Home ದೆಹಲಿ ಎಫ್‌ಸಿಆರ್‌ಎ ತಿದ್ದುಪಡಿ ಹಿಂಪಡೆಯುವಂತೆ ಅಮಿತ್ ಶಾಗೆ ಕ್ಯಾಥೋಲಿಕ್ ಬಿಷಪ್‌ ಒಕ್ಕೂಟ ಮನವಿ

ಎಫ್‌ಸಿಆರ್‌ಎ ತಿದ್ದುಪಡಿ ಹಿಂಪಡೆಯುವಂತೆ ಅಮಿತ್ ಶಾಗೆ ಕ್ಯಾಥೋಲಿಕ್ ಬಿಷಪ್‌ ಒಕ್ಕೂಟ ಮನವಿ

0

ದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ತಿದ್ದುಪಡಿ ಮಸೂದೆಯು ಅಲ್ಪಸಂಖ್ಯಾತ ಸಂಸ್ಥೆಗಳ ಸ್ವಾಯತ್ತತೆಯನ್ನು ಧಕ್ಕೆಗೊಳಿಸುವಂತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಭಾರತೀಯ ಕ್ಯಾಥೋಲಿಕ್ ಬಿಷಪ್‌ಗಳ ಒಕ್ಕೂಟ (CBCI), ಈ ಮಸೂದೆಯನ್ನು ಸಮಗ್ರ ಚರ್ಚೆಗಾಗಿ ಸಂಸದೀಯ ಸಮಿತಿಗೆ ಒಪ್ಪಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮಂಗಳವಾರ ಮನವಿ ಮಾಡಿದೆ.

ಈ ಪ್ರಸ್ತಾವಿತ ಮಸೂದೆಯು ವಿದೇಶಿ ದೇಣಿಗೆ ಪಡೆಯುವ ಸಂಸ್ಥೆಗಳ ಪರವಾನಗಿ ರದ್ದಾದರೆ ಅಥವಾ ಅಮಾನತುಗೊಂಡರೆ, ಆ ಹಣದಿಂದ ನಿರ್ಮಿಸಲಾದ ಆಸ್ತಿಗಳನ್ನು ಸರ್ಕಾರ ವಶಪಡಿಸಿಕೊಳ್ಳಲು ಅವಕಾಶ ನೀಡುತ್ತದೆ. ಈ ನಿಬಂಧನೆಯು ಸಂವಿಧಾನದ 300(A) ವಿಧಿಯಡಿ ನೀಡಲಾದ ಆಸ್ತಿ ಹಕ್ಕಿನ ಉಲ್ಲಂಘನೆಯಾಗಿದೆ ಮತ್ತು ಆಡಳಿತಾತ್ಮಕ ಲೋಪಗಳಿಗಾಗಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತಹ ಕಠಿಣ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆರ್ಚ್‌ಬಿಷಪ್ ಅನಿಲ್ ಜೆ.ಟಿ. ಕೌಟೊ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸೇವೆ ಸಲ್ಲಿಸುತ್ತಿರುವ ಶಾಲೆಗಳು, ಆಸ್ಪತ್ರೆಗಳು ಮತ್ತು ಸಾಮಾಜಿಕ ಸಂಸ್ಥೆಗಳ ಆಂತರಿಕ ನಿರ್ವಹಣೆಯಲ್ಲಿ ಸರ್ಕಾರದ ಅತಿಯಾದ ಹಸ್ತಕ್ಷೇಪವು ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಒಕ್ಕೂಟ ಎಚ್ಚರಿಸಿದೆ. ಆದ್ದರಿಂದ, ಪಾರದರ್ಶಕತೆ ಮತ್ತು ನಂಬಿಕೆಯ ಆಧಾರದ ಮೇಲೆ ನಿಯಂತ್ರಣ ವ್ಯವಸ್ಥೆ ರೂಪಿಸಬೇಕು ಹಾಗೂ ಈ ಕುರಿತು ನ್ಯಾಯಾಂಗ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.

You cannot copy content of this page

Exit mobile version