Home ದೆಹಲಿ ಸಂಸದರ ಅಮಾನತು ಖಂಡಿಸಿ ಲೋಕಸಭೆಯಲ್ಲಿ ಗದ್ದಲ | ಮೋದಿಯನ್ನು ಸುತ್ತುವರಿದ ಮಹಿಳಾ ಸಂಸದರು; ತನ್ನ ಭಾಷಣವನ್ನು...

ಸಂಸದರ ಅಮಾನತು ಖಂಡಿಸಿ ಲೋಕಸಭೆಯಲ್ಲಿ ಗದ್ದಲ | ಮೋದಿಯನ್ನು ಸುತ್ತುವರಿದ ಮಹಿಳಾ ಸಂಸದರು; ತನ್ನ ಭಾಷಣವನ್ನು ರದ್ದುಗೊಳಿಸಿದ ಪ್ರಧಾನಿ

0

ದೆಹಲಿ: ವಿರೋಧ ಪಕ್ಷದ ಮಹಿಳಾ ಸಂಸದರು ಬುಧವಾರ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆಡಳಿತ ಪಕ್ಷದ ಸಂಸದರ ಆಸನಗಳಿಗೆ ಅಡ್ಡಿಯಾಗಿ ನಿಂತಿದ್ದರಿಂದ ಸದನದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನೆಲೆಸಿತ್ತು.

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಬೇಕಿದ್ದ ಪ್ರಧಾನಿ ಮೋದಿ ಅವರು ತಮ್ಮ ಭಾಷಣವನ್ನು ರದ್ದುಗೊಳಿಸಬೇಕಾಯಿತು. ಮಂಗಳವಾರ 8 ವಿಪಕ್ಷ ಸಂಸದರನ್ನು ಅಮಾನತುಗೊಳಿಸಿರುವುದನ್ನು ಹಾಗೂ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಅಮುದ್ರಿತ ಪುಸ್ತಕದಿಂದ ಚೀನಾಕ್ಕೆ ಸಂಬಂಧಿಸಿದ ಕೆಲವು ಅಂಶಗಳನ್ನು ಉಲ್ಲೇಖಿಸಲು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಅವಕಾಶ ನೀಡದಿರುವುದನ್ನು ವಿರೋಧಿಸಿ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಸಂಸದರು ಬುಧವಾರ ಲೋಕಸಭೆಯಲ್ಲಿ ಗದ್ದಲ ಸೃಷ್ಟಿಸಿದರು.

ಮುಂದೂಡಿಕೆಯ ನಂತರ ಸಂಜೆ 5 ಗಂಟೆಗೆ ಸದನದ ಕಲಾಪಗಳು ಮತ್ತೆ ಪ್ರಾರಂಭವಾದಾಗ, ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ ಎಂದು ಭಾವಿಸಲಾಗಿತ್ತು. ಈ ಸಮಯದಲ್ಲಿ ಅನಿರೀಕ್ಷಿತವಾಗಿ ವರ್ಷಾ ಗಾಯಕ್ವಾಡ್, ಜ್ಯೋತಿಮಣಿ ಸೇರಿದಂತೆ ವಿಪಕ್ಷದ ಕೆಲವು ಮಹಿಳಾ ಸಂಸದರು ಮೋದಿ ಹಾಗೂ ಆಡಳಿತ ಪಕ್ಷದ ಸಂಸದರ ಆಸನಗಳನ್ನು ಅಡ್ಡಹಾಕಿದರು. ‘ಯಾವುದು ಸರಿಯೋ ಅದನ್ನೇ ಮಾಡಿ’ (Do the right thing) ಎಂದು ಬರೆದಿದ್ದ ದೊಡ್ಡ ಬ್ಯಾನರ್ ಹಿಡಿದು ಅವರು ಪ್ರತಿಭಟಿಸಿದರು. 8 ವಿಪಕ್ಷ ಸಂಸದರ ಅಮಾನತನ್ನು ಅವರು ತೀವ್ರವಾಗಿ ಖಂಡಿಸಿದರು. ಇಷ್ಟರಲ್ಲಿ ಸ್ಪೀಕರ್ ಸ್ಥಾನದಲ್ಲಿದ್ದ ಸಂಧ್ಯಾ ರೇ ಸದನವನ್ನು ಮುಂದೂಡಿದರು.

ಇದೇ ವೇಳೆ, ಮಹಿಳಾ ಸಂಸದರು ಪ್ರಧಾನಿ ಮೋದಿ ಮೇಲೆ ದಾಳಿ ಮಾಡುತ್ತಿದ್ದರು ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ನಂತರ ಪ್ರತಿಕ್ರಿಯಿಸಿರುವುದು ಗಮನಾರ್ಹ. “ನಡೆದ ಘಟನೆ ತುಂಬಾ ಭಯಾನಕವಾಗಿತ್ತು. ಇದು ಕಾಂಗ್ರೆಸ್ಸಿನ ಹತಾಶೆಯ ಪರಾಕಾಷ್ಠೆ. ಮೊದಲೇ ಹಾಕಿಕೊಂಡ ಯೋಜನೆಯಂತೆ ಮಹಿಳಾ ಸಂಸದರು ಪ್ರಧಾನಿ ಮೋದಿಯವರ ಕುರ್ಚಿಯನ್ನು ಸುತ್ತುವರಿದಿದ್ದರು. ಕಿರಣ್ ರಿಜಿಜು ತಕ್ಷಣ ಯೋಚಿಸಿದ್ದರಿಂದ ಪರಿಸ್ಥಿತಿ ಹತೋಟಿಗೆ ಬಂತು,” ಎಂದು ಮನೋಜ್ ತಿವಾರಿ ಹೇಳಿದರು. ಪ್ರಧಾನಿ ಮೋದಿ ಭಾಷಣ ರದ್ದಾಗಿರುವುದರಿಂದ ಗುರುವಾರ ಇದರ ಮೇಲೆ ಚರ್ಚೆ ಮುಂದುವರಿಯಲಿದೆ. ವಂದನಾ ನಿರ್ಣಯಕ್ಕೆ ಲೋಕಸಭೆಯ ಅನುಮೋದನೆ ಇನ್ನೂ ದೊರೆಯಬೇಕಿದೆ.

ದುಬೆ ಹೇಳಿಕೆಗಳ ಮೇಲೆ ಕೋಲಾಹಲ

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಬುಧವಾರ ಲೋಕಸಭೆಯಲ್ಲಿ ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ ನೀಡಿದ ಅನುಚಿತ ಹೇಳಿಕೆಗಳ ಬಗ್ಗೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಮಾಜಿ ಪ್ರಧಾನಿಗಳಾದ ನೆಹರು ಮತ್ತು ಇಂದಿರಾ ಗಾಂಧಿ ಅವರ ಬಗ್ಗೆ ಸದನದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ದುಬೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿಪಕ್ಷ ಸಂಸದರು ಆಗ್ರಹಿಸಿದರು. ವಿಪಕ್ಷ ಸಂಸದರು ತಮ್ಮ ದ್ವೂರನ್ನು ಲಿಖಿತವಾಗಿ ನೀಡಬೇಕು, ನಂತರ ಅದನ್ನು ಪರಿಶೀಲಿಸುವುದಾಗಿ ಸ್ಪೀಕರ್ ಓಂ ಬಿರ್ಲಾ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಪಕ್ಷ ಸದಸ್ಯರ ಪ್ರತಿಭಟನೆಯ ನಡುವೆ ಸದನವನ್ನು ನಾಳೆಗೆ ಮುಂದೂಡಲಾಯಿತು.

ಹಲೋ ಮಿತ್ರದ್ರೋಹಿ… ಹಾಯ್ ದೇಶದ್ರೋಹಿ: ಸಂಸತ್ ಆವರಣದಲ್ಲಿ ರಾಹುಲ್, ಬಿಜೆಪಿ ಸಂಸದರ ಜಟಾಪಟಿ

ಲೋಕಸಭೆಯ ಆವರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮಾಜಿ ಸಂಸದ, ಕೇಂದ್ರ ಸಚಿವ ರವನೀತ್ ಬಿಟ್ಟು ಅವರ ನಡುವೆ ವಾಕ್ಸಮರ ನಡೆಯಿತು. ರಾಹುಲ್ ಅವರನ್ನು ‘ಮಿತ್ರದ್ರೋಹಿ’ ಎಂದು ಕರೆದರೆ, ಅದಕ್ಕೆ ಪ್ರತಿಯಾಗಿ ಬಿಟ್ಟು ರಾಹುಲ್ ಅವರನ್ನು ‘ದೇಶದ್ರೋಹಿ’ ಎಂದು ಜರಿದರು. ಸಂಸತ್ತಿನ ಮಕರ ದ್ವಾರದ ಬಳಿ ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದೆ.

ಕಾಂಗ್ರೆಸ್ ಸಂಸದರ ಅಮಾನತನ್ನು ವಿರೋಧಿಸಿ ರಾಹುಲ್, ಅಮಾನತುಗೊಂಡ 8 ಸಂಸದರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದರು. ಅದೇ ಸಮಯದಲ್ಲಿ ಆ ಕಡೆಯಿಂದ ಹೋಗುತ್ತಿದ್ದ ಬಿಜೆಪಿ ಸಂಸದ ಬಿಟ್ಟು, “ಅವರು (ಅಮಾನತುಗೊಂಡ ಸಂಸದರು) ಏನೋ ಯುದ್ಧ ಗೆದ್ದವರಂತೆ ಇಲ್ಲಿ ಕುಳಿತಿದ್ದಾರೆ,” ಎಂದು ವ್ಯಂಗ್ಯವಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, “ವಿಷಯವೇನೆಂದರೆ ಇಲ್ಲಿ ಒಬ್ಬ ದ್ರೋಹಿ ನಡೆದುಕೊಂಡು ಹೋಗುತ್ತಿದ್ದಾನೆ. ಅವನ ಮುಖ ನೋಡಿ.. ಹೇಗೆ ನೋಡುತ್ತಿದ್ದಾನೆ,” ಎಂದು ಹೇಳಿದ್ದಲ್ಲದೆ, ಬಿಟ್ಟು ಅವರೊಂದಿಗೆ ಹಸ್ತಲಾಘವ ಮಾಡಲು ಕೈ ಚಾಚಿ, “ಹಲೋ ಸಹೋದರ.. ನನ್ನ ಮಿತ್ರದ್ರೋಹಿ.. ಬೇಸರ ಮಾಡಿಕೊಳ್ಳಬೇಡ.. ನೀನು ಶೀಘ್ರದಲ್ಲೇ ವಾಪಸ್ (ಕಾಂಗ್ರೆಸ್‌ಗೆ) ಬರುತ್ತೀಯಾ ಬಿಡು,” ಎಂದು ಹೇಳಿದರು. ಆದರೆ ಅವರೊಂದಿಗೆ ಕೈ ಕುಲುಕಲು ನಿರಾಕರಿಸಿದ ಬಿಟ್ಟು, ರಾಹುಲ್ ಅವರನ್ನೇ ‘ದೇಶದ್ರೋಹಿ’ ಎಂದು ದೂಷಿಸಿದರು.

You cannot copy content of this page

Exit mobile version