Home ದೇಶ ತಾಯಿಯ ಹಾಲು ಕುಡಿಯಲು ಹುಟ್ಟಿದವರು ಮನುಷ್ಯರು, ಬಿರಿಯಾನಿ ತಿನ್ನಲು ಹುಟ್ಟಿದವರು ಪ್ರಾಣಿಗಳು: ಅಸ್ಸಾಂ ಸಿಎಂ ಹಿಮಂತ...

ತಾಯಿಯ ಹಾಲು ಕುಡಿಯಲು ಹುಟ್ಟಿದವರು ಮನುಷ್ಯರು, ಬಿರಿಯಾನಿ ತಿನ್ನಲು ಹುಟ್ಟಿದವರು ಪ್ರಾಣಿಗಳು: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

0

ಗುವಾಹಟಿ: ನಗಾಂವ್ ಲೋಕಸಭಾ ಉಪಚುನಾವಣೆಯ ಪ್ರಚಾರದ ವೇಳೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಬಿರಿಯಾನಿ ಕುರಿತು ಆಡಿರುವ ಮಾತುಗಳು ಭಾರೀ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿವೆ. ಕಾಂಗ್ರೆಸ್ ಸಂಸದ ರಕಿಬುಲ್ ಹುಸೇನ್ ಅವರ ಈ ಹಿಂದಿನ ಹೇಳಿಕೆಗೆ ಪ್ರತಿಯಾಗಿ ಹಿಮಂತ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗಾಂವ್ ಲೋಕಸಭಾ ಕ್ಷೇತ್ರದ ಜುರಿಯಾದಲ್ಲಿ ನಡೆದ ಬೃಹತ್ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, “ತಾಯಿಯ ಎದೆಹಾಲು ಕುಡಿದು ಬೆಳೆಯಲು ಹುಟ್ಟಿದವರು ಮನುಷ್ಯರು, ಆದರೆ ಕೇವಲ ಬಿರಿಯಾನಿ ತಿನ್ನಲೆಂದೇ ಹುಟ್ಟಿದವರು ಪ್ರಾಣಿಗಳು” ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ನಾಯಕ ರಕಿಬುಲ್ ಹುಸೇನ್ ಅವರನ್ನು “ಬಕಾಸುರ” ಎಂದು ಜರೆದಿದ್ದ ಹಿಮಂತ, ಅವರು ಸರ್ಕಾರಿ ಯೋಜನೆಗಳ ಹಣವನ್ನು ನುಂಗಿಹಾಕಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಹುಸೇನ್, “ಭಗವಂತ ನನ್ನನ್ನು ಈ ಭೂಮಿಗೆ ಕಳುಹಿಸಿದ್ದೇ ಬಿರಿಯಾನಿ ಸವಿದು ಆನಂದಿಸಲು” ಎಂದು ವ್ಯಂಗ್ಯವಾಡಿದ್ದರು. ಈ ಹೇಳಿಕೆಗೆ ಪ್ರತಿಯಾಗಿ ಈಗ ಮುಖ್ಯಮಂತ್ರಿಗಳು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ ರೂಪೋಹಿಹಟ್ ಶಾಸಕ ನೂರುಲ್ ಹುದಾ ವಿರುದ್ಧವೂ ಕಿಡಿಕಾರಿದ ಸಿಎಂ, ಕ್ಷೇತ್ರದಲ್ಲಿ ಶಾಲೆ, ಕಾಲೇಜು ಮತ್ತು ರಸ್ತೆಗಳ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ ಹಾಗೂ ಮನೆ ಮನೆಗೆ ಕುಡಿಯುವ ನೀರಿನ ಪೈಪ್ ಲೈನ್ ಕೊಟ್ಟಿದ್ದಾರೆಯೇ ಹೊರತು ನೀರು ಬಂದಿಲ್ಲ ಎಂದು ಆರೋಪಿಸಿದರು. ಇದೇ ಅಕ್ಟೋಬರ್ 6 ರಂದು ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಅಕ್ಟೋಬರ್ 9 ರಂದು ಮತ ಎಣಿಕೆ ನಿಗದಿಯಾಗಿದೆ. ಬಿಜೆಪಿ ಅಭ್ಯರ್ಥಿ ದೇವಶಿಶ್ ಶರ್ಮಾ ಪರ ಬಿರುಸಿನ ಪ್ರಚಾರ ಕೈಗೊಂಡಿರುವ ಮುಖ್ಯಮಂತ್ರಿ, ಈ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

You cannot copy content of this page

Exit mobile version