ದೆಹಲಿ: ಮುಂಬರುವ ಹಬ್ಬದ ಋತುವಿನಲ್ಲಿ ಸಕ್ಕರೆ ಬೆಲೆ ಏರಿಕೆಗೆ ಕಡಿವಾಣ ಹಾಕಲು ಮತ್ತು ಮಾರುಕಟ್ಟೆಯಲ್ಲಿ ಸುಲಭ ಲಭ್ಯತೆ ಕಾಯ್ದುಕೊಳ್ಳಲು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಸಕ್ಕರೆ ವ್ಯಾಪಾರಿಗಳು ಹಾಗೂ ಡೀಲರ್‌ಗಳಿಗೆ ಹೊಸ ದಾಸ್ತಾನು ನಿಯಮಗಳನ್ನು ಜಾರಿಗೊಳಿಸಿದೆ.
ಹೊಸ ನಿಯಮಾವಳಿಗಳ ಅನ್ವಯ, ಸಕ್ಕರೆ ಡೀಲರ್‌ಗಳು ಗರಿಷ್ಠ 1,000 ಕ್ವಿಂಟಾಲ್ ಸಕ್ಕರೆಯನ್ನು ಮಾತ್ರ ದಾಸ್ತಾನು ಇಟ್ಟುಕೊಳ್ಳಲು ಅವಕಾಶ ನೀಡಲಾಗಿದೆ. ಜತೆಗೆ, ತಾವು ಖರೀದಿಸಿದ ದಾಸ್ತಾನನ್ನು 15 ದಿನಗಳ ಒಳಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿ ಕ್ಲಿಯರ್ ಮಾಡುವುದು ಕಡ್ಡಾಯವಾಗಿದೆ. ಈ ಆದೇಶವು ಅಕ್ಟೋಬರ್ 15 ರಿಂದ ಜಾರಿಗೆ ಬರಲಿದ್ದು, ನವೆಂಬರ್ 30 ರವರೆಗೆ ಚಾಲ್ತಿಯಲ್ಲಿರುತ್ತದೆ.
ಕೋಲ್ಕತ್ತಾ ಮತ್ತು ಅಸ್ಸಾಂಗೆ ವಿನಾಯಿತಿ:
ಈಶಾನ್ಯ ರಾಜ್ಯಗಳಿಗೆ ಸಕ್ಕರೆ ಪೂರೈಕೆಯ ಪ್ರಮುಖ ಕೇಂದ್ರವಾಗಿರುವ ಕೋಲ್ಕತ್ತಾ ಹಾಗೂ ಭೌಗೋಳಿಕ ಮತ್ತು ಲಾಜಿಸ್ಟಿಕ್ಸ್ ಸವಾಲುಗಳನ್ನು ಹೊಂದಿರುವ ಅಸ್ಸಾಂ ವ್ಯಾಪಾರಿಗಳಿಗೆ ಹೆಚ್ಚಿನ ದಾಸ್ತಾನಿಗೆ ಅವಕಾಶ ಕಲ್ಪಿಸಲಾಗಿದೆ. ಈ ಭಾಗದ ವ್ಯಾಪಾರಿಗಳು ಗರಿಷ್ಠ 2,000 ಕ್ವಿಂಟಾಲ್ ವರೆಗೆ ಸಕ್ಕರೆ ದಾಸ್ತಾನು ಇರಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಕೋಲ್ಕತ್ತಾ ಮೂಲಕ ಈಶಾನ್ಯ ರಾಜ್ಯಗಳಿಗೆ ಸಕ್ಕರೆ ಸರಬರಾಜು ಆಗುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
