ರಾಜ್ಯದಲ್ಲಿ ಗೊಬ್ಬರ ಅಭಾವವಿಲ್ಲ. ಆದರೆ ಕೇಂದ್ರ ಸರಕಾರ ರಾಜ್ಯಕ್ಕೆ ಅಗತ್ಯ ಇರುವಷ್ಟು ಗೊಬ್ಬರ ಪೂರೈಕೆ ಮಾಡುತ್ತಿಲ್ಲ. ಬಿಜೆಪಿ ಸರ್ಕಾರ ಇರುವ ಹರಿಯಾಣ ಹಾಗೂ ಉತ್ತರ ಪ್ರದೇಶದಲ್ಲಿಯೂ ಸಹ ಕೇಂದ್ರ ಸರ್ಕಾರ ಗೊಬ್ಬರ ಪೂರೈಕೆ ಮಾಡಿಲ್ಲ. ಅಲ್ಲಿ ಅವರದ್ದೇ ಬಿಜೆಪಿ ಸರಕಾರವಿದೆ. ಹೀಗಿರುವಾಗ ಪ್ರತಿಭಟನೆ ಮಾಡುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗೊಬ್ಬರ ತಯಾರಿಕೆ ಮಾಡುವುದು ಕೇಂದ್ರದವರು, ಅದನ್ನು ಪೂರೈಕೆ ಮಾಡುವುದೂ ಕೇಂದ್ರ ಸರ್ಕಾರ.. ಇದು ರಾಜ್ಯದ ಬಿಜೆಪಿಯವರಿಗೆ ಗೊತ್ತಿಲ್ಲವೇ? ಆದರೂ ಪ್ರತಿಭಟನೆ ಮಾಡುತ್ತಿದ್ದಾರೆ. ಚಳವಳಿ, ಪ್ರತಿಭಟನೆ ಬಿಟ್ಟು ಎಲ್ಲ ಬಿಜೆಪಿ ಸಂಸದರು ಗೊಬ್ಬರ ತರಿಸಲಿ ಎಂದು ಮುಖ್ಯಮಂತ್ರಿ ಸವಾಲು ಹಾಕಿದರು.
ಕೇಂದ್ರದಲ್ಲಿ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ರೈತರ ಹಿತದೃಷ್ಟಿಯಿಂದ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಿ ಗೊಬ್ಬರ ಕೊಡಿಸಲಿ. ನಿಮ್ಮದು ಬರೀ ನಾಟಕ. ನಿಮ್ಮ ನಾಟಕ ಬಹಳ ವರ್ಷಗಳು ನಡೆಯಲ್ಲ. ನೀವು ಏನೇ ತಿಪ್ಪರಲಾಗ ಹಾಕಿದರೂ 2028ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಸಗೊಬ್ಬರ ಇಲ್ಲ ಎಂದು ಬಿಜೆಪಿಯವರು ಪ್ರತಿಭಟಿಸುತ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗೊಬ್ಬರಕ್ಕಾಗಿ ಬೀದಿಗಿಳಿದ ರೈತರ ಮೇಲೆ ಗೋಲಿಬಾರ್ ಮಾಡಿದ್ದರು. ಇಂತಹ ಅಪ್ಪನ ಮಗನಾದ ವಿಜಯೇಂದ್ರನಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.