Saturday, June 15, 2024

ಸತ್ಯ | ನ್ಯಾಯ |ಧರ್ಮ

ಫೋನ್‌ ಹ್ಯಾಕಿಂಗ್‌ ಕುರಿತು ಎಚ್ಚರಿಕೆ ನೀಡಿದ ಅಪಲ್‌ ಸಂಸ್ಥೆಯತ್ತ ಕಣ್ಣು ನೆಟ್ಟ ಕೇಂದ್ರ

ಈ ವರ್ಷದ  ಅಕ್ಟೋಬರ್ 31ರಂದು  ,  ಬೆಳಿಗ್ಗೆ 9.30ಕ್ಕೆ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಎಕ್ಸ್ (ಹಿಂದಿನ ಟ್ವಿಟರ್) ಸಾಮಾಜಿಕ  ವೇದಿಕೆಯಲ್ಲಿ ತಮ್ಮ ಫೋನನ್ನು ‘ಸರ್ಕಾರಿ ಪ್ರಾಯೋಜಿತ’ ದಾಳಿಕೋರರು ಹ್ಯಾಕ್ ಮಾಡಲು ಪ್ರಯತ್ನಿಸಿದ್ದಾರೆ ಎಂದು Apple  ಸಂಸ್ಥೆಯಿಂದ ‘ಎಚ್ಚರಿಕೆ ಸಂದೇಶ’  ಬಂದಿದೆ ಎಂದು  ಬರೆದುಕೊಂಡಿದ್ದರು.

ಮಹುವಾ ಮೊಯಿತ್ರಾ, ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ, ಕಾಂಗ್ರೆಸ್ ಮುಖಂಡ ಶಶಿ ತರೂರ್, ಇತರ ಅನೇಕ ವಿರೋಧ ಪಕ್ಷದ ಸಂಸದರು ಮತ್ತು ಕೆಲವು ಪತ್ರಕರ್ತರು ಆಪಲ್ ತಮಗೆ ಇದೇ ರೀತಿಯ ಎಚ್ಚರಿಕೆ ನೀಡಿದೆ ಎಂದು ಹೇಳಿದ್ದಾರೆ.

ಆ ಸಮಯದಲ್ಲಿ, ಸರ್ಕಾರವು ಈ ಆರೋಪವನ್ನು ತಳ್ಳಿ ಹಾಕಿದ್ದು ಮಾತ್ರವಲ್ಲದೆ ಆಪಲ್‌ ಸಂಸ್ಥೆಯ ಆರೋಪದ ಕುರಿತು ಆಳವಾದ ತನಿಖೆ ನಡೆಸುವುದಾಗಿ ಘೋಷಿಸಿತು.

ಇದಾದ ಸುಮಾರು ಎರಡು ತಿಂಗಳ ನಂತರ, ಡಿಸೆಂಬರ್ 28ರಂದು, ಅಮೆರಿಕದ ಪತ್ರಿಕೆ ವಾಷಿಂಗ್ಟನ್ ಪೋಸ್ಟ್ ಮತ್ತು ಅಮ್ನೆಸ್ಟಿ ಇಂಟರ್ನ್ಯಾಷನಲ್ ಸೆಕ್ಯುರಿಟಿ ಲ್ಯಾಬ್ ಈ ವಿಷಯದಲ್ಲಿ ವಿವರವಾದ ವರದಿಯನ್ನು ಪ್ರಕಟಿಸಿವೆ, ಅದರ ಪ್ರಕಾರ ಆಪಲ್ ಈ ಸೂಚನೆಯನ್ನು ವಿರೋಧ ಪಕ್ಷದ ಸಂಸದರು ಮತ್ತು ಪತ್ರಕರ್ತರಿಗೆ ಕಳುಹಿಸಿದ ಒಂದು ದಿನದ ನಂತರ ನರೇಂದ್ರ ಮೋದಿ ಸರ್ಕಾರದ ಅಧಿಕಾರಿಗಳು ಆಪಲ್ ವಿರುದ್ಧ ಕ್ರಮವನ್ನು ತೀವ್ರಗೊಳಿಸಿದ್ದಾರೆ. ಆಪಲ್ ಇಂಡಿಯಾ ಅಧಿಕಾರಿಗಳು ಈ ಎಚ್ಚರಿಕೆಯನ್ನು ತಮ್ಮ ವ್ಯವಸ್ಥೆಯ ಭಾಗವೆಂದು ಹೇಳುವಂತೆ ಅಥವಾ ತಿದ್ದುಪಡಿ ಹೇಳಿಕೆ ನೀಡುವಂತೆ ‘ಒತ್ತಡ’ ಹೇರಲಾಯಿತು.

ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಈ ವರದಿಯನ್ನು ತಳ್ಳಿಹಾಕಿರುವ ಕೇಂದ್ರ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ʼಇದು ಸಂಪೂರ್ಣವಾಗಿ ಕಪೋಲಕಲ್ಪಿತ ವರದಿಯಾಗಿದೆ.’

ಹೀಗಿರುವಾಗ ಆಪಲ್ ಸಂಸ್ಥೆಯ ಈ ನೋಟಿಫಿಕೇಷನ್ ಸ್ಕ್ರೀನ್ ಶಾಟ್‌ಗಳನ್ನು ಸಂಸದರು ಹಂಚಿಕೊಳ್ಳಲು ಪ್ರಾರಂಭಿಸಿದಾಗ, ಅನೇಕ ಬಿಜೆಪಿ ನಾಯಕರು ಈ ಎಚ್ಚರಿಕೆಯನ್ನು ಪ್ರಶ್ನಿಸಿದರು ಮತ್ತು ‘ಇದು ಆಪಲ್ ಸಂಸ್ಥೆಯ ಆಂತರಿಕ ಬೆದರಿಕೆ ಕುರಿತ ಎಚ್ಚರಿಕೆ ಕ್ರಮಾವಳಿಯಾಗಿದ್ದು, ಅದನ್ನು ತಪ್ಪಾಗಿ ಜನರಿಗೆ ಕಳುಹಿಸಿರಬಹುದು’ ಎಂದು ಸಮರ್ಥಿಸಿಕೊಂಡರು.

ಆದರೆ ಇಂತಹ ಸಾರ್ವಜನಿಕ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ, ಮೋದಿ ಸರ್ಕಾರದ ಅಧಿಕಾರಿಗಳು ಭಾರತದಲ್ಲಿನ ಆಪಲ್ ಪ್ರತಿನಿಧಿಗೆ ಖಾಸಗಿಯಾಗಿ ಕರೆ ಮಾಡಿ “ಈ ಎಚ್ಚರಿಕೆಗಳ ರಾಜಕೀಯ ಪರಿಣಾಮವನ್ನು ಕಡಿಮೆ ಮಾಡಲು ಸರ್ಕಾರಕ್ಕೆ ಸಹಾಯ ಮಾಡಿ” ಎಂದು ಕಂಪನಿಯನ್ನು ಕೇಳಿಕೊಂಡರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಇದಲ್ಲದೆ, ʼದೇಶದ ಹೊರಗಿನ ಆಪಲ್‌ ಸಂಸ್ಥೆಯ ಭದ್ರತಾ ಅಧಿಕಾರಿಗಳನ್ನು ಕರೆಯಿಸಿ ಈ ಕುರಿತು ಸ್ಪಷ್ಟೀಕರಣ ಕೊಡಿಸುವಂತೆ ಕೂಡಾʼ ಸರ್ಕಾರ ಆಪಲ್‌ ಬಳಿ ಬೇಡಿಕೆ ಇಟ್ಟಿದೆ.

ಈ ವಿಷಯದ ಬಗ್ಗೆ ತಿಳಿದಿರುವ ಮೂವರು ಅನಾಮಧೇಯತೆಯ ಷರತ್ತಿನ ಮೇಲೆ ಈ ಮಾಹಿತಿ ನೀಡಿದ್ದಾರೆ ಎಂದು ಅಮೆರಿಕದ ಪತ್ರಿಕೆ ಹೇಳಿದೆ.

ಈ ಮೂವರಲ್ಲಿ ಒಬ್ಬರು ಹೇಳಿದಂತೆ “ಸರ್ಕಾರದ ಜನರು ಈ ವಿಷಯದ ಕುರಿತು ಬಹಳ ಆಕ್ರೋಶದಲ್ಲಿದ್ದರು.”

