ಹೈದರಾಬಾದ್ ಸಂಸದ ಹಾಗೂ ಎಂಐಎಂ ಅಧ್ಯಕ್ಷ ಅಸದುದ್ದೀನ್ ಒವೈಸಿ ಅವರು ಪ್ರಧಾನಿ ಮೋದಿ ನಿಜವಾಗಿಯೂ ವಿಶ್ವಗುರು ಆಗಿದ್ದರೆ, ಪಾಕಿಸ್ತಾನವನ್ನು ಫೈನಾನ್ಶಿಯಲ್ ಆಕ್ಷನ್ ಟಾಸ್ಕ್‌ಫೋರ್ಸ್ (FATF) ವ್ಯಾಪ್ತಿಗೆ ತರಬೇಕು ಎಂದು ಸವಾಲು ಹಾಕಿದ್ದಾರೆ.
ಜಿ7 ದೇಶಗಳು ಮತ್ತು ಜಿಸಿಸಿ (ಗಲ್ಫ್ ಸಹಕಾರ ಮಂಡಳಿ) ಮೇಲೆ ಒತ್ತಡ ಹೇರಿ ಆ ಕೆಲಸವನ್ನು ಪೂರ್ಣಗೊಳಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು ಎಂದು ಒವೈಸಿ ಆಗ್ರಹಿಸಿದರು. ‘ಆಪರೇಷನ್ ಸಿಂಧೂರ್’ ಕುರಿತು ಸೋಮವಾರ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಅವರು ಮಾತನಾಡಿದರು. “‘ಆಪರೇಷನ್ ಸಿಂಧೂರ್’ ಸಮಯದಲ್ಲಿ ನಮ್ಮ ಪೈಲಟ್‌ಗಳ ಮಾತುಗಳನ್ನು ಪಾಕಿಸ್ತಾನ ಹೇಗೆ ಕೇಳಿಸಿಕೊಂಡಿತು? ನಮ್ಮ ಸಂವಹನ ಎನ್‌ಕ್ರಿಪ್ಟ್ ಆಗಿರಲಿಲ್ಲವೇ?” ಎಂದು ಪ್ರಶ್ನಿಸಿದರು.
“ಭಾರತದ 5 ಯುದ್ಧ ವಿಮಾನಗಳು ನಾಶವಾಗಿವೆ ಎಂಬ ಟ್ರಂಪ್ ಹೇಳಿಕೆ ಸುಳ್ಳು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಯನ್ನು ನಾನು ನಂಬುತ್ತೇನೆ. ಹಾಗಾದರೆ, ನಮ್ಮ ಪೈಲಟ್‌ಗಳನ್ನು ಅಭಿನಂದಿಸಬೇಕು ಎಂದು ನಾನು ಆಗ್ರಹಿಸಿದರೆ ಅದನ್ನೂ ಮಾಡುತ್ತಿಲ್ಲ. ಫ್ರಾನ್ಸ್ ಮೂಲ ಕೋಡ್ ನೀಡದ ಕಾರಣ ನಮ್ಮ ವಿಮಾನಗಳಿಗೆ ನಷ್ಟ ಸಂಭವಿಸಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಬೇಕು. ಇನ್ನು ಮುಂದೆ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯನ್ನು ರಾಜಕೀಯ ವಿಷಯವನ್ನಾಗಿ ಮಾಡಬೇಡಿ ಎಂದು ನಾನು ಸರ್ಕಾರವನ್ನು ಕೇಳಿಕೊಳ್ಳುತ್ತೇನೆ” ಎಂದು ಒವೈಸಿ ಹೇಳಿದರು.