದೆ. ಎಚ್ಚರಿಕೆ ಲಭಿಸಿದ ತಕ್ಷಣವೇ ಬ್ಯಾಂಕ್ ತನ್ನ ಸೈಬರ್ ಭದ್ರತಾ ಮತ್ತು ನಿಯಂತ್ರಣ ಪ್ರೋಟೋಕಾಲ್‌ಗಳನ್ನು ಸಕ್ರಿಯಗೊಳಿಸಿದೆ. ಜೊತೆಗೆ, ಈ ಡೇಟಾ ಸೋರಿಕೆಯ ಸ್ವರೂಪ ಮತ್ತು ವ್ಯಾಪ್ತಿಯ ಕುರಿತು ಸಮಗ್ರ ತನಿಖೆ ನಡೆಸಲು ‘CERT-In’ ಮಾನ್ಯತೆ ಪಡೆದ ಸ್ವತಂತ್ರ ಸೈಬರ್ ಭದ್ರತಾ ಸಂಸ್ಥೆಯೊಂದನ್ನು ನೇಮಿಸಲಾಗಿದೆ.

ಬ್ಯಾಂಕಿಂಗ್ ವಹಿವಾಟಿಗೆ ಯಾವುದೇ ಧಕ್ಕೆಯಿಲ್ಲ: ಈ ಘಟನೆಯು ಬ್ಯಾಂಕಿನ ಪ್ರಮುಖ ವಹಿವಾಟು, ಆರ್ಥಿಕ ಕಾರ್ಯಕ್ಷಮತೆ ಅಥವಾ ದೈನಂದಿನ ಸೇವೆಗಳ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಎಸ್‌ಬಿಐ ಸ್ಪಷ್ಟಪಡಿಸಿದೆ. ಬ್ಯಾಂಕಿನ ಎಲ್ಲಾ ಪ್ರಮುಖ ಕಾರ್ಯಚಟುವಟಿಕೆಗಳು ಯಾವುದೇ ಅಡೆತಡೆಯಿಲ್ಲದೆ ಎಂದಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ಸದ್ಯ ಈ ಕುರಿತು ವಿಸ್ತೃತ ಪರಿಶೀಲನೆ ನಡೆಯುತ್ತಿದ್ದು, ಅಗತ್ಯವಿರುವ ಪರಿಹಾರ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಹಾಗೂ ಷೇರುದಾರರಿಗೆ ಭರವಸೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು