Home ದೆಹಲಿ ಸೋಷಿಯಲ್ ಮೀಡಿಯಾ ಮೇಲೆ ಕೇಂದ್ರದ ಕಣ್ಣು: ಸರ್ಕಾರದ ವಿರುದ್ಧ ಪೋಸ್ಟ್ ಹಾಕಿದರೆ ಬಳಕೆದಾರರಿಗೇ ನೇರ ನೋಟಿಸ್!

ಸೋಷಿಯಲ್ ಮೀಡಿಯಾ ಮೇಲೆ ಕೇಂದ್ರದ ಕಣ್ಣು: ಸರ್ಕಾರದ ವಿರುದ್ಧ ಪೋಸ್ಟ್ ಹಾಕಿದರೆ ಬಳಕೆದಾರರಿಗೇ ನೇರ ನೋಟಿಸ್!

0

ದೆಹಲಿ: ಕೇಂದ್ರದ ಮೋದಿ ಸರ್ಕಾರವು ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಹೇರಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಎಕ್ಸ್ (X), ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಂತಹ ವೇದಿಕೆಗಳಲ್ಲಿ ಸರ್ಕಾರದ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಾಕುವ ಅಥವಾ ಅಂತಹ ಪೋಸ್ಟ್‌ಗಳನ್ನು ಶೇರ್ ಮಾಡುವ ಬಳಕೆದಾರರಿಗೆ ಇನ್ಫಾರ್ಮೇಷನ್ ಆಂಡ್ ಬ್ರಾಡ್‌ಕಾಸ್ಟಿಂಗ್ ಸಚಿವಾಲಯದಿಂದ ನೇರ ನೋಟಿಸ್ ನೀಡುವ ಹೊಸ ನಿಯಮಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.

ಐಟಿ ನಿಯಮಗಳು-2021ಕ್ಕೆ ಕೆಲವು ಮಹತ್ವದ ತಿದ್ದುಪಡಿಗಳನ್ನು ಸೂಚಿಸಿ ಸೋಮವಾರ ಕರಡು ಪ್ರತಿಯನ್ನು ಬಿಡುಗಡೆ ಮಾಡಲಾಗಿದ್ದು, ಆನ್‌ಲೈನ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಸಾಮಾನ್ಯ ಬಳಕೆದಾರರು, ಕಂಟೆಂಟ್ ಕ್ರಿಯೇಟರ್‌ಗಳು ಮತ್ತು ಇನ್‌ಫ್ಲುಯೆನ್ಸರ್‌ಗಳನ್ನು ಇನ್ನು ಮುಂದೆ ‘ಸುದ್ದಿ ಪ್ರಕಾಶಕರು’ (News Publishers) ಎಂದೇ ಪರಿಗಣಿಸಲಾಗುತ್ತದೆ. ಏಪ್ರಿಲ್ 14ರೊಳಗೆ ಈ ಕುರಿತು ಸಾರ್ವಜನಿಕರ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ.

ಈವರೆಗಿನ ನಿಯಮಗಳ ಪ್ರಕಾರ, ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ಆಕ್ಷೇಪಾರ್ಹ ಪೋಸ್ಟ್ ಪ್ರಕಟವಾದರೆ ಅದನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರವು ಆಯಾ ಸಂಸ್ಥೆಗಳಿಗೆ (ಉದಾಹರಣೆಗೆ ಮೆಟಾ ಅಥವಾ ಎಕ್ಸ್) ನೋಟಿಸ್ ನೀಡುತ್ತಿತ್ತು. ಆದರೆ, ಹೊಸ ತಿದ್ದುಪಡಿ ಜಾರಿಗೆ ಬಂದರೆ, ಪೋಸ್ಟ್ ಹಾಕಿದ ಅಥವಾ ಶೇರ್ ಮಾಡಿದ ಬಳಕೆದಾರರಿಗೇ ನೇರವಾಗಿ ನೋಟಿಸ್ ತಲುಪಲಿದೆ. ಅಷ್ಟೇ ಅಲ್ಲದೆ, ಸರ್ಕಾರದ ಸೂಚನೆಗಳನ್ನು ಪಾಲಿಸದ ಸಾಮಾಜಿಕ ಜಾಲತಾಣ ಸಂಸ್ಥೆಗಳು ಕಾನೂನಾತ್ಮಕವಾಗಿ ತಮಗೆ ಇರುವ ‘ರಕ್ಷಣೆ’ (Safe Harbour) ಸೌಲಭ್ಯವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ದೇಶದ ಸಾರ್ವಭೌಮತೆ, ಭದ್ರತೆ ಮತ್ತು ನಕಲಿ ಸುದ್ದಿಗಳನ್ನು (Fake News) ತಡೆಗಟ್ಟುವ ಉದ್ದೇಶದಿಂದ ಈ ಬದಲಾವಣೆಗಳನ್ನು ತರಲಾಗುತ್ತಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಈ ನಿಯಮಗಳು ಮುಖ್ಯವಾಗಿ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ವಿಷಯಗಳಿಗೆ ಅನ್ವಯವಾಗಲಿವೆ ಎಂದು ಕರಡು ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಈ ಕ್ರಮವನ್ನು ಇಂಟರ್ನೆಟ್ ಫ್ರೀಡಂ ಫೌಂಡೇಶನ್ (IFF) ‘ಡಿಜಿಟಲ್ ನಿರಂಕುಶಾಧಿಕಾರ’ ಎಂದು ಬಣ್ಣಿಸಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮತ್ತು ಸಂವಿಧಾನ ವಿರೋಧಿ ಸೆನ್ಸಾರ್‌ಶಿಪ್‌ಗೆ ದಾರಿ ಮಾಡಿಕೊಡುವ ಪ್ರಯತ್ನವಾಗಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಸರ್ಕಾರದ ನೀತಿಗಳನ್ನು ವಿರೋಧಿಸುವ ನಾಗರಿಕರು, ಕಾರ್ಯಕರ್ತರು ಮತ್ತು ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಅಡಗಿಸಲು ಕೇಂದ್ರವು ಈ ದಾರಿಯನ್ನು ಆರಿಸಿಕೊಂಡಿದೆ ಎಂದು ಪ್ರತಿಪಕ್ಷಗಳು ಕಿಡಿಕಾರಿವೆ.

You cannot copy content of this page

Exit mobile version