ಪತ್ರಿಕೆಯ  ಪ್ರಕಾರ, ಆಪಲ್ ಸಂಸ್ಥೆಯ ವಿದೇಶಿ ಅಧಿಕಾರಿಗಳು ಕಂಪನಿಯ ಎಚ್ಚರಿಕೆ ಸಂದೇಶದ ಪರವಾಗಿ ದೃಢವಾಗಿ ನಿಂತರು. ಆದರೆ ಭಾರತ ಸರ್ಕಾರವು ಆಪಲ್ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸಿದ ರೀತಿ ಮತ್ತು ಸರ್ಕಾರವು ಸೃಷ್ಟಿಸಿದ ಒತ್ತಡವು ಕ್ಯುಪರ್ಟಿನೊ ಪ್ರಧಾನ ಕಚೇರಿಯಲ್ಲಿ ಕುಳಿತಿದ್ದ ಆಪಲ್ ಅಧಿಕಾರಿಗಳ ಮೇಲೆ ಪರಿಣಾಮ ಬೀರಿತು.

ಈ ಇಡೀ ಘಟನೆಯಿಂದ ಸ್ಪಷ್ಟವಾದ ಒಂದು ವಿಷಯವೆಂದರೆ “ವಿಶ್ವದ ಅತಿದೊಡ್ಡ ಟೆಕ್ ಕಂಪನಿ ಪ್ರಸ್ತುತ ಭಾರತ ಸರ್ಕಾರದಿಂದ ಒತ್ತಡವನ್ನು ಎದುರಿಸಿತು – ಜೊತೆ ಜೊತೆಗೆ ಅದಕ್ಕೆ ಮುಂಬರುವ ದಶಕದಲ್ಲಿ ಭಾರತವು ಪ್ರಮುಖ ಮಾರುಕಟ್ಟೆಯಾಗಲಿದೆಯೆನ್ನುವುದನ್ನು ತಿಳಿದುಕೊಳ್ಳುವುದು ಸಹ ಮುಖ್ಯವಾಗಿತ್ತು.”

ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಈ ವರದಿಯನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ನಿರಾಕರಿಸಿದ್ದಾರೆ.

 ರಾಜೀವ್‌ ಚಂದ್ರಶೇಖರ್‌ ಈ ಕುರಿತು ಪ್ರತಿಕ್ರಿಯಿಸುತ್ತಾ “ವಾಷಿಂಗ್‌ ಟನ್‌ ಪೋಸ್ಟ್‌ ಬರೆದಿರುವ ಈ ಕೆಟ್ಟ ಕತೆಗೆ ಪ್ರತಿಕ್ರಿಯಿಸುವುದು ನಿಜಕ್ಕೂ ಬೇಸರದ ವಿಷಯ ಆದರೆ ಯಾರದರೂ ಅದನ್ನೇ ಮಾಡಲೇಬೇಕೆನ್ನುವ ಕಾರಣಕ್ಕೆ ಮಾಡುತ್ತಿದ್ದೇನೆ” ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಅವರು ಮುಂದುವರೆದು “ಈ ವರದಿಯು ಅರ್ಧ ಸತ್ಯವಾಗಿದ್ದು, ಸಂದೇಶಕ್ಕೆ ಸಂಬಂಧಿಸಿದಂತೆ ತನಿಖೆ ಇನ್ನೂ ಪ್ರಗತಿಯಲ್ಲಿದೆ” ಎಂದು ಬರೆದುಕೊಂಡಿದ್ದಾರೆ.

ಜೊತೆಗೆ ಅಕ್ಟೋಬರ್ 31ರಂದು ಆಪಲ್ ನೀಡಿದ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಅವರು ದೂರಿದ್ದಾರೆ.

“ಈ ಬಗ್ಗೆ ಐಟಿ ಸಚಿವಾಲಯದ ನಿಲುವು ಸ್ಪಷ್ಟವಾಗಿದೆ ಮತ್ತು ಅದು ಯಾವಾಗಲೂ ಒಂದೇ ಆಗಿರುತ್ತದೆ. ಈ ಎಚ್ಚರಿಕೆಯನ್ನು ನೀಡಲು ಆಪಲ್‌ ಸಂಸ್ಥೆಗೆ ಇದ್ದ ಪ್ರಚೋದನೆ ಏನು ಎನ್ನುವುದನ್ನು ತಿಳಿಸುವಂತೆ ಕೇಳಲಾಗಿದೆ. ಭಾರತ ಸರ್ಕಾರ ಈ ಕುರಿತು ನಡೆಸುತ್ತಿರುವ ತನಿಖೆಗೆ ಸಹಕರಿಸುವಂತೆ ಆಪಲ್‌ ಸಂಸ್ಥೆಗೆ ತಿಳಿಸಲಾಗಿದೆ. ಮತ್ತು ಈ ಕುರಿತು ತನಿಖೆ ನಡೆಯುತ್ತಿದೆ. ಇದಷ್ಟೇ ಸತ್ಯ. ಉಳಿದಿದ್ದೆಲ್ಲ ಆ ಪತ್ರಿಕೆಯ ಕಪೋಲಕಲ್ಪಿತ ಕತೆ ಮಾತ್ರ” ಎಂದು ಅವರು ಹೇಳಿಕೊಂಡಿದ್ದಾರೆ.

ಈ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ಆಪಲ್‌ ತನ್ನ 20 ಗ್ರಾಹಕರಿಗೆ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿತ್ತು. ಮತ್ತು ವಿಶೇಷವೆಂಬಂತೆ ಅವರೆಲ್ಲರೂ ವಿರೋಧ ಪಕ್ಷದ ನಾಯಕರು ಮತ್ತು ಪತ್ರಕರ್ತರಾಗಿದ್ದರು.

ಈ ಅಮೆರಿಕನ್ ಪತ್ರಿಕೆಯ ವರದಿಯ ಪ್ರಕಾರ,  ಆಪಲ್ ಎಚ್ಚರಿಕೆ ಪಡೆದ ಇಬ್ಬರು ಪತ್ರಕರ್ತರಲ್ಲಿ ದಿ ವೈರ್‌ ಸಂಸ್ಥೆಯ ಆನಂದ್ ಮಂಗನಾಲೆ ಮತ್ತು ಸಿದ್ಧಾರ್ಥ್ ವರದರಾಜನ್ ಅವರ ಹೆಸರುಗಳನ್ನು ಚರ್ಚೆಯಲ್ಲಿದೆ.

ಇವರಲ್ಲಿ ಆನಂದ್ ಮಂಗ್ನಾಲೆ ಅವರು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (OCCRP) ಯ ದಕ್ಷಿಣ ಏಷ್ಯಾ ಸಂಪಾದಕ. ಇದು ತನಿಖಾ ಪತ್ರಿಕೋದ್ಯಮಕ್ಕೆ ಹೆಸರುವಾಸಿಯಾದ ಲಾಭೋದ್ದೇಶ ರಹಿತ ಸಂಸ್ಥೆಯಾಗಿದೆ. ಈ ವರ್ಷದ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ, OCCRP  ಬ್ರಿಟಿಷ್ ಪತ್ರಿಕೆ ‘ದಿ ಗಾರ್ಡಿಯನ್’ ಮತ್ತು   ‘ಫೈನಾನ್ಷಿಯಲ್ ಟೈಮ್ಸ್’ ಸಹಯೋಗದೊಂದಿಗೆ ವರದಿ ಮಾಡಿತ್ತು.

ಮಾರಿಷಸ್ ಮೂಲದ ಎರಡು ನಿಧಿಗಳಾದ ಎಮರ್ಜಿಂಗ್ ಇಂಡಿಯಾ ಫೋಕಸ್ ಫಂಡ್ (EIFF) ಮತ್ತು EM ರಿಸರ್ಜೆಂಟ್ ಫಂಡ್ (EMRF)  2013  ಮತ್ತು 2018ರ ನಡುವೆ  ಅದಾನಿ ಗ್ರೂಪಿನ ನಾಲ್ಕು ಕಂಪನಿಗಳಲ್ಲಿ ಹೂಡಿಕೆ ಮಾಡಿ ತಮ್ಮ ಷೇರುಗಳನ್ನು ಮಾರಾಟ ಮಾಡಿವೆ ಎಂದು ಹೇಳಲಾಗಿದೆ.

ದಿ ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ, ಈ ವರ್ಷದ ಆಗಸ್ಟ್ 23ರಂದು, OCCRP ಅದಾನಿ ಗ್ರೂಪಿಗೆ ತನ್ನ ವರದಿಯ ಬಗ್ಗೆ ಅವರ ಪ್ರತಿಕ್ರಿಯೆಯನ್ನು ತಿಳಿಯಲು ಮೇಲ್ ಮಾಡಿತು.  ಮೇಲ್ ಕಳುಹಿಸಿದ ಹತ್ತು ದಿನಗಳ ನಂತರ, ಈ ವರದಿ ಬಂದಿತು. ಆದರೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ಹೇಳುವಂತೆ ಆನಂದ್ ಮಂಗನಾಲೆ ಅವರ ಫೋನಿನ ವಿಧಿವಿಜ್ಞಾನ ವಿಶ್ಲೇಷಣೆಯಲ್ಲಿ, ವರದಿಯ ಕುರಿತು ಆನಂದ್‌ ಅದಾನಿ ಗ್ರೂಪಿಗೆ ಮೇಲ್‌ ಕಳುಹಿಸಿದ 24 ಗಂಟೆಗಳ ಒಳಗೆ ಅವರ ಫೋನ್‌ ಒಳಗೆ ಪೆಗಾಸಸ್‌ ಸ್ಪೈವೇರ್‌ ಸೇರಿಸುವ ಪ್ರಯತ್ನ ಮಾಡಲಾಗಿರುವುದು ತಿಳಿದುಬಂದಿದೆ.

ಪೆಗಾಸಸ್ ಎನ್ನುವುದು ಇಸ್ರೇಲಿ ಕಂಪನಿ ಎನ್ಎಸ್ಒ ಗ್ರೂಪ್ ರಚಿಸಿದ ಸ್ಪೈವೇರ್ ಆಗಿದ್ದು, ಅದನ್ನು ತಾನು ದೇಶದ ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡುವುದಾಗಿ ಎಂದು ಕಂಪನಿ ಹೇಳಿದೆ.

ದಿ ವಾಶಿಂಗ್‌ ಟನ್‌ ಪೋಸ್ಟ್‌ ವರದಿಗೆ ಪ್ರತಿಕ್ರಿಯಿಸಿರುವ ಅದಾನಿ ಗ್ರೂಪ್‌ ತಾನು ಯಾವುದೇ ಹ್ಯಾಕಿಂಗ್‌ ಪ್ರಯತ್ನದಲ್ಲಿ ತೊಡಗಿಕೊಂಡಿಲ್ಲ ಎನ್ನುವ ಮೂಲಕ ಪತ್ರಿಕೆಯ ಆರೋಪಗಳನ್ನು ತಳ್ಳಿ ಹಾಕಿದೆ. ಜೊತೆಗೆ ವಾಷಿಂಗ್‌ ಟನ್‌ ಪೋಸ್ಟ್‌ ತಮ್ಮ ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಅದಾನಿ ಗ್ರೂಪ್‌ ಆರೋಪಿಸಿದೆ.

ಅದಾನಿ ಗುಂಪಿನ ಕಾರ್ಪೊರೇಟ್‌ ಸಂವಹನ ಮುಖ್ಯಸ್ಥೆ ವರ್ಷಾ ಚೆನಾನಿ ವಾಷಿಂಗ್‌ ಟನ್‌ ಪತ್ರಿಕೆಗೆ ಪ್ರತಿಕ್ರಿಯಿಸಿದ್ದು, “ಅದಾನಿ ಗ್ರೂಪ್‌ ಉನ್ನತ ಮಟ್ಟದ ಸಮಗ್ರತೆ ಮತ್ತು ನಿಯಮಗಳೊಂದಿಗೆ ಕಾರ್ಯನಿರ್ವಹಿಸುತ್ತದೆ” ಎಂದಿದ್ದಾರೆ.

ಭಾರತದ ಖ್ಯಾತ ಸುದ್ದಿ ತಾಣ ದಿ ವೈರ್‌ ಆನ್‌ ಲೈನ್‌ ನಿಯತಕಾಲಿಕದ ಸಂಪಾದಕ ಸಿದ್ಧಾರ್ಥ್‌ ವರದರಾಜನ್‌ ಅವರ ಫೋನನ್ನು ಹ್ಯಾಕ್‌ ಮಾಡಲು ಆನಂದ್‌ ಅವರ ಫೋನನ್ನು ಹ್ಯಾಕ್‌ ಮಾಡಲು ಬಳಸಲಾದ ಮೇಲ್‌ ಐಡಿಯನ್ನೇ ಬಳಸಲಾಗಿದೆ ಎನ್ನುವುದನ್ನು ಅಮ್ನೆಸ್ಟಿ ಕಂಡುಹಿಡಿದಿದೆ.  ಅದೊಂದು ಆಪಲ್‌ ಐಡಿಯಾಗಿದ್ದು natalymarinova@proton.me ವಿಳಾಸವನ್ನು ಹೊಂದಿದೆ.

ಸುಪ್ರೀಂ ತನಿಖೆಗೆ ಕೇಂದ್ರ ಸಹಕಾರ ನೀಡಿಲ್ಲ: ವರದರಾಜನ್

“ಫೋರ್ಬಿಡನ್‌ ಸ್ಟೋರೀಸ್‌ ಸಹಯೋಗದೊಂದಿಗೆ ನಾವು 2021ರಲ್ಲಿ ಪೆಗಾಸಸ್‌ ಸ್ಪೈವೇರ್‌ ಬಗ್ಗೆ ವರದಿ ಮಾಡಿದ್ದೆವು. ಆ ಸಮಯದಲ್ಲಿ ಅದನ್ನು ಅನೇಕರ ಫೋನುಗಳಲ್ಲಿ ಪ್ಲಾಂಟ್‌ ಮಾಡಲಾಗಿದೆ ಎಂದು ಹೇಳಲಾಗಿತ್ತು. ಆದರೆ ಈಗ ನೋಡಿದರೆ ಆ ಅನೇಕರಲ್ಲಿ ನಾನೂ ಒಬ್ಬನಾಗಿದ್ದೆ. ಈ ವಿಷಯ ನಂತರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತು. ಆದರೆ ಅಲ್ಲಿಯೂ ಸರ್ಕಾರ ಸುಪ್ರೀಂ ಕೋರ್ಟಿನ ತನಿಖಾ ತಂಡದೊಂದಿಗೆ ಸರಿಯಾಗಿ ಸಹಕರಿಸಲಿಲ್ಲ ಎನ್ನುವುದನ್ನು ಕೋರ್ಟಿನ ಮುಂದೆ ಒಪ್ಪಿಕೊಂಡಿದೆ.

“2021ರಲ್ಲಿ ನಾವು ಫೋರ್ಬಿಡನ್‌ ಸ್ಟೋರೀಸ್‌ ಜೊತೆ ಸೇರಿ ಪೆಗಾಸಸ್‌ ಸ್ಪೈವೇರ್‌ ಕುರಿತು ಒಂದು ವರದಿ ಮಾಡಿದ್ದೆವು. ಆಗಲೇ ಹಲವು ಫೋನುಗಳಲ್ಲಿ ಈ ಸ್ಪೈವೇರ್‌ ಪ್ಲಾಂಟ್‌ ಆಗಿರುವುದು ಸಾರ್ವಜನಿಕರಿಗೆ ತಿಳಿದಿದ್ದು. ಪೆಗಾಸಸ್‌ ಬಲಿಪಶುಗಳಲ್ಲಿ ಅಂದು ನಾನೂ ಒಬ್ಬನಾಗಿದ್ದೆ. ನಂತರ ವಿಷಯ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು. ಆದರೆ ಸುಪ್ರೀಂ ಕೋರ್ಟ್‌ ರಚಿಸಿದ ಸಮಿತಿಯ ತನಿಖೆಗೆ ಕೇಂದ್ರ ಸರ್ಕಾರ ಸರಿಯಾಗಿ ಸಹಕರಿಸಲಿಲ್ಲ. ಇದನ್ನು ಅದು ಕೋರ್ಟಿನೆದುರು ಸಹ ಒಪ್ಪಿಕೊಂಡಿತ್ತು. ಆದರೆ ಅದನ್ನು ಕೋರ್ಟ್‌ ಹೆಚ್ಚು ಗಂಭೀರವಾಗಿ ಪರಿಗಣಿಸಲಿಲ್ಲ. ಹಾಗೆ ನೋಡಿದರೆ ಅದು ನ್ಯಾಯಾಂಗ ನಿಂದನೆಯಾಗಿತ್ತು. ಇಂದು ಮತ್ತೆ ಹಲವು ಜನರು ಪೆಗಾಸಸ್‌ಗೆ ಬಲಿಯಾಗುತ್ತಿದ್ದಾರೆ.”

