ದೆಹಲಿ: ದೇಶಾದ್ಯಂತ ನಡೆಯಲಿರುವ ಜನಗಣತಿ (Census) ಕಾರ್ಯಕ್ಕೆ ಸಿಬ್ಬಂದಿಯನ್ನು ನೇಮಿಸುವ ವ್ಯಾಪ್ತಿಯನ್ನು ಕೇಂದ್ರ ಸರ್ಕಾರ ಗಮನಾರ್ಹವಾಗಿ ವಿಸ್ತರಿಸಿದೆ. ಇನ್ನು ಮುಂದೆ ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಬ್ಯಾಂಕ್ ನೌಕರರು, ಖಾಸಗಿ ಕಂಪನಿಗಳ ಸಿಬ್ಬಂದಿ ಹಾಗೂ ಗುಮಾಸ್ತರನ್ನು ಗಣತಿದಾರರನ್ನಾಗಿ (Enumerators) ನೇಮಿಸಲು ಅವಕಾಶ ಕಲ್ಪಿಸಿ ಕೇಂದ್ರ ಗೃಹ ಸಚಿವಾಲಯ ನಿಯಮಗಳಿಗೆ ಮಹತ್ವದ ತಿದ್ದುಪಡಿ ತಂದಿದೆ.
1948ರ ಜನಗಣತಿ ಕಾಯ್ದೆಯ ಸೆಕ್ಷನ್ 18(1) ರ ಅಡಿಯಲ್ಲಿ ಕೇಂದ್ರ ಸರ್ಕಾರವು ‘ಜನಗಣತಿ (ತಿದ್ದುಪಡಿ) ನಿಯಮಗಳು, 2026’ ಅನ್ನು ಅಧಿಕೃತ ಗೆಜೆಟ್ ಮೂಲಕ ಪ್ರಕಟಿಸಿದೆ. ಈ ನೂತನ ತಿದ್ದುಪಡಿಯ ಪ್ರಕಾರ, ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳ ಜತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು, ಸೊಸೈಟಿಗಳು ಹಾಗೂ ಟ್ರಸ್ಟ್ಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ನಿಯೋಜಿಸಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಕ್ಕೆ ಸಂಪೂರ್ಣ ಅಧಿಕಾರ ನೀಡಲಾಗಿದೆ.
ಇದರ ಜತೆಗೆ ಬ್ಯಾಂಕ್, ಸಾರ್ವಜನಿಕ ಮತ್ತು ಖಾಸಗಿ ಕಂಪನಿಗಳ ನೌಕರರನ್ನೂ ಈ ಪಟ್ಟಿಗೆ ಸೇರಿಸಲಾಗಿದ್ದು, ಆಡಳಿತವು ಸೂಕ್ತವೆಂದು ಭಾವಿಸುವ ಯಾವುದೇ ವ್ಯಕ್ತಿಯನ್ನು ಗಣತಿದಾರರನ್ನಾಗಿ ನೇಮಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಈ ಹಿಂದೆ ಖಾಸಗಿ ಶಾಲಾ ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ಬಳಸಿಕೊಳ್ಳುವುದನ್ನು ಪ್ರಶ್ನಿಸಿ ವಿವಿಧ ಹೈಕೋರ್ಟ್ಗಳಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹಾಗೂ ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯನ್ನು ಬಲವಂತವಾಗಿ ಗಣತಿಗೆ ನಿಯೋಜಿಸುವುದಕ್ಕೆ ತಡೆಯಾಜ್ಞೆ ನೀಡಿದ್ದವು.
ಈ ಎಲ್ಲಾ ಕಾನೂನು ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 1990ರ ಜನಗಣತಿ ನಿಯಮಗಳಿಗೆ ನೇರ ತಿದ್ದುಪಡಿ ತಂದು, ಖಾಸಗಿ ಶಾಲಾ ಶಿಕ್ಷಕರು ಹಾಗೂ ಇತರೆ ಸಂಸ್ಥೆಗಳ ಸಿಬ್ಬಂದಿಯನ್ನು ಸ್ಪಷ್ಟವಾಗಿ ಈ ಕಾಯ್ದೆಯ ವ್ಯಾಪ್ತಿಗೆ ಸೇರ್ಪಡೆಗೊಳಿಸಿದೆ.
