Wednesday, August 14, 2024

ಸತ್ಯ | ನ್ಯಾಯ |ಧರ್ಮ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಕೂರು ಆನಂದ ಇನ್ನಿಲ್ಲ

ಕೋಲಾರ: ದಲಿತ-ಬಂಡಾಯ ಕವಿ, ಸಂಶೋಧಕ, ವಿಮರ್ಶಕ, ಅನುವಾದಕರಾಗಿದ್ದ ಲಕ್ಕೂರು ಆನಂದ ಅವರು ಮೇ 20ರಂದು ಕಲಬುರಗಿಯಲ್ಲಿ ನಿಧನ ಹೊಂದಿದ್ದಾರೆ, ಕಲಬುರಗಿಯ ಕೇಂದ್ರಿಯ ವಿವಿಯಲ್ಲಿ ಅವರು ಶಂಶೋಧನಾರ್ಥಿಯಾಗಿದ್ದರು.

44ರ ಹರೆಯದ ಲಕ್ಕೂರು ಸಿ. ಆನಂದ ಅವರು ಮೂಲತಃ ಕೋಲಾರ ಜಿಲ್ಲೆಯ ಲಕ್ಕೂರಿನವರು. ದಲಿತ- ಬಂಡಾಯ ಕಾವ್ಯ ಮಾರ್ಗದ ಮೂರನೇ ತಲೆಮಾರಿನವರು. ಮಾತೃಭಾಷೆ ತೆಲುಗು ಆಗಿದ್ದರೂ ಕನ್ನಡದಲ್ಲಿ ಸಮೃದ್ಧಿಯಾಗಿ ಕಾವ್ಯ ಕೃಷಿ ಮತ್ತು ಅನುವಾದ ಸಾಹಿತ್ಯದ ರಚನೆಯಲ್ಲಿ ತೊಡಗಿಕೊಂಡಿದ್ದರು.  ಅವರು ಕೆಲಕಾಲ  ಕೆಂಗೇರಿ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು.

ಇದುವರೆಗೆ ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಹಾಗೂ ಒಂದು ಸಂಶೋಧನಾ ಗ್ರಂಥವನ್ನು ಆನಂದ್‌ ಹೊರತಂದಿದ್ದಾರೆ. ಮಾತಂಗ ಮಾದಿಗರ ಸಂಸ್ಕೃತಿಯ ಬಗ್ಗೆ ಆನಂದ ಅವರು ಆಳವಾದ ಅಧ್ಯಯನ ನಡೆಸಿದ್ದಾರೆ. ಇತ್ತೀಚೆಗೆ ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದವಾದ ರಾಣಿ ಶಿವ ಶಂಕರ ಶರ್ಮರ ‘ಕೊನೆಯ ಬ್ರಾಹ್ಮಣ’ ಕೃತಿ ಇದೀಗ ಅಭಿನವ ಪ್ರಕಾಶನದಿಂದ ಕನ್ನಡದಲ್ಲಿ ಪ್ರಕಟವಾಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ, ಆಂಧ್ರದ ಶ್ರೀ ಶ್ರೀ ಕಾವ್ಯ, ದೆಹಲಿಯ ದಲಿತ ಸಾಹಿತ್ಯ ಪರಿಷತ್ತು ಪ್ರಶಸ್ತಿ, ದು ನಿಂ ಬೆಳಗಲಿ ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ, ಡಾ ತಿಪ್ಪೇರುದ್ರ ಸ್ವಾಮಿ ಪ್ರಶಸ್ತಿ ಲಭಿಸಿವೆ. ತಮಗೆ ಬಂದ ಪ್ರಶಸ್ತಿಗಳನ್ನು ಅವರು, ‘ರಾಜ್ಯದ ಎಲ್ಲಾ ದಮನಿತ ಸಮುದಾಯಗಳಿಗೆ’ ಅರ್ಪಿಸಿದ್ದಾರೆ.

ಊರಿಂದ ಊರಿಗೆ, ಇಪ್ಪತ್ತರ ಕಲ್ಲಿನ ಮೇಲೆ, ಬಟವಾಡೆಯಾಗದ ರಸೀತಿ, ಇತಿ ನಿನ್ನ ವಿಧೇಯನು, ಉರಿವ ಏಕಾಂತ ದೀಪ ಇವರ ಕವನ ಸಂಕಲನಗಳು. ಸ್ಮೃತಿ ಕಿಣಾನ್ತಂ, ಕೊನೆ ಬ್ರಾಹ್ಮಣ, ಆಕಾಶ ದೇವರ, ನಗ್ನ ಮುನಿಯ ಸಮಗ್ರ ಕಥೆಗಳು, ಅರುದ್ರ ಇವರ ಅನುವಾದಿತ ಕೃತಿಗಳಾಗಿವೆ.

ಆನಂದ ಅವರ ತಾಯಿ, ತಂಗಿ ಮತ್ತು ತಮ್ಮ ಮಾಲೂರಿನ ತಾಲೂಕಿನ ಲಕ್ಕೂರಿನಲ್ಲಿ ನೆಲೆಸಿದ್ದಾರೆ. ಸೋಮವಾರ ಸಂಜೆ ಲಕ್ಕೂರಿನಲ್ಲಿ ಆಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page