ನವದೆಹಲಿ : ವಿದ್ಯಾರ್ಥಿ ಪ್ರತಿಭಟನಾಕಾರರನ್ನು (Student Protest) ಹತೋಟಿಗೆ ತರುವಾಗ ಕಾನೂನು ಜಾರಿ ಸಂಸ್ಥೆಗಳು ಮತ್ತು ಪೊಲೀಸರು (Police) ತೀವ್ರ ಸಂಯಮದಿಂದ ನಡೆದುಕೊಳ್ಳಬೇಕು, ಅಧಿಕಾರಿಗಳು ಹಿಂಸಾತ್ಮಕ ಹಾದಿ ಹಿಡಿದರೆ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುತ್ತದೆ ಎಂದು ಸುಪ್ರೀಂ ಕೋರ್ಟ್ (Supreme Court) ಬುಧವಾರ ಮಹತ್ವದ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಿಜಿಪಿ ವಿರುದ್ಧ ಸಲ್ಲಿಕೆ ಆಗಿದೆ ಅರ್ಜಿ
ಇತ್ತೀಚೆಗೆ ದೆಹಲಿ ಹಾಗೂ ದೇಶದ ವಿವಿಧ ಭಾಗಗಳಲ್ಲಿ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆ ಮತ್ತು ಕಲ್ಲುತೂರಾಟದ ಹಿಂಸಾಚಾರದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜಿಪಿ) ಪಾತ್ರವಿದೆ ಎಂದು ಆರೋಪಿಸಿ ಅವರ ವಿರುದ್ಧ ಕ್ರಮಕ್ಕೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಮಾತುಗಳನ್ನು ಹೇಳಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ನೇತೃತ್ವದ ಪೀಠವು, ವಿದ್ಯಾರ್ಥಿ ಪ್ರತಿಭಟನೆಯ ಹಿಂಸಾಚಾರಕ್ಕೆ ಸಂಬಂಧಿಸಿದ ಇತರ ಬಾಕಿ ಇರುವ ಅರ್ಜಿಗಳ ಜೊತೆಗೆ ಈ ಅರ್ಜಿಯನ್ನೂ ಜೋಡಿಸಿ, ಎಲ್ಲವನ್ನೂ ಒಟ್ಟಿಗೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಮೆರವಣಿಗೆಗಳು ನಡೆದಾಗ ಭದ್ರತಾ ಪಡೆಗಳು ಅತ್ಯಂತ ಎಚ್ಚರಿಕೆಯಿಂದ ಮತ್ತು ತಾಳ್ಮೆಯಿಂದ ವ್ಯವಹರಿಸಬೇಕು ಎಂದು ಸಿಜೆಐ ಒತ್ತಿಹೇಳಿದರು. ಯುವಕರು ಹಿಂಸಾಚಾರಕ್ಕೆ ಇಳಿಯದಂತೆ ನೋಡಿಕೊಳ್ಳಲು ಅಧಿಕಾರಿಗಳು ಮೃದು ಧೋರಣೆ ತಳೆಯಬೇಕು. ಸರ್ಕಾರದ ಕಡೆಯಿಂದ ಸಾರಾಸಗಟು ಬಲಪ್ರಯೋಗ ಅಥವಾ ಆಕ್ರಮಣಕಾರಿ ನಡವಳಿಕೆ ತೋರಿದರೆ, ಅದು ಪರಿಸ್ಥಿತಿಯನ್ನು ಮತ್ತಷ್ಟು ಭೀಕರಗೊಳಿಸುತ್ತದೆ. ಯುವಜನರು ಏನು ಹೇಳುತ್ತಿದ್ದಾರೆ, ಯಾಕೆ ಆಕ್ರೋಶಗೊಂಡಿದ್ದಾರೆ ಎಂಬುದನ್ನು ಆಲಿಸುವುದೇ ಅತ್ಯಂತ ದೊಡ್ಡ ಶಕ್ತಿ. ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಸಲಹೆಯ ಅಗತ್ಯವಿದೆಯೇ ಹೊರತು ಹಿಂಸೆಯಲ್ಲ ಎಂದು ಪೀಠ ಎಚ್ಚರಿಸಿದೆ.
ಇದೇ ವೇಳೆ, ನ್ಯಾಯಾಲಯದ ಪ್ರಕ್ರಿಯೆಗಳು ಕಾಯುತ್ತಿರುವಾಗ ಪ್ರಸ್ತುತ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಕಾನೂನು ಜಾರಿ ಸಂಸ್ಥೆಗಳ ವಿವೇಚನೆಗೆ ಬಿಡುವುದು ಸೂಕ್ತ ಎಂದು ನ್ಯಾಯಪೀಠ ಹೇಳಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ನಿಲುವನ್ನು ಸಹ ಪರಿಶೀಲಿಸಬೇಕಿದ್ದು, ಮುಂದಿನ ದಿನಾಂಕದಂದು ವಿವರವಾದ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ.