ಅಕ್ಟೋಬರ್ 16ರಂದು ತನಗೆ ಆಪಲ್ ಸಂಸ್ಥೆಯಿಂದ ಎಚ್ಚರಿಕೆ ಸಂದೇಶ ಬಂದಿದೆ ಎಂದು ಸಿದ್ಧಾರ್ಥ್ ಹೇಳುತ್ತಾರೆ.

ಸಿದ್ಧಾರ್ಥ್‌ ಹೇಳುವಂತೆ “ಆಗ ನಾನು ಹೇಳಿಕೊಳ್ಳುವಂತಹ ಸೂಕ್ಷ್ಮ ವರದಿಯನ್ನೇನೂ ಮಾಡುತ್ತಿರಲಿಲ್ಲ. OCCRP ಮಾಡುತ್ತಿದ್ದಂತಹ ವರದಿಗಳನ್ನೂ ಮಾಡುತ್ತಿರಲಿಲ್ಲ. ಆದರೆ ನಾವು ದಿ ವೈರ್‌ ಸಂಸ್ಥೆ ಮಾಡುತ್ತಿದ್ದಂತಹ ಸುದ್ದಿಗಳಲ್ಲಿ 90 ಶೇಕಡಾ ಸುದ್ದಿಗಳು ಸರ್ಕಾರಕ್ಕೆ ಇಷ್ಟವಾಗುತ್ತಿರಲಿಲ್ಲ. ಈ ಹಿಂದಿನ ಪೆಗಾಸಸ್‌ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಈ ಬಾರಿಯ ಪಟ್ಟಿಯಲ್ಲೂ ನನ್ನ ಹೆಸರಿದೆ. ಇದು ನಮ್ಮ ಕೆಲಸವನ್ನು ಸರ್ಕಾರ ಗಮನಿಸುತ್ತಿದೆಯೆನ್ನುವುದನ್ನು ಸೂಚಿಸುತ್ತದೆ. ಇಂತಹ ಸಾಫ್ಟ್‌ ವೇರ್‌ ಬಳಸಿ ಸರ್ಕಾರಗಳು ಏನು ಮಾಡುತ್ತವೆಯೆಂದರೆ ಅವು ನಾವು ಮಾಡುತ್ತಿರುವ ವರದಿಗಳು ಮತ್ತು ಅದರ ಹಿಂದಿನ ಸುದ್ದಿ ಮೂಲ ಯಾರು ಎನ್ನುವುದನ್ನು ತಿಳಿಯಲು ಪ್ರಯತ್ನಿಸುತ್ತವೆ.”

ಆಪಲ್‌ ಕಂಪನಿಗೆ ಭಾರತ ಅತಿದೊಡ್ಡ ಮಾರುಕಟ್ಟೆಯೆಂದೂ ವರದಿಯಲ್ಲಿ ಹೇಳಲಾಗಿದೆ. ಇತ್ತೀಚೆಗೆ ರೈತ ಚಳವಳಿಯ ಸಮಯದಲ್ಲಿ ಭಾರತ ಸರ್ಕಾರವು ಕೆಲವು ಜನರ ಟ್ವೀಟ್‌ಗಳನ್ನು ಅಳಿಸುವಂತೆ ಟ್ವಿಟರ್‌ ಸಂಸ್ಥೆಯ ಮೇಲೆ ಒತ್ತಡ ಹೇರಿತ್ತೆಂದು ವರದಿಯಾಗಿತ್ತು. ಹೀಗಿರುವಾಗ ಆಪಲ್‌ ಸಂಸ್ಥೆಯ ಮೇಲೆ ಸರ್ಕಾರ ಹೇರುತ್ತಿರುವ ಒತ್ತಡವನ್ನು ಸಿದ್ಧಾರ್ಥ್‌ ಹೇಗೆ ನೋಡುತ್ತಾರೆ?

ಈ ಪ್ರಶ್ನೆಗೆ ಉತ್ತರಿಸಿದ ಸಿದ್ಧಾರ್ಥ್, “ಆಪಲ್‌ ಖ್ಯಾತಿ ಪಡೆದಿರುವುದು ಅದರ ಅದ್ಭುತ ಸೆಕ್ಯುರಿಟಿ ಕಾರಣಕ್ಕಾಗಿ. ಇದು ಜಗತ್ತಿನ ಅತಿ ದೊಡ್ಡ ತಂತ್ರಜ್ಞಾನ ಸಂಸ್ಥೆಯೂ ಹೌದು. ಈಗ ಸರ್ಕಾರ ಈ ಕಂಪನಿ ಸರ್ಕಾರದ ಒತ್ತಡಕ್ಕೆ ಒಳಗಾಗಿದೆ ಮತ್ತು ತನ್ನದೇ ಕಂಪನಿಯ ಸಂದೇಶವನ್ನು ದುರ್ಬಲವೆಂದು ಕರೆಯುತ್ತಿದೆ ಎನ್ನುವ ವರದಿಗಳು ಬರುತ್ತಿರುವ ಹೊತ್ತಿನಲ್ಲಿ ಅದು ಈಗ ತಾನು ಜಗತ್ತಿನ ಅತ್ಯಂತ ಸುರಕ್ಷಿತ ಫೋನ್‌ ಕಂಪನಿಯಾಗಿ ಉಳಿಯಲು ಬಯಸುತ್ತದೆಯೋ ಅಥವಾ ಸರ್ಕಾರದ ಒತ್ತಡಕ್ಕೆ ಒಳಗಾದ ಅಪಖ್ಯಾತಿಗೆ ಈಡಾಗಲು ಬಯಸುತ್ತದೆಯೋ ಎನ್ನುವುದು ಅದಕ್ಕೆ ಬಿಟ್ಟಿದ್ದು.” ಎನ್ನುತ್ತಾರೆ ಸಿದ್ಧಾರ್ಥ್.

‘ಆಪಲ್ ಎಚ್ಚರಿಕೆ ಮತ್ತು ಕಂಪನಿಯ ಅಧಿಕಾರಿಗಳಿಗೆ ಸರ್ಕಾರದ ಕರೆ’

ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ, ಆಪಲ್‌ ಸಂದೇಶದ ವಿವರಗಳನ್ನು ಹಲವು ಸಂಸದರು ಅಕ್ಟೋಬರ್‌ ತಿಂಗಳಿನಲ್ಲಿ ಹಂಚಿಕೊಳ್ಳಲು ಆರಂಭಿಸಿ ನಂತರ ಈ ಕುರಿತು ಚರ್ಚೆಗಳು ಆರಂಭಗೊಂಡ ತಕ್ಷಣ ಭಾರತ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಆಪಲ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ವಿರಾಟ್ ಭಾಟಿಯಾ ಅವರನ್ನು ಕರೆಸಿಕೊಂಡಿದ್ದಾರೆ. ಈ ಕುರಿತು ಆ ಪತ್ರಿಕೆಗೆ ಇಬ್ಬರು ವ್ಯಕ್ತಿಗಳು ಮಾಹಿತಿ ನೀಡಿದ್ದಾರೆ.

ಆ ಭೇಟಿಯಲ್ಲಿ ಆಫಲ್‌ ಅಧಿಕಾರಿ ಮತ್ತು ಸರ್ಕಾರಿ ಅಧಿಕಾರಿಗಳ ನಡುವೆ ಬಹಳಷ್ಟು ಮಾತಿನ ಚಕಮಕಿ ನಡೆದಿದೆ. ಸರ್ಕಾರಿ ಅಧಿಕಾರಿಯು “ಈ ಎಚ್ಚರಿಕೆ ಸಂದೇಶ ಕಣ್ತಪ್ಪಿನಿಂದ ಬಂದಿದೆ” ಎಂದು ಹೇಳಿಕೆ ನೀಡುವಂತೆ ಆಪಲ್‌ ಅಧಿಕಾರಿಗೆ ತಾಕೀತು ಮಾಡಿದ್ದಾರೆ. ಆದರೆ ಇದಕ್ಕೊಪ್ಪದ ಆಪಲ್‌ ಅಧಿಕಾರಿ ಹೆಚ್ಚೆಂದರೆ ಈ ಕುರಿತು ಒಂದು ಹೇಳಿಕೆ ನೀಡಬಹುದು ಅದೆಂದರೆ, “ಈ ಕುರಿತು ಮೊದಲೇ ಆಪಲ್‌ ವೆಬ್ಸೈಟಿನಲ್ಲಿ ತಿಳಿಸಲಾಗಿತ್ತು. ಇದೊಂದು ಮಾಮೂಲಿ ಎಚ್ಚರಿಕೆ ಸಂದೇಶವಷ್ಟೇ” ಎಂದು.

