Home ದೆಹಲಿ E 20 ಪೆಟ್ರೋಲ್‌ ವಿವಾದ ಗಡ್ಕರಿ ವಿರುದ್ಧದ AI ಪೋಸ್ಟ್‌ ತೆಗೆಯಿರಿ – ಬಾಂಬೆ ಹೈಕೋರ್ಟ್

E 20 ಪೆಟ್ರೋಲ್‌ ವಿವಾದ ಗಡ್ಕರಿ ವಿರುದ್ಧದ AI ಪೋಸ್ಟ್‌ ತೆಗೆಯಿರಿ – ಬಾಂಬೆ ಹೈಕೋರ್ಟ್

ಮುಂಬೈ: ಎಥನಾಲ್ ಮಿಶ್ರಿತ ಪೆಟ್ರೋಲ್ (E20) ನೀತಿಗೆ ಸಂಬಂಧಿಸಿದಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿರುವ “ಅಸಭ್ಯ, ನಿಂದನಾತ್ಮಕ, ಮತ್ತು AI ತಂತ್ರಜ್ಞಾನದಿಂದ ಸೃಷ್ಟಿಸಲಾದ (Deepfake)” ಪೋಸ್ಟ್‌ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಬಾಂಬೆ ಹೈಕೋರ್ಟ್ ಪ್ರಮುಖ ಜಾಲತಾಣಗಳಿಗೆ ಆಜ್ಞಾಪಿಸಿದೆ.

ಕೋರ್ಟ್‌ ಹೇಳಿದ್ದೇನು?

ಸಚಿವ ಗಡ್ಕರಿ ಅವರು ಸಲ್ಲಿಸಿದ್ದ ಸಿವಿಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರೀಫ್ ಡಾಕ್ಟರ್ ಅವರಿದ್ದ ಪೀಠವು, ಈ ಪೋಸ್ಟ್‌ಗಳು ಪ್ರಥಮ ದೃಷ್ಟಿಯಲ್ಲೇ (Prima facie) ತೀವ್ರ ಮಾನಹಾನಿಕರವಾಗಿವೆ ಎಂದು ಅಭಿಪ್ರಾಯಪಟ್ಟು ಈ ನಿರ್ದೇಶನ ನೀಡಿದೆ.

ಕೋರ್ಟ್ ಮೆಟ್ಟಿಲೇರದೆ ಪೋಸ್ಟ್ ತೆರವುಗೊಳಿಸುವ ವ್ಯವಸ್ಥೆಯಿಲ್ವೇ? – ಜಾಲತಾಣಗಳಿಗೆ ಹೈಕೋರ್ಟ್ ಪ್ರಶ್ನೆ
ಮೆಟಾ (Meta Platforms), ಎಕ್ಸ್ (X Corp) ಮತ್ತು ಗೂಗಲ್ (Google LLC) ನಂತಹ ಪ್ರಮುಖ ಸಾಮಾಜಿಕ ಜಾಲತಾಣ ಸಂಸ್ಥೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, “ಯಾವುದೇ ವ್ಯಕ್ತಿ ನ್ಯಾಯಾಲಯದ ಬಾಗಿಲು ತಟ್ಟುವ ಅಗತ್ಯವಿಲ್ಲದೇ ಇಂತಹ ನಿಂದನಾತ್ಮಕ ಪೋಸ್ಟ್‌ಗಳನ್ನು ತಾನಾಗಿಯೇ ಗುರುತಿಸಿ ತೆರವುಗೊಳಿಸುವಂತಹ ಸೂಕ್ತ ತಾಂತ್ರಿಕ ವ್ಯವಸ್ಥೆ (Mechanism) ಜಾಲತಾಣಗಳಲ್ಲಿ ಏಕಿಲ್ಲ?” ಎಂದು ಪ್ರಶ್ನಿಸಿತು.

“ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರುವ ಇಂತಹ ಪೋಸ್ಟ್‌ಗಳು ಅಸಭ್ಯತೆಯಿಂದ ಕೂಡಿದ್ದು, ಯುವಜನತೆ ಸೇರಿದಂತೆ ಪ್ರತಿಯೊಬ್ಬರಿಗೂ ಸಿಗುವಂತಿರುತ್ತವೆ. ಇಂತಹ ನಿಂದನಾತ್ಮಕ ಪೋಸ್ಟ್‌ಗಳಿಗೆ ಜಾಲತಾಣಗಳಲ್ಲಿ ಜಾಗವಿರಬಾರದು. ಕಂಪನಿಗಳು ಸ್ವಯಂಪ್ರೇರಿತವಾಗಿ ಇವುಗಳನ್ನು ಡಿಲೀಟ್ ಮಾಡಬೇಕು” ಎಂದು ಹೈಕೋರ್ಟ್ ಆಕ್ರೋಶ ಹೊರಹಾಕಿತು. ಅಲ್ಲದೆ, ಭವಿಷ್ಯದಲ್ಲೂ ಸಚಿವರಿಗೆ ಸಂಬಂಧಿಸಿದಂತೆ ಇಂತಹ ಯಾವುದೇ ಪೋಸ್ಟ್‌ಗಳು ಕಂಡುಬಂದಲ್ಲಿ ತಕ್ಷಣವೇ ಅವುಗಳನ್ನು ತೆರವುಗೊಳಿಸಬೇಕು ಎಂದು ಸ್ಪಷ್ಟಪಡಿಸಿತು.

ಗಡ್ಕರಿ ಸಲ್ಲಿಸಿದ್ದ ಅರ್ಜಿಯಲ್ಲಿ ಏನಿದೆ?
ಸರ್ಕಾರ ಜಾರಿಗೆ ತಂದಿರುವ 20% ಎಥನಾಲ್ ಮಿಶ್ರಿತ ಪೆಟ್ರೋಲ್ (E20) ನೀತಿಯಿಂದ ನಿತಿನ್ ಗಡ್ಕರಿ ಹಾಗೂ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ ಆರ್ಥಿಕ ಲಾಭವಾಗುತ್ತಿದೆ ಎಂದು AI ಹಾಗೂ ಡೀಪ್‌ಫೇಕ್ ವಿಡಿಯೋಗಳ ಮೂಲಕ ಸುಳ್ಳು ಸುದ್ದಿ ಬಿತ್ತರಿಸಲಾಗಿತ್ತು.

ಈ ಪೋಸ್ಟ್‌ಗಳಿಂದ ತಮ್ಮ ವ್ಯಕ್ತಿತ್ವಕ್ಕೆ ಹಾಗೂ ಗೌರವಕ್ಕೆ ಗಂಭೀರ ಧಕ್ಕೆಯುಂಟಾಗಿದೆ ಎಂದು ಆರೋಪಿಸಿರುವ ಗಡ್ಕರಿ, ₹11 ಕೋಟಿ ನಷ್ಟಪರಿಹಾರ ನೀಡುವಂತೆ ಅರ್ಜಿಯಲ್ಲಿ ಕೋರಿದ್ದಾರೆ. ಎಥನಾಲ್ ಮಿಶ್ರಣ ಯೋಜನೆಯು ಸಂಪೂರ್ಣವಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆಡಳಿತಕ್ಕೆ ಒಳಪಟ್ಟಿದ್ದು, ತಮ್ಮ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

ಅರ್ಜಿಯ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿರುವ ಹೈಕೋರ್ಟ್, ಈ ಕುರಿತು ಪ್ರತ್ಯುತ್ತರ ನೀಡುವಂತೆ ಪ್ರತಿವಾದಿಗಳಾದ ಮೆಟಾ, ಎಕ್ಸ್, ಗೂಗಲ್ ಮತ್ತು ಸಂಬಂಧಿತ ಕಂಪನಿಗಳಿಗೆ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿದೆ.

You cannot copy content of this page

Exit mobile version