ದೆಹಲಿ: ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಮಂಗಳವಾರ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಸೇನೆಯ ಮಾಜಿ ಮುಖ್ಯಸ್ಥ ಜನರಲ್ ನರವಣೆ ಅವರ ಪುಸ್ತಕದಲ್ಲಿನ ಚೀನಾ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸಿದರು. ಇದರಿಂದಾಗಿ ಲೋಕಸಭೆಯಲ್ಲಿ ತೀವ್ರ ಗದ್ದಲ ಉಂಟಾಗಿ, ಸದನವನ್ನು ಹಲವು ಬಾರಿ ಮುಂದೂಡಲಾಯಿತು.
ಸದನದಲ್ಲಿ ಗದ್ದಲ ಸೃಷ್ಟಿಸಿದ ವಿಪಕ್ಷ ಕಾಂಗ್ರೆಸ್ಸಿನ 8 ಮಂದಿ ಸಂಸದರನ್ನು ಬಜೆಟ್ ಅಧಿವೇಶನ ಮುಗಿಯುವವರೆಗೆ ಸ್ಪೀಕರ್ ಅಮಾನತು ಮಾಡಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದ ವಿಪಕ್ಷ ಸಂಸದರು ಸ್ಪೀಕರ್ ಅವರತ್ತ ಕಾಗದಗಳನ್ನು ಎಸೆದಿದ್ದು ಸದನದಲ್ಲಿನ ರಂಪಾಟಕ್ಕೆ ಕಾರಣವಾಯಿತು. ಇದರಿಂದಾಗಿ ಸದನವನ್ನು ಮತ್ತೆ ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು. ಸದನವು ಮತ್ತೆ ಸೇರಿದಾಗ, ನಾನು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದರು. ಇದಕ್ಕೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದಾಗಿ ಸದನದಲ್ಲಿ ಮತ್ತೆ ಗದ್ದಲ ಶುರುವಾಯಿತು.