ಸಂಸದರು ಈ ಕುರಿತು ಟ್ವೀಟ್‌ ಮಾಡಲು ಆರಂಭಿಸುತ್ತಿದ್ದಂತೆ ಆಪಲ್‌ ಇಂಡಿಯಾ ಹೇಳಿಕೆಯೊಂದನ್ನು ನೀಡಿತು. ಅದು ಹೀಗಿತ್ತು: “ಇಂತಹ ಎಚ್ಚರಿಕೆ ಸಂದೇಶಗಳು ಗುಪ್ತ ಸಂಕೇತಗಳನ್ನು ಅವಲಂಬಿಸಿರುತ್ತವೆ. ಅವು ಬಹಳಷ್ಟು ಸಲ ನಿಖರವಾಗಿರುವುದಿಲ್ಲ ಹಾಗೂ ಅಪೂರ್ಣವಾಗಿರುತ್ತವೆ. ಕೆಲವೊಮ್ಮೆ ಇಂತಹ ಎಚ್ಚರಿಕೆ ಸಂದೇಶಗಳು ಸುಳ್ಳಾಗಿರುವ ಸಾಧ್ಯತೆಯೂ ಇರುತ್ತದೆ. ಅಥವಾ ಕೆಲವೊಮ್ಮೆ ದಾಳಿಕೋರರು ಯಾರೆನ್ನುವುದನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ.”

“ನಾವು ಯಾವ ಸಂದರ್ಭದಲ್ಲಿ ದಾಳಿ ಕುರಿತ ಮಾಹಿತಿಯನ್ನು ಬಿಡುಗಡೆ ಮಾಡುತ್ತೇವೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಸರ್ಕಾರಿ ಪ್ರಾಯೋಜಿತ ದಾಳಿಕೋರರು ಭವಿಷ್ಯದಲ್ಲಿ ದಾಳಿ ಸಾಧ್ಯತೆಯನ್ನು ಕಂಡುಹಿಡಿಯದಂತೆ ಮಾಡಲು ದಾರಿಗಳನ್ನು ಹುಡುಕಿಕೊಳ್ಳುವ ಸಾಧ್ಯತೆಯಿರುತ್ತದೆ.”

ಆಪಲ್‌ ನೀಡಿದ ಹೇಳಿಕೆ ಹೇಗಿತ್ತೆಂದರೆ ಅದು ತನ್ನದೇ ಎಚ್ಚರಿಕೆ ಸಂದೇಶಗಳನ್ನು ತಾನು ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನುವಂತಿತ್ತು.

ತಾನು ಬಹಳಷ್ಟು ಸರ್ಕಾರಿ ಒತ್ತಡದಲ್ಲಿರುವುದಾಗಿ ಭಾಟಿಯ ಕಂಪನಿಯ ಇತರ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಕಂಪನಿಯ ಇತರ ಅಧಿಕಾರಿಗಳು ತಾವು ಈ ಸಮಯದಲ್ಲಿ ಗಟ್ಟಿಯಾಗಿ ನಿಲ್ಲಬೇಕು ಎನ್ನುವ ನಿರ್ಧಾರಕ್ಕೆ ಬಂದು ಎಂದು ವಾಷಿಂಗ್‌ ಟನ್‌ ಪೋಸ್ಟ್‌ ಪತ್ರಿಕೆಗೆ ಮಾಹಿತಿದಾರರು ತಿಳಿಸಿರುವುದಾಗಿ ಆ ಪತ್ರಿಕೆ ಹೇಳಿಕೊಂಡಿದೆ.

ಆಪಲ್‌ ಇಂಡಿಯಾ ಕಂಪನಿಯ ಕಾರ್ಪೊರೇಟ್‌ ಸಂವಹನ ವಿಭಾಗವು ಆಪಲ್‌ ನೀಡಿದ ಎಚ್ಚರಿಕೆ ಸಂದೇಶವು ತಪ್ಪಾಗಿರಬಹುದು ಎನ್ನುವುದನ್ನು ಒತ್ತಿ ಹೇಳುವಂತಹ ವರದಿಗಳನ್ನು ತಯಾರಿಸುವಂತೆ ತನಗೆ ಮನವಿ ಬಂದಿತ್ತು ಎಂದು ಇಬ್ಬರು ಹೆಸರು ಹೇಳಲಿಚ್ಛಿಸಿದ ದೊಡ್ಡ ಟೆಕ್‌ ಪತ್ರಕರ್ತರು ಹೇಳಿದ್ದಾರೆ. ಇದರರ್ಥ ಆಪಲ್‌ ಕಂಪನಿ ವಿಶ್ವಾಸರ್ಹತೆಯ ಕುರಿತು ಅನುಮಾನ ಹುಟ್ಟುವಂತೆ ವರದಿ ಮಾಡುವಂತೆ ಕಂಪನಿಯೇ ಪತ್ರಕರ್ತರ ಬಳಿ ಮನವಿ ಮಾಡಿದೆ!

ಇಂದು ನಮ್ಮ ಮೇಲೆ ಗೂಢಚರ್ಯೆ ನಡೆಯುತ್ತಿದೆ, ನಾಳೆ ಸಿಜೆಐ ಮೇಲೂ ಗೂಢಚರ್ಯೆ ನಡೆಯಲಿದೆ: ಪ್ರಿಯಾಂಕಾ ಚತುರ್ವೇದಿ

 ಅಕ್ಟೋಬರ್ 30ರಂದು ಆಪಲ್ ಸಂಸ್ಥೆಯಿಂದ ಎಚ್ಚರಿಕೆ ಸಂದೇಶ ಪಡೆದವರಲ್ಲಿ ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡ ಒಬ್ಬರು. 

“ಜನರು ಆಪಲ್ ಸಂಸ್ಥೆಯ ದುಬಾರಿ ಸಾಧನಗಳನ್ನು ಖರೀದಿಸಲು ಕಾರಣವೆಂದರೆ ಅಲ್ಲಿ ನಮ್ಮ ಭದ್ರತೆ ಬಲವಾಗಿರುತ್ತದೆ ಎನ್ನುವುದು, ಆದರೆ ವಿಶ್ವದ ಅತಿದೊಡ್ಡ ಕಂಪನಿಯು ಸರ್ಕಾರದ ಒತ್ತಡಕ್ಕೆ ಸಿಲುಕಿದರೆ ಅಥವಾ ಅದರ ವ್ಯವಹಾರವನ್ನು ನೋಡಿದ ನಂತರ ನೈತಿಕತೆಯೊಂದಿಗೆ ರಾಜಿ ಮಾಡಿಕೊಂಡರೆ, ಮುಂದೆ ಏನಾಗಬಹುದು ಎನ್ನುವುದರ ಕುರಿತು ನೀವು ಚಿಂತೆಗೀಡಾಗುತ್ತೀರು” ಎಂದು ಪ್ರಿಯಾಂಕಾ ತಿಳಿಸಿದರು.

ಇದನ್ನು ಮೂಲಭೂತ ಹಕ್ಕು ಎಂದು ಬಣ್ಣಿಸಿದ ಪ್ರಿಯಾಂಕಾ, “ಸುಪ್ರೀಂ ಕೋರ್ಟನ್ನು ಗೌರವಿಸುತ್ತಾ, ನಾನು ಒಂದು ಮಾತು ಹೇಳಲು ಬಯಸುತ್ತೇನೆ – ಖಾಸಗಿತನವು ಮೂಲಭೂತ ಹಕ್ಕು. ಇಂದು ವಿರೋಧ ಪಕ್ಷಗಳು ಮತ್ತು ಪತ್ರಕರ್ತರ ಮೇಲೆ ಈ ರೀತಿ ಬೇಹುಗಾರಿಕೆ ನಡೆಸುವುದನ್ನು ಸುಪ್ರೀಂ ಕೋರ್ಟ್ ನಿರ್ಲಕ್ಷಿಸಿದರೆ, ನಾಳೆ ಈ ಸರ್ಕಾರದ ನೈತಿಕ ಸ್ಥೈರ್ಯವು ಎಷ್ಟು ಹೆಚ್ಚಾಗುತ್ತದೆ ಎಂದರೆ ಮುಖ್ಯ ನ್ಯಾಯಮೂರ್ತಿಗಳ ಫೋನನ್ನು ಸಹ ಗುರಿಯಾಗಿಸಲಾಗುತ್ತದೆ. ಎಂದರೆ ಇಲ್ಲಿ ಯಾರೂ ಸುರಕ್ಷಿತರಲ್ಲ.” ಎಂದರು.

“ಫೇಸ್ಬುಕ್ ವಿರುದ್ಧ ಆರೋಪಗಳು ಕೇಳಿ ಬಂದಾಗ, ಯುಎಸ್ ಸಂಸತ್ತಿನಲ್ಲಿ ಮಾರ್ಕ್ ಜುಕರ್ಬರ್ಗ್ ಅವರಿಗೆ ಎಷ್ಟು ಕಷ್ಟಕರವಾದ ಪ್ರಶ್ನೆಗಳನ್ನು ಕೇಳಲಾಯಿತು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ, ಆದರೆ ಇಲ್ಲಿ ನಾವು ನಮ್ಮ ಫೋನನ್ನು ಹ್ಯಾಕ್ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದೇವೆ. ಆದರೂ ಯಾರೂ ಆ ಕುರಿತು ಕ್ಯಾರೇ ಎನ್ನುತ್ತಿಲ್ಲ” ಎಂದು ಅವರು ಹೇಳಿದರು.

ಪೆಗಾಸಸ್‌ ಎನ್ನುವುದು ಒಂದು ಹ್ಯಾಕಿಂಗ್‌ ಸ್ಪೈವೇರ್‌ ಆಗಿದ್ದು ಇದನ್ನು ಒಬ್ಬರ ಫೋನಿನಲ್ಲಿ ಹಾಕಿದರೆ ಹಾಗೆ ಹಾಕಿದವರಿಗೆ ನಿಮ್ಮ ಫೋನಿನ ಮೈಕ್‌, ಫೋಟೊಗಳು ಮತ್ತು ಕೆಮೆರಾಕ್ಕೆ ಅವರಿರುವ ಸ್ಥಳದಿಂದಲೇ ಪ್ರವೇಶ ದೊರೆಯುತ್ತದೆ. ಇದೇ ಪೆಗಾಸಸ್‌ ಆಳವಡಿಕೆ ಪ್ರಯತ್ನದ ಕುರಿತಾಗಿಯೇ ಆಪಲ್‌ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದು ಎನ್ನಲಾಗುತ್ತಿದೆ.

ಪ್ರಿಯಾಂಕಾ ಚತುರ್ವೇದಿ, “ಒಬ್ಬ ಮಹಿಳೆಯಾಗಿ, ಇದು ನನಗೆ ಇನ್ನಷ್ಟು ಸಮಸ್ಯೆಗಳನ್ನು ತರಬಲ್ಲದು, ನಾನು  ನನ್ನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಇರುವಾಗಲೂ, ನಾನು ತಮಾಷೆಯಾಗಿ ಮಾತನಾಡುತ್ತಿಲ್ಲ, ಅದನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಬಹುದು ಎನ್ನುವ ಭಯ ಕಾಡುತ್ತಿರುತ್ತದೆ. ನನ್ನ ಮಾತುಗಳನ್ನು ಯಾರಾದರೂ ಕೇಳುತ್ತಿರಬಹುದೇ ಎಂದು ಪ್ರತಿ ಕ್ಷಣವೂ ಅನುಮಾನ ಮೂಡುತ್ತದೆ, ನನ್ನ ಮೇಲೆ ಕಣ್ಣಿಟ್ಟಿರಬಹುದಾದ ನಾಲ್ಕು ಜನರು ನನ್ನ ವೈಯಕ್ತಿಕ ಚಿತ್ರಗಳನ್ನು ನೋಡಬಹುದು ಎನ್ನುವ ಭಯ ಕಾಡುತ್ತಿರುತ್ತದೆ. ಈ ಜನರ ಇತಿಹಾಸ ಮತ್ತು ವರು ಈ ಹಿಂದೆ ಗುಜರಾತಿನಲ್ಲಿ ಏನೆಲ್ಲಾ ಮಾಡಿದ್ದಾರೆನ್ನುವುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇದು ಖಾಸಗಿತನದ ಉಲ್ಲಂಘನೆ, ಇದು ಮುಂಬರುವ ಚುನಾವಣೆಗಳ ಮೇಲೂ ಪರಿಣಾಮ ಬೀರಬಹುದು. ಇದು ಜನರ ಆಯ್ಕೆಯ ಮೇಲೂ ಪ್ರಭಾವ ಬೀರುತ್ತದೆ ಏಕೆಂದರೆ ಈಗಾಗಲೇ ಅವರ ಡೇಟಾ ಮತ್ತು ಸಾಧನಕ್ಕೆ ಅವರು ಪ್ರವೇಶವನ್ನು ಹೊಂದಿದ್ದಾರೆ.” ಎಂದು ಹೇಳುತ್ತಾರೆ

ಯಾರೋ ಪ್ರತಿ ಕ್ಷಣವೂ ನಮ್ಮನ್ನು ಹಿಂಬಾಲಿಸುತ್ತಿದ್ದಾರೆನ್ನುವ ತಿಳುವಳಿಕೆ ನಮ್ಮನ್ನು ಮಾನಸಿಕವಾಗಿ ಹೈರಾಣು ಮಾಡುತ್ತದೆ.

ಸರ್ಕಾರ ಯಾವುದೇ ಇರಲಿ ಅದು ಕಟು ಟೀಕೆಗಳನ್ನು ಇಷ್ಟಪಡುವುದಿಲ್ಲ ಎಂದು ವರದರಾಜನ್ ಹೇಳುತ್ತಾರೆ, “ಆದರೆ ಒಂದೇ ವ್ಯತ್ಯಾಸವೆಂದರೆ ಕೆಲವು ಸರ್ಕಾರಗಳು ಒಂದಷ್ಟು ಸಹಿಷ್ಣುತೆಯನ್ನು ಸಹ ಹೊಂದಿವೆ ಮತ್ತು ಕೆಲವು ಟೀಕೆಗಳನ್ನು ಸಹಿಸುವುದಿಲ್ಲ. ಆದರೆ ನಮ್ಮಂತಹ ಜನರಿಗೆ ಒಮ್ಮೆ ಈ ಪತ್ರಿಕೋದ್ಯಮಕ್ಕೆ ಬಂದ ನಂತರ ಇದರಲ್ಲಿ ಭಯಕ್ಕೆ ಸ್ಥಾನವಿಲ್ಲ ಎನ್ನುವುದು ನಮಗೆ ತಿಳಿದ ವಿಷಯವೇ ಆಗಿತ್ತು.  ಹಾಗೆಯೇ ಈಗ ಪ್ರಜಾಪ್ರಭುತ್ವದಲ್ಲೂ ಭಯಕ್ಕೆ ಜಾಗವಿಲ್ಲ ಎಂದು ಹೇಳಬೇಕಾಗಿದೆ. ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕೆಂದರೆ ನಾವು ಭಯವನ್ನು ಸಂಪೂರ್ಣವಾಗಿ ಇಲ್ಲವಾಗಿಸಬೇಕು.”

“ಪರಿಸ್ಥಿತಿ ಹೀಗಿದೆ, ಈ ಕಣ್ಗಾವಲು ಕೊನೆಗೊಳ್ಳುತ್ತದೆ ಎನ್ನುವ ಭರವಸೆಯೂ ನನಗಿಲ್ಲ. ಒಂದು ವೇಳೆ ದೇಶದ ಪರವಾಗಿ ದನಿಯೆತ್ತಲು ನಾವು ಇಂತಹದ್ದೊಂದು ಬೆಲೆಯನ್ನು ತೆರಬೇಕಾಗುತ್ತದೆಯಾದರೆ ನಾನು ಅದಕ್ಕೂ ಸಿದ್ಧಳಿದ್ದೇನೆ” ಎಂದು ಪ್ರಿಯಾಂಕಾ ಚತುರ್ವೇದಿ ಹೇಳುತ್ತಾರೆ.

ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗೆ ಪ್ರತಿಕ್ರಿಯಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, “ನಾವು ಈ ವಿಷಯದಲ್ಲಿ ತಾಂತ್ರಿಕ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಇಲ್ಲಿಯವರೆಗೆ, ಆಪಲ್ ತನಿಖಾ ಪ್ರಕ್ರಿಯೆಗೆ ಸಂಪೂರ್ಣವಾಗಿ ಸಹಕರಿಸಿದೆ” ಎಂದಿದೆ.

ಪತ್ರಿಕೆಯೊಂದಿಗೆ ಮಾತನಾಡಿದ ಭಾರತದ ತಂತ್ರಜ್ಞಾನ ನೀತಿಗಳ ಬಗ್ಗೆ ಕೆಲಸ ಮಾಡುವ ಸುದ್ದಿ ವೆಬ್ಸೈಟ್ ಮೀಡಿಯಾನಾಮಾದ ಸಂಸ್ಥಾಪಕ ನಿಖಿಲ್ ಪಹ್ವಾ, “ಭಾರತ ಸರ್ಕಾರವು ತನ್ನ ವಿರುದ್ಧದ ಆರೋಪಗಳನ್ನು ನಿಷ್ಪಕ್ಷಪಾತವಾಗಿ ಹೇಗೆ ತನಿಖೆ ಮಾಡಬಲ್ಲದು? ಸರ್ಕಾರ ಇಂತಹ ಹೇಳಿಕೆಗಳನ್ನು ಯಾಕೆ ನೀಡುತ್ತದೆ ಎನ್ನುವುದನ್ನು ನಾವು ಈಗಾಗಲೇ ನೋಡಿದ್ದೇವೆ. ವಿಷಯದ ಬಿಸಿಯನ್ನು ತಣಿಸುವ ಸಲುವಾಗಿಯಷ್ಟೇ ಅದು ಇಂತಹ ಹೇಳಿಕೆಗಳನ್ನು ನೀಡುತ್ತದೆ” ಎನ್ನುತ್ತಾರೆ.

ಜುಲೈ 2021ರಲ್ಲಿ, ಅಂದರೆ ಎರಡು ವರ್ಷಗಳ ಹಿಂದೆ, ವಿಶ್ವದ ಕೆಲವು ಸುದ್ದಿ ಸಂಸ್ಥೆಗಳು ಫಾರ್ಬಿಡನ್ ಸ್ಟೋರೀಸ್ ಸಹಯೋಗದೊಂದಿಗೆ ವಿಶ್ವದಾದ್ಯಂತದ ಅನೇಕ ಪತ್ರಕರ್ತರು ಮತ್ತು ಕಾರ್ಯಕರ್ತರ ಫೋನುಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ತನಿಖಾ ವರದಿಯನ್ನು ಪ್ರಕಟಿಸಿದವು.

 ಪೆಗಾಸಸ್‌ ಸ್ಪೈವೇರ್‌ ತಯಾರಿಸುವ ಸಂಸ್ಥೆಯಾದ NSO ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದು, ತಾನು ಸಾರ್ವಭೌಮ ರಾಷ್ಟ್ರಗಳಿಗೆ ಮಾತ್ರವೇ ತನ್ನ ಸಾಫ್ಟ್‌ವೇರ್‌ ಮಾರುತ್ತಿರುವುದಾಗಿ ಹೇಳಿಕೊಂಡಿದೆ. ಅಲ್ಲದೆ ತನ್ನ ಉತ್ಪನ್ನದ ಉದ್ದೇಶ ಕೇವಲ “ಭಯೋತ್ಪಾದನೆ ಮತ್ತು ಅಪರಾಧದ ವಿರುದ್ಧ ಹೋರಾಡುವುದು” ಎಂದು ಅದು ಹೇಳಿದೆ.

ನಂತರ ಈ ವರದಿಯನ್ನು ದಿ ವೈರ್ ಭಾರತದಲ್ಲಿ ಪ್ರಕಟಿಸಿತು. ಆ ವರದಿಯಲ್ಲಿ ಪೆಗಾಸಸ್ ಸ್ಪೈವೇರನ್ನು 40 ಪತ್ರಕರ್ತರು, ಮೂವರು ದೊಡ್ಡ ವಿರೋಧ ಪಕ್ಷದ ನಾಯಕರು, ಓರ್ವ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿ, ಮೋದಿ ಸರ್ಕಾರದ ಇಬ್ಬರು ಸಚಿವರು ಮತ್ತು ಪ್ರಸ್ತುತ ಮತ್ತು ಮಾಜಿ ಭದ್ರತಾ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಅನೇಕ ಉದ್ಯಮಿಗಳ ಮೇಲೆ ಬಳಸಲಾಗಿದೆ ಎಂದು ಹೇಳಲಾಗಿತ್ತು.

ಆ ಸಮಯದಲ್ಲಿ, ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಸದನದಲ್ಲಿ ಹೇಳಿಕೆ ನೀಡುತ್ತಾ ಇದೊಂದು ಸಂಪೂರ್ಣ ಕಟ್ಟುಕತೆಯಾಗಿದ್ದು, ಅಧಿವೇಶನಕ್ಕೆ ಒಂದು ದಿನವಿರುವಾಗ ಬಿಡುಗಡೆ ಮಾಡಲಾಗಿದೆ. ಹೀಗೆ ಅಧಿವೇಶನಕ್ಕೆ ಒಂದು ದಿನ ಮೊದಲು ವರದಿ ಬರುವುದು ಕಾಕತಾಳೀಯವಲ್ಲ, ಇದು ಭಾರತದ ಪ್ರಜಾಪ್ರಭುತ್ವವನ್ನು ದೂಷಿಸುವ ಪಿತೂರಿಯಾಗಿದೆ. ಈ ಗೂಢಚರ್ಯೆ ಹಗರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಆದರೆ, ಭಾರತ ಸರ್ಕಾರ ತಾನು NSS ಸಂಸ್ಥೆಯಿಂದ ಪೆಗಾಸಸ್‌ ಖರೀದಿಸಿಲ್ಲ ಎಂದು ಇಂದಿಗೂ ಸ್ಪಷ್ಟವಾಗಿ ಹೇಳಿಲ್ಲ.

ಪೆಗಾಸಸ್ ಹೇಗೆ ಕೆಲಸ ಮಾಡುತ್ತದೆ?

ಪೆಗಾಸಸ್ ಇಸ್ರೇಲಿ ಸೈಬರ್ ಸೆಕ್ಯುರಿಟಿ ಕಂಪನಿ ಎನ್ಎಸ್ಒ ಗ್ರೂಪ್ ಟೆಕ್ನಾಲಜೀಸ್ ನಿರ್ಮಿಸಿರುವ ಒಂದು ಸ್ಪೈವೇರ್.

ಇದನ್ನು ಒಮ್ಮೆ ಸ್ಮಾರ್ಟ್‌ ಫೋನ್‌ ಒಳಗೆ ಆಳವಡಿಸಿದರೆ ಆ ವ್ಯಕ್ತಿಯ ಸ್ಮಾರ್ಟ್‌ ಫೋನಿನ ಕೆಮೆರಾ, ಮೈಕ್ರೋಫೋನ್‌, ಆಡಿಯೋ, ಪಠ್ಯ ಸಂದೇಶಗಳು, ಇಮೇಲ್‌ ಮತ್ತು ಲೊಕೇಷನ್‌ ಕುರಿತ ಮಾಹಿತಿಯನ್ನು ಪಡೆಯಬಹುದು.

ಸೈಬರ್ ಸೆಕ್ಯುರಿಟಿ ಕಂಪನಿ ಕ್ಯಾಸ್ಪರ್ಸ್ಕಿ ವರದಿಯ ಪ್ರಕಾರ, ಪೆಗಾಸಸ್ ನಿಮಗೆ ಎನ್ಕ್ರಿಪ್ಟ್ ಮಾಡಿದ ಆಡಿಯೊವನ್ನು ಕೇಳಲು ಮತ್ತು ಎನ್ಕ್ರಿಪ್ಟ್ ಮಾಡಿದ ಸಂದೇಶಗಳನ್ನು ಓದಲು ಅನುವು ಮಾಡಿಕೊಡುತ್ತದೆ.

ಎನ್ಕ್ರಿಪ್ಟ್ ಸಂದೇಶಗಳೆಂದರೆ ಸಂದೇಶವನ್ನು ಕಳುಹಿಸುವವರಿಗೆ ಮತ್ತು ಸ್ವೀಕರಿಸುವವರಿಗೆ ಮಾತ್ರ ಅದರಲ್ಲಿನ ವಿಷಯಗಳು ತಿಳಿದಿರುವ ಸಂದೇಶಗಳಾಗಿವೆ. ಯಾವ ಪ್ಲಾಟ್ ಫಾರ್ಮ್ ಬಳಸಿ ಸಂದೇಶವನ್ನು ಕಳುಹಿಸಲಾಗುತ್ತಿದೆಯೋ  ಆ ಕಂಪನಿಗೂ ಅಂತಹ ಸಂದೇಶಗಳನ್ನು ನೋಡಲು ಅಥವಾ ಕೇಳಲು ಸಾಧ್ಯವಿಲ್ಲ.

ಪೆಗಾಸಸ್ ಬಳಸಿ, ಹ್ಯಾಕರ್ ಆ ವ್ಯಕ್ತಿಯ ಫೋನಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಬಹುದು.

ಪೆಗಾಸಸ್ ಕುರಿತು ಮಾಹಿತಿಯನ್ನು ಮೊದಲು  2016ರಲ್ಲಿ  ಯುಎಇ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತ ಅಹ್ಮದ್ ಮನ್ಸೂರ್ ಬಹಿರಂಗಪಡಿಸಿದರು.

ಅವರ ಪ್ರಕಾರ ಅವರಿಗೆ ಹಲವು ಅನುಮಾನಸ್ಪದ ಎಸ್ಸೆಮ್ಮೆಸ್‌ ಸಂದೇಶಗಳನ್ನು ಕಳುಹಿಸಲಾಗಿತ್ತು. ಕೆಟ್ಟ ಉದ್ದೇಶಗಳೊಂದಿಗೆ ಹಲವು ಲಿಂಕುಗಳನ್ನು ಸಹ ಕಳುಹಿಸಲಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

ಅವರು ತಮ್ಮ ಫೋನನ್ನು ಟೊರೊಂಟೊ ವಿಶ್ವವಿದ್ಯಾಲಯದ ‘ಸಿಟಿಜನ್ ಲ್ಯಾಬ್’ ತಜ್ಞರಿಗೆ ತೋರಿಸಿದರು. ನಂತರ ಅವರು ಮತ್ತೊಂದು ಸೈಬರ್ ಭದ್ರತಾ ಸಂಸ್ಥೆಯಾದ ‘ಲುಕ್ ಔಟ್’ ಸಹಾಯವನ್ನೂ ಪಡೆದರು.

ಮನ್ಸೂರ್ ಸರಿಯಾಗಿಯೇ ಊಹಿಸಿದ್ದರು. ಒಂದು ವೇಳೆ ಅವರು ಆ ಲಿಂಕನ್ನು ಕ್ಲಿಕ್ ಮಾಡಿದ್ದರೆ, ಅವರ ಐಫೋನ್ ಮಾಲ್‌ ವೇರ್ ಸೋಂಕಿಗೆ ಒಳಗಾಗುತ್ತಿತ್ತು. ಈ ಮಾಲ್‌ ವೇರ್‌ಗೆ ಪೆಗಾಸಸ್ ಎಂದು ಹೆಸರಿಡಲಾಗಿತ್ತು. ಲುಕ್ಔಟ್ ಸಂಶೋಧಕರು ಇದನ್ನು “ಎಂಡ್ ಪಾಯಿಂಟಿನಲ್ಲಿ ನಡೆಸಿದ ಅತ್ಯಂತ ಸಂಕೀರ್ಣ ದಾಳಿ” ಎಂದು ಬಣ್ಣಿಸಿದ್ದಾರೆ.

ಈ ಪ್ರೋಗ್ರಾಂ ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲಾದ ಆಪಲ್ ಫೋನುಗಳ ಭದ್ರತೆಯನ್ನು ಸಹ ಭೇದಿಸುವಲ್ಲಿ ಯಶಸ್ವಿಯಾಗಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಆದಾಗ್ಯೂ, ಇದನ್ನು ಎದುರಿಸಲು ಆಪಲ್ ಹಲವು ಅಪ್ಡೇಟುಗಳನ್ನು ತಂದಿತು.

ಇದರ ನಂತರ, 2017ರಲ್ಲಿ ನ್ಯೂಯಾರ್ಕ್ ಟೈಮ್ಸ್‌ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮೆಕ್ಸಿಕನ್ ಸರ್ಕಾರವು ಪೆಗಾಸಸ್ ಸಹಾಯದಿಂದ ಮೊಬೈಲ್ ಬೇಹುಗಾರಿಕೆ ಸಾಧನವನ್ನು ರಚಿಸಿದೆ ಎಂದು ಆರೋಪಿಸಲಾಗಿದೆ.

ವರದಿಯ ಪ್ರಕಾರ, ಇದನ್ನು ಮೆಕ್ಸಿಕೊದ ಮಾನವ ಹಕ್ಕುಗಳ ಕಾರ್ಯಕರ್ತರು, ಪತ್ರಕರ್ತರು ಮತ್ತು ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರ ವಿರುದ್ಧ ಬಳಸಲಾಗುತ್ತಿದೆ.

ಮೆಕ್ಸಿಕೋದ ಪ್ರಮುಖ ಪತ್ರಕರ್ತರು ಮತ್ತು ಕಾರ್ಯಕರ್ತರು ತಮ್ಮ ಸರ್ಕಾರವು ಮೊಬೈಲ್ ಫೋನ್ ಗಳ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿ ಮೊಕದ್ದಮೆ ಹೂಡಿದ್ದಾರೆ.

ಪೆಗಾಸಸ್ ಸಾಫ್ಟ್‌ವೇರನ್ನು ಇಸ್ರೇಲಿ ಕಂಪನಿ ಎನ್ಎಸ್ಒ ಮೆಕ್ಸಿಕೊ ಸರ್ಕಾರಕ್ಕೆ ಮಾರಾಟ ಮಾಡಿದೆ ಎಂದು ವರದಿ ಹೇಳುತ್ತದೆ.

ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಈ ಸಾಫ್ಟ್‌ವೇರ್‌ನ ವಿಶೇಷತೆಯೆಂದರೆ ಇದು ಸ್ಮಾರ್ಟ್‌ಫೋನನ್ನು ಪತ್ತೆ ಮಾಡುತ್ತದೆ ಮತ್ತು ಕರೆಗಳು, ಪಠ್ಯಗಳು ಮತ್ತು ಇತರ ಸಂವಹನಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಇದು ಫೋನ್‌ನ ಮೈಕ್ರೋಫೋನ್ ಅಥವಾ ಕ್ಯಾಮೆರಾವನ್ನು ಸಹ ಸಕ್ರಿಯಗೊಳಿಸಬಲ್ಲದು.

ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಗೂ ಮುನ್ನ ಬೇಹುಗಾರಿಕೆಗೆ ಬಳಸಿದ್ದ ಸಾಫ್ಟ್ವೇರನ್ನು ಸೌದಿ ಸರ್ಕಾರಕ್ಕೆ ಪೂರೈಸಿದ ಆರೋಪವೂ ಈ ಕಂಪನಿಯ ಮೇಲಿದೆ.

NSO ತಾನು ಈ ಸಾಫ್ಟ್‌ವೇರನ್ನು ಮಾನ್ಯತೆ ಪಡೆದ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಮಾರಾಟ ಮಾಡುತ್ತದೆ ಮತ್ತು ಅದರ ಉದ್ದೇಶ “ಭಯೋತ್ಪಾದನೆ ಮತ್ತು ಅಪರಾಧದ ವಿರುದ್ಧ ಹೋರಾಡುವುದು” ಎಂದು ಹೇಳಿಕೊಂಡಿದೆ. ಕಂಪನಿಯು ಕ್ಯಾಲಿಫೋರ್ನಿಯಾದ ನ್ಯಾಯಾಲಯದಲ್ಲೂ ಇದೇ ಹೇಳಿಕೆಯನ್ನು ನೀಡಿದೆ.

(ಕೃಪೆ: ಬಿಬಿಸಿ ಡಾಟ್‌ ಕಾಮ್)

Related Articles

ಇತ್ತೀಚಿನ ಸುದ್ದಿಗಳು