Home ದೆಹಲಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಖರೀದಿಗೆ ಕೇಂದ್ರದಿಂದ ನಿರ್ಬಂಧ: ಪ್ರತಿ ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್...

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಖರೀದಿಗೆ ಕೇಂದ್ರದಿಂದ ನಿರ್ಬಂಧ: ಪ್ರತಿ ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಮಿತಿ ಹೇರಿದ ಸರ್ಕಾರ

0

ದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಹಾಗೂ ಖರೀದಿ ಪ್ರಕ್ರಿಯೆಯ ಮೇಲೆ ಕೇಂದ್ರ ಸರ್ಕಾರವು ದಿಢೀರನೆ ಕಟ್ಟುನಿಟ್ಟಿನ ನಿಯಂತ್ರಣಗಳನ್ನು ಹೇರಿದೆ. ಸಾಮಾನ್ಯ ರಿಟೇಲ್ ಪೆಟ್ರೋಲ್ ಬಂಕ್‌ಗಳಲ್ಲಿ ಕೈಗಾರಿಕಾ ಸಂಸ್ಥೆಗಳು ಸಗಟು (Bulk) ರೂಪದಲ್ಲಿ ಇಂಧನವನ್ನು ಖರೀದಿಸುವುದಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಹೊಸ ನಿಯಮಾವಳಿಗಳ ಪ್ರಕಾರ, ರಿಟೇಲ್ ಬಂಕ್‌ಗಳಲ್ಲಿ ಇನ್ನು ಮುಂದೆ ಪ್ರತಿ ವಾಹನಕ್ಕೆ ಅಥವಾ ಒಬ್ಬ ಗ್ರಾಹಕನಿಗೆ ದಿನವೊಂದಕ್ಕೆ ಗರಿಷ್ಠ 200 ಲೀಟರ್‌ಗಿಂತ ಹೆಚ್ಚು ಇಂಧನವನ್ನು ಮಾರಾಟ ಮಾಡಬಾರದು ಎಂದು ಕಟ್ಟುನಿಟ್ಟಿನ ಶರತ್ತು ವಿಧಿಸಲಾಗಿದೆ. ಈ ಹೊಸ ಆಂಕ್ಷೆಗಳು ಮುಂದಿನ 90 ದಿನಗಳವರೆಗೆ ದೇಶಾದ್ಯಂತ ಜಾರಿಯಲ್ಲಿರಲಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಕೈಗಾರಿಕಾ, ವಾಣಿಜ್ಯ ಮತ್ತು ಇತರ ಸಾಂಸ್ಥಿಕ ಖರೀದಿದಾರರು ಇನ್ನು ಮುಂದೆ ಸಾರ್ವಜನಿಕ ರಿಟೇಲ್ ಬಂಕ್‌ಗಳಿಗೆ ಬರುವಂತಿಲ್ಲ. ಅವರು ತಮಗೆ ಅಗತ್ಯವಿರುವ ಇಂಧನವನ್ನು ಕಡ್ಡಾಯವಾಗಿ ಸರ್ಕಾರದಿಂದ ಅಧಿಕೃತ ಮಾನ್ಯತೆ ಪಡೆದ ಸಗಟು ಪೂರೈಕೆದಾರರ (Authorised Bulk Suppliers) ಮೂಲಕವೇ ಪಡೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ರಿಟೇಲ್ ಮಾರುಕಟ್ಟೆ ಹಾಗೂ ಸಗಟು (ಬಲ್ಕ್) ಮಾರುಕಟ್ಟೆಯ ಇಂಧನ ದರಗಳ ನಡುವಿನ ವ್ಯತ್ಯಾಸವು ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚಾಗುತ್ತಿರುವುದೇ ಕೇಂದ್ರದ ಈ ದಿಢೀರ್ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ, ಪ್ರಸ್ತುತ ದೆಹಲಿಯ ಸಾಮಾನ್ಯ ರಿಟೇಲ್ ಬಂಕ್‌ಗಳಲ್ಲಿ ಒಂದು ಲೀಟರ್ ಡೀಸೆಲ್ ದರ 95.20 ರೂಪಾಯಿ ಇದ್ದರೆ, ಅದೇ ಡೀಸೆಲ್ ಸಗಟು ಪೂರೈಕೆದಾರರ ಬಳಿ ಬರೋಬ್ಬರಿ 134.50 ರೂಪಾಯಿ ತಲುಪಿದೆ. ಅಂದರೆ ಲೀಟರ್‌ಗೆ ಸುಮಾರು 40 ರೂಪಾಯಿಗಳ ಭಾರಿ ವ್ಯತ್ಯಾಸವಿದೆ. ಈ ಕಾರಣದಿಂದಾಗಿ ದೊಡ್ಡ ದೊಡ್ಡ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳು ಸಗಟು ದರದಲ್ಲಿ ಇಂಧನ ಖರೀದಿಸುವ ಬದಲು, ಲಾಭದ ಆಸೆಗೆ ಬಿದ್ದು ಸಾಮಾನ್ಯ ಗ್ರಾಹಕರು ಬಳಸುವ ರಿಟೇಲ್ ಬಂಕ್‌ಗಳ ಕಡೆಗೆ ಮುಖ ಮಾಡುತ್ತಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇದನ್ನು ತಡೆಯಲು ಮತ್ತು ತೈಲ ಕಂಪನಿಗಳ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಈ ಮಿತಿಯನ್ನು ಹೇರಿದೆ.

ಸರ್ಕಾರದ ಈ ಹೊಸ ನಿಯಂತ್ರಣಗಳ ವಿರುದ್ಧ ದೇಶಾದ್ಯಂತ ಸಾರ್ವಜನಿಕ ವಲಯ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕೇವಲ ನಾಲ್ಕೈದು ದಿನಗಳ ಹಿಂದೆಯಷ್ಟೇ, “ದೇಶದಲ್ಲಿ ಮುಂದಿನ 76 ದಿನಗಳಿಗೆ ಅಗತ್ಯವಿರುವಷ್ಟು ಭರಪೂರ ತೈಲ ದಾಸ್ತಾನು (Petroleum Reserves) ಲಭ್ಯವಿದೆ” ಎಂದು ಜಂಭ ಕೊಚ್ಚಿಕೊಂಡಿದ್ದ ಕೇಂದ್ರ ಸರ್ಕಾರ, ಈಗ ದಿಢೀರನೆ ಇಂಧನ ಖರೀದಿಗೆ ಮಿತಿ ಹೇರಿರುವುದು ಸಾರ್ವಜನಿಕರಲ್ಲಿ ತೀವ್ರ ಅನುಮಾನಗಳನ್ನು ಮೂಡಿಸಿದೆ. ದೇಶದಲ್ಲಿ ನಿಜವಾಗಿಯೂ ಇಂಧನ ಕೊರತೆ ಉಂಟಾಗಿದೆಯೇ ಎಂಬ ಭೀತಿ ನೆಟ್ಟಿಗರಲ್ಲಿ ಕಾಡಲಾರಂಭಿಸಿದೆ. ತೈಲ ಖರೀದಿಯ ಮೇಲಿನ ಈ ನಿರ್ಬಂಧಗಳಿಂದಾಗಿ ಮಾರುಕಟ್ಟೆಯಲ್ಲಿ ಕಪ್ಪು ದಂಧೆ (Black Market) ವ್ಯಾಪಕವಾಗಿ ಹೆಚ್ಚಾಗಲಿದ್ದು, ಸಾಮಾನ್ಯ ಜನರ ಜೇಬಿಗೆ ಭಾರಿ ಕತ್ತರಿ ಬೀಳಲಿದೆ ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆಯ ಮುನ್ನ ಯಾವುದೇ ಕಾರಣಕ್ಕೂ ಇಂಧನ ದರಗಳನ್ನು ಹೆಚ್ಚಿಸುವುದಿಲ್ಲ ಎಂದು ಪದೇ ಪದೇ ಭರವಸೆ ನೀಡಿದ್ದ ಕೇಂದ್ರ ಸರ್ಕಾರ, ಚುನಾವಣೆ ಮುಗಿಯುತ್ತಿದ್ದಂತೆ ಸರಣಿ ದರ ಏರಿಕೆಯ ಮೂಲಕ ಗ್ರಾಹಕರಿಗೆ ಭಾರಿ ಶಾಕ್ ನೀಡಿದೆ. ಮೇ 15 ರಂದು ಲೀಟರ್‌ಗೆ 3 ರೂಪಾಯಿ ಹೆಚ್ಚಿಸುವ ಮೂಲಕ ಆರಂಭವಾದ ಈ ದರ ಏರಿಕೆಯ ಸರಣಿ ಕೇವಲ 11 ದಿನಗಳ ಅವಧಿಯಲ್ಲಿ ಒಟ್ಟು ನಾಲ್ಕು ಬಾರಿ ಮುಂದುವರಿದಿದೆ.

ಮೇ 19 ರಂದು 90 ಪೈಸೆ, ಮೇ 23 ರಂದು ಪೆಟ್ರೋಲ್‌ಗೆ 87 ಪೈಸೆ ಮತ್ತು ಡೀಸೆಲ್‌ಗೆ 91 ಪೈಸೆ ಏರಿಕೆ ಮಾಡಲಾಗಿತ್ತು. ತದನಂತರ ಮೇ 26 ರಂದು ಮತ್ತೊಮ್ಮೆ ಪೆಟ್ರೋಲ್ ಲೀಟರ್‌ಗೆ 2.61 ರೂಪಾಯಿ ಹಾಗೂ ಡೀಸೆಲ್ ಲೀಟರ್‌ಗೆ 2.71 ರೂಪಾಯಿಗಳಷ್ಟು ಭಾರಿ ದುಬಾರಿಯಾಗಿದೆ. ಮೇ 15 ಕ್ಕೂ ಮುನ್ನ ಹೈದರಾಬಾದ್‌ನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 107.46 ರೂಪಾಯಿ ಮತ್ತು ಡೀಸೆಲ್ ದರ 95.70 ರೂಪಾಯಿ ಇತ್ತು. ಆದರೆ ಈ ಸರಣಿ ವಾತದ ನಂತರ ಪ್ರಸ್ತುತ ಪೆಟ್ರೋಲ್ ದರ ಬರೋಬ್ಬರಿ 115.69 ರೂಪಾಯಿಗೆ ಹಾಗೂ ಡೀಸೆಲ್ ದರ 103.82 ರೂಪಾಯಿಗೆ ತಲುಪಿರುವುದು ಗ್ರಾಹಕರ ಬೆನ್ನುಮೂಳೆ ಮುರಿಯುವಂತೆ ಮಾಡಿದೆ.

You cannot copy content of this page

Exit mobile